ಗೊಳಸಂಗಿ ಸಮೀಪದ ತೆಲಗಿ ಗ್ರಾಮದ ಶ್ರೀನಿವಾಸ ಬೆಟಗೇರಿ ಅವರ ಮನೆಗೆ ಗಂಗಾವತಿ ಶಾಸಕ ಜನಾರ್ದನ ರಡ್ಡಿ ಭೇಟಿ ನೀಡಿದರು. ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ಪ್ರಕಾಶ ರಡ್ಡಿ, ಸಂಜೀವ ಬೆಟಗೇರಿ ಮತ್ತಿತರರಿದ್ದಾರೆ. 
ವಿಜಯಪುರ

ಭವಿಷ್ಯದಲ್ಲಿ ಉತ್ತರ ಕರ್ನಾಟಕ ಔದ್ಯೋಗಿಕ ತಾಣ

ಪ್ರಮುಖ ಮುಖ್ಯಾಂಶಗಳು

  • ತೆಲಗಿ ಗ್ರಾಮಕ್ಕೆ ಶಾಸಕ ಜನಾರ್ಧನ ರಡ್ಡಿ ಭೇಟಿ
  • ಬೆಳ್ಳುಬ್ಬಿ ಒಡೆತನದ ಸಕ್ಕರೆ ಕಾರ್ಖಾನೆ ಪೂರ್ವ ಸಿದ್ಧತೆ ಪರಿಶೀಲನೆ
ಗೊಳಸಂಗಿ: ನಿರಂತರ ಬರಗಾಲ, ನಿರುದ್ಯೋಗದ ಬವಣೆಯಲ್ಲಿ ಬಸವಳಿದಿದ್ದ ಉತ್ತರ ಕರ್ನಾಟಕ ಭವಿಷ್ಯದಲ್ಲಿ ಸಾವಿರಾರು ಯುವಕರಿಗೆ ಉದ್ಯೋಗ ನೀಡುವ ಔದ್ಯೋಗಿಕ ತಾಣವಾಗಲಿದೆ ಎಂದು ಗಂಗಾವತಿ ಶಾಸಕ ಜನಾರ್ದನ ರಡ್ಡಿ ಭರವಸೆ ನೀಡಿದರು.
ಬಾಗಲಕೋಟೆ ಉಪಚುನಾವಣೆ ಪ್ರಚಾರಾರ್ಥವಾಗಿ ಈ ಭಾಗಕ್ಕೆ ಬಂದಿದ್ದ ಅವರು ತೆಲಗಿ ಗ್ರಾಮದ ಶ್ರೀನಿವಾಸ ಬೆಟಗೇರಿ ಅವರ ಮನೆಗೆ ಸೋಮವಾರ ಖಾಸಗಿಯಾಗಿ ಭೇಟಿ ನೀಡಿ ನಂತರ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಅವರ ಒಡೆತನದ ನಿಯೋಜಿತ ಸಕ್ಕರೆ ಕಾರ್ಖಾನೆ ಪೂರ್ವ ಸಿದ್ಧತೆ ಪರಿಶೀಲಿಸಿ ಅವರು ಮಾತನಾಡಿದರು.
ಈ ಭಾಗದ ಯುವಕರು ಇದುವರೆಗೆ ಪದವಿ ಶಿಕ್ಷಣ ಮುಗಿಸಿ ಉದ್ಯೋಗ ಅರಸಿ ದೂರದ ಬೆಂಗಳೂರಿಗೆ ಹೆತ್ತವರನ್ನು ಬಿಟ್ಟು ಹೋಗುತ್ತಿದ್ದರು. ಇನ್ನು ಮುಂದೆ ಇದೇ ಭಾಗದಲ್ಲಿ ಸಾವಿರಾರು ಯುವಕರಿಗೆ ಉದ್ಯೋಗ ನೀಡುವ ಕೈಗಾರಿಕೆ ಉದ್ಯಮಗಳು ತಲೆ ಎತ್ತಲಿವೆ. ಹೀಗಾಗಿ ಈ ಭಾಗದ ಯುವಕರು ಇನ್ನು ಮುಂದೆ ನಿರುದ್ಯೋಗದ ಸಮಸ್ಯೆ ಎದುರಿಸಬೇಕಿಲ್ಲ ಎಂದರು.
ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ಪ್ರಕಾಶ ರಡ್ಡಿ, ಸಂಜೀವ ಬೆಟಗೇರಿ, ಮಲ್ಲಿಕಾರ್ಜುನ ಬೆಳ್ಳುಬ್ಬಿ ಮತ್ತಿತರರಿದ್ದರು.