ವಿಜಯಪುರ: ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಸೂತ್ರದಡಿ ನಾಗಠಾಣ ಕ್ಷೇತ್ರ ಜೆಡಿಎಸ್‌ಗೆ ಮೀಸಲಾಗಲಿದ್ದು, ಜಿಲ್ಲೆಯಲ್ಲಿ ಒಟ್ಟು ನಾಲ್ಕು ಕಡೆ ಜೆಡಿಎಸ್ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆಂದು ಮಾಜಿ ಶಾಸಕ ದೇವಾನಂದ ಚವಾಣ್ ತಿಳಿಸಿದರು.
ಈಗಾಗಲೇ ಜೆಡಿಎಸ್‌ನ ರಾಷ್ಟ್ರೀಯ ಅಧ್ಯಕ್ಷರಾಗಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ವಿಜಯಪುರದಲ್ಲಿ ನಡೆದ ಸಮಾವೇಶದಲ್ಲಿ ಈ ಭರವಸೆ ನೀಡಿದ್ದಾರೆ. ಎಂಟು ಕ್ಷೇತ್ರಗಳ ಪೈಕಿ ನಾಲ್ಕು ಕಡೆ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ತಿಳಿಸಿದ್ದಾರೆ. ಹೀಗಾಗಿ ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ನಾಲ್ಕು ಕ್ಷೇತ್ರ ಜೆಡಿಎಸ್‌ಗೆ ಮೀಸಲಾಗಿರಲಿದ್ದು, ಹೊಂದಾಣಿಕೆ ಸೂತ್ರದಡಿ ಎಲ್ಲ ಕ್ಷೇತ್ರಗಳಲ್ಲಿಯೂ ಮೈತ್ರಿ ಅಭ್ಯರ್ಥಿಗಳಿಗೆ ಗೆಲುವು ಸಿಗಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ವಿಶ್ವಾಸ ವ್ಯಕ್ತಪಡಿಸಿದರು.
ದೇವರಹಿಪ್ಪರಗಿ, ಇಂಡಿ, ಬಸವನಬಾಗೇವಾಡಿ ಹಾಗೂ ನಾಗಠಾಣ ಕ್ಷೇತ್ರ ಜೆಡಿಎಸ್‌ಗೆ ಸಿಗುವ ಸುಳಿವು ನೀಡಿದ್ದಾರೆ. ಈ ಕ್ಷೇತ್ರಗಳಲ್ಲಿ ಜೆಡಿಎಸ್‌ಗೆ ಹೆಚ್ಚಿನ ಬಲ ಇದೆ. ಆದ್ದರಿಂದ ಮುಂಬರುವ ಚುನಾವಣೆ ಕಾಂಗ್ರೆಸ್ ಪಾಲಿಗೆ ನಿರಾಶಾದಾಯಕವಾಗಿದೆ ಎಂದರು.
ಪ್ರಸ್ತುತ ಕಾಂಗ್ರೆಸ್ ಆಡಳಿತ ವಿರೋಧಿ ಅಲೆ ಇದೆ. ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಜನ ಬೇಸತ್ತಿದ್ದಾರೆ. ಭೀಕರ ಬರ ಆವರಿಸಿದ್ದು ಜನರ ಸಂಕಷ್ಟ ನಿವಾರಿಸಲಾಗದ ಸ್ಥಿತಿ ನಿರ್ಮಾಣವಾಗಿದೆ. ನಾಗಠಾಣ ಕ್ಷೇತ್ರದ ಶಾಸಕರ ನಿರ್ಧಾರವೇ ತಮ್ಮ ಕೈಯಲ್ಲಿಲ್ಲ. ಶಾಸಕರು ಜನರ ಸಮಸ್ಯೆ ಬಗೆ ಹರಿಸುವ ಬದಲು ದಾಬಾಗಳ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆಂದು ಲೇವಡಿ ಮಾಡಿದರು.
ಇದೀಗ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಾಗಿ ಸಿದ್ಧತೆ ನಡೆದಿದೆ. ಈಗಾಗಲೇ ಮೀಸಲಾತಿಯ ಕರಡು ಪಟ್ಟಿಯೂ ಪ್ರಕಟಗೊಂಡಿದೆ. ಈ ಚುನಾವಣೆಯಲ್ಲಿಯೂ ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಸೂತ್ರದಡಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮೈತ್ರಿ ಅಭ್ಯರ್ಥಿಗಳು ಗೆಲುವು ಸಾಧಿಸುವ ಸಾಧ್ಯತೆ ದಟ್ಟವಾಗಿದೆ ಎಂದು ದೇವಾನಂದ ಚವಾಣ್ ಪ್ರತಿಕ್ರಿಯಿಸಿದರು.
ಜೆಡಿಎಸ್‌ನಿಂದ ಅಂತರ ಕಾಯ್ದುಕೊಳ್ಳುತ್ತಿರುವ ಕುರಿತ ಚರ್ಚೆಗೆ ಸಂಬಂಧಿಸಿದಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಚವಾಣ್ ಅವರು, ‘ಹಾಗೇನಿಲ್ಲ. ಜೆಡಿಎಸ್‌ನಲ್ಲಿಯೇ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಬೇರುಮಟ್ಟದಲ್ಲಿ ಪಕ್ಷ ಬಲಪಡಿಸಲಾಗುತ್ತಿದೆ. ದೊಡ್ಡ ಪ್ರಮಾಣದಲ್ಲಿ ಸಮಾವೇಶ ಕೂಡ ಸಂಘಟಿಲಾಗಿದೆ. ಮುಂಬರುವ ಚುನಾವಣೆ ಗಮನದಲ್ಲಿರಿಸಿಕೊಂಡು ಪಕ್ಷದ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದೇನೆ’ ಎಂದರು.