ವಿಜಯಪುರ ನಗರದ ಕದಂಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಡಾ.ರಾಜಕುಮಾರ ಜಯಂತಿ ಆಚರಿಸಲಾಯಿತು. ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ್, ಪತ್ರಕರ್ತರಾದ ಅಶೋಕ ಯಡಹಳ್ಳಿ, ಪರಶುರಾಮ ಭಾಸಗಿ, ಶೇಖ್ ಮಾಸ್ತರ್ ಇತರರಿದ್ದಾರೆ.  
ವಿಜಯಪುರ

ಮುತ್ತುರಾಜ ಕರ್ನಾಟಕದ ಶ್ರೇಷ್ಠ ರತ್ನ, ಡಾ.ರಾಜಕುಮಾರ ಜಯಂತಿಯಲ್ಲಿ ಡಾ.ಔದ್ರಾಮ್ ಅಭಿಮತ

ಪ್ರಮುಖ ಮುಖ್ಯಾಂಶಗಳು

  • ಡಾ.ರಾಜಕುಮಾರ ಜಯಂತಿ ಆಚರಣೆ
  • ಕನ್ನಡ-ಸಂಸ್ಕೃತಿ ಇಲಾಖೆ ಸಹಯೋಗ
  • ಜಿಲ್ಲಾಡಳಿತ-ವಾರ್ತಾ ಇಲಾಖೆ ನೇತೃತ್ವ
  • ರಾಜಕುಮಾರ ಹಾಡುಗಳ ಪ್ರಸ್ತುತಿ
ವಿಜಯಪುರ: ನಟನೆಯ ಮೂಲಕ ಜೀವನ ಮೌಲ್ಯಗಳನ್ನು ಬೋಧಿಸಿದ ವರನಟ ಡಾ.ರಾಜಕುಮಾರ ಅವರು ಕನ್ನಡದ ಶ್ರೇಷ್ಠ ರತ್ನ ಎಂದು ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ್ ಹೇಳಿದರು.
ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶುಕ್ರವಾರ ನಡೆದ ಡಾ.ರಾಜಕುಮಾರ ಜನ್ಮದಿನೋತ್ಸವ ಹಾಗೂ ಅವರ ಗೀತೆಗಳ ಗಾಯನ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಡಾ.ರಾಜಕುಮಾರ ಅವರು ತಮ್ಮ ಚಿತ್ರದ ಮೂಲಕ ಸಾಮಾಜಿಕ ಜಾಗೃತಿ ಸಂದೇಶ ಸಾರಿದರು. ಡಾ.ರಾಜಕುಮಾರ ಅವರ ಸರಳತೆ, ಶ್ರೇಷ್ಠತೆ ಎಲ್ಲರಿಗೂ ಸ್ಪೂರ್ತಿ ಎಂದರು.
ಕಾರ್ಯ ನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಅಶೋಕ ಯಡಹಳ್ಳಿ ಉಪನ್ಯಾಸ ನೀಡುತ್ತಾ, ಹಿಂದಿ ಸೇರಿದಂತೆ ಅನೇಕ ಭಾಷೆಗಳಲ್ಲಿ ನಟಿಸುವ ಅವಕಾಶ ಬಂದರೂ ಅದನ್ನು ನಿರಾಕರಿಸಿ ಕನ್ನಡ ಚಿತ್ರಗಳಲ್ಲೇ ನಟಿಸುವೆ ಎಂಬ ರಾಜಕುಮಾರ ಅವರ ನಿಲುವೇ ಕನ್ನಡಾಭಿಮಾನಕ್ಕೆ ದಿವ್ಯ ನಿದರ್ಶನ ಎಂದರು.
ಡಾ.ರಾಜ್ ಅವರ ಚಿತ್ರ ನೋಡಿದಾಗ ನಾವೇ ಪಾತ್ರ ಮಾಡುತ್ತಿದ್ದೇವೆ ಎಂದು ಭಾಸವಾಗುತ್ತದೆ, ಜೀವನದ ಪಾಠ ಅಲ್ಲಿರುತ್ತದೆ ಎಂದರು.
ಗೋಕಾಕ್ ಚಳವಳಿಗೆ ಒಂದು ಹೊಸ ಚೈತನ್ಯ ತುಂಬಿ ಅದರ ಯಶಸ್ವಿ ಹೋರಾಟದಲ್ಲಿಯೂ ಡಾ.ರಾಜ್ ಅವರ ಪಾತ್ರ ಅನನ್ಯ. ಡಾ.ರಾಜಕುಮಾರ ಎಂಬ ಪದಕ್ಕೆ ನಿಜಾರ್ಥ ನೀಡಿದ ರಾಜಕುಮಾರ ಅವರ ವ್ಯಕ್ತಿತ್ವ ಹಿಮಾಲಯ ಪರ್ವತಕ್ಕಿಂತಲೂ ಎತ್ತರ, ಒಂದು ಸಮಾಜವನ್ನು ಸರಿದಾರಿಗೆ ಮುನ್ನಡೆಸುವ ದಿವ್ಯ ಶಕ್ತಿ ಅವರಾಗಿದ್ದರು ಎಂದು ತಿಳಿಸಿದರು.
ಉಪನ್ಯಾಸ ಮಂಡಿಸಿದ ಪತ್ರಕರ್ತ ಪರಶುರಾಮ ಭಾಸಗಿ ಮಾತನಾಡಿ, ಡಾ.ರಾಜಕುಮಾರ ಅವರದ್ದು ಹೋಲಿಕೆಗೆ ನಿಲುಕದ ವ್ಯಕ್ತಿತ್ವ. ಅವರಿಗೆ ಅವರೇ ಸಾಟಿ, ನಾವು ಒಳ್ಳೆಯವರನ್ನು ರಾಜಕುಮಾರ ಅವರಿಗೆ ಹೋಲಿಸುತ್ತೇವೆ, ಓರ್ವ ತಾಯಿ ತನ್ನ ಮಗನನ್ನು ನನ್ನ ಮಗ ರಾಜಕುಮಾರ ಇದ್ದಂತೆ ಇದ್ದಾನೆ ಎಂದು ಅಭಿಮಾನದಿಂದ ಹೇಳುವುದುಂಟು. ಅಭಿಮಾನಕ್ಕೆ ಹೋಲಿಕೆ ಡಾ.ರಾಜ್ ಆಗಿದ್ದಾರೆ ಹೊರತು ರಾಜ್‌ಗೆ ಬೇರೆ ಹೋಲಿಕೆ ಪದಗಳಿಲ್ಲ, ಅವರದ್ದು ವರ್ಣನಾತೀತ ವ್ಯಕ್ತಿತ್ವ, ಅವರ ಬಣ್ಣಿಸಲು ಉಪಮೇಯಗಳೇ ಇಲ್ಲ ಎಂದರು.
ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಎಲ್.ಬಿ. ಶೇಖ್ ಮಾಸ್ತರ್ ಮಾತನಾಡಿ, ಡಾ.ರಾಜಕುಮಾರ ಅವರು ನಾಟಕ ಕಂಪನಿ ಮೂಲಕವೇ ಚಿತ್ರ ರಂಗ ಬೆಳಗಿದ ಮಹಾನ್ ಚೇತನ, ರಂಗಭೂಮಿಯೇ ಅವರ ತಾಯಿಬೇರು ಎಂದರು.
ದಾವಣಗೆರೆಯಲ್ಲಿ ವೃತ್ತಿ ರಂಗಭೂಮಿ ಕಲಾವಿದರ ಸಮಾವೇಶದಲ್ಲಿ ಡಾ.ರಾಜ್ ಅವರು ಭಾಗವಹಿಸಿ ಹುಟ್ಟಿದರೆ ಕನ್ನಡ ನಾಡಿನಲಿ ಹುಟ್ಟಬೇಕು ಎಂದು ಹಾಡಿದ ಆ ಹಾಡಿಗೆ ಹಾರ್ಮೋನಿಯಂ ನುಡಿಸಿದ ಭಾಗ್ಯ ನನ್ನದು ಎಂದರು.
ಪಾಲಿಕೆ ಉಪ ಆಯುಕ್ತ ಮಹಾವೀರ ಬೋರಣ್ಣವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಭೀಮರಾವ ಜಿಗಜಿಣಗಿ, ಸೋಮು ಕಲ್ಲೂರ, ಫಯಾಜ್ ಕಲಾದಗಿ, ಸುರೇಶ ಬಿಜಾಪೂರ, ಶರಣು ಸಬರದ ಇತರರಿದ್ದರು.
ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಅಮರೇಶ ದೊಡಮನಿ ಸ್ವಾಗತಿಸಿದರು. ವಿರೇಶ ವಾಲಿ ಹಾಗೂ ಮಂಜುಳಾ ಹಿಪ್ಪರಗಿ ನಾಡಗೀತೆ ಪ್ರಸ್ತುತ ಪಡಿಸಿದರು. ಸಂಗೀತಾ ಮಠಪತಿ ನಿರೂಪಿಸಿದರು.
ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಸುಮಾರು 70ಕ್ಕೂ ಹೆಚ್ಚು ಕಲಾವಿದರು ರಾಜಕುಮಾರ ಅವರ ಹಾಡು ಮತ್ತು ಸಂಭಾಷಣೆ ಹೇಳುವ ಮೂಲಕ ಅಭಿಮಾನ ಮೆರೆದರು. ಭಾಗವಹಿಸಿದ ಎಲ್ಲ ಕಲಾವಿದರಿಗೆ ಪ್ರಮಾಣ ಪತ್ರ ನೀಡಲಾಯಿತು.
ಬೆಳಗ್ಗೆ 9 ರಿಂದ ಆರಂಭವಾದ ಕಾರ್ಯಕ್ರಮಕ್ಕೆ ಜಿಲ್ಲೆಯ ಕಲಾವಿದರಿಂದ ಸ್ಪಂದನೆ ಅದ್ಭುತವಾಗಿತ್ತು.