ವಿಜಯಪುರ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಮೇಯರ್ ಎಂ.ಎಸ್.ಕರಡಿ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಉಪ ಮೇಯರ್ ಸುಮತ್ರಾ ಜಾಧವ ಇದ್ದಾರೆ.
- ಸದಸ್ಯರಿಂದ ತೀವ್ರ ಅಸಮಾಧಾನ
- ಅಧಿಕಾರಿಗಳ ವಿರುದ್ಧ ಆಕ್ರೋಶ
- ಮೇಯರ್ ಎಂ.ಎಸ್. ಕರಡಿ ಅಧ್ಯಕ್ಷತೆಯಲ್ಲಿ ಸಭೆ
ವಿಜಯಪುರ: ಹದಗೆಟ್ಟ ರಸ್ತೆಗಳು, ಕುಡಿಯುವ ನೀರಿನ ಸಮಸ್ಯೆ, ಬೀದಿ ದೀಪಗಳ ಅಸಮರ್ಪಕ ನಿರ್ವಹಣೆ, ಮರೀಚಿಕೆಯಾದ ಸ್ವಚ್ಛತೆ, ನಿರ್ವಹಣೆ ಕಾಣದ ಚರಂಡಿ ವ್ಯವಸ್ಥೆ ಸೇರಿ ಸಾರ್ವಜನಿಕರ ವಿವಿಧ ಜ್ವಲಂತ ಸಮಸ್ಯೆಗಳಿಗೆ ಸಂಬಂಧಿಸಿದ ಚರ್ಚೆಗಳು ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿದವು.
ಜಲನಗರದ ಮಹಾನಗರ ಪಾಲಿಕೆಯ ನೂತನ ಸಭಾಂಗಣದಲ್ಲಿ ಗುರುವಾರ ಮೇಯರ್ ಎಂ.ಎಸ್. ಕರಡಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆ ಗೊಂದಲದ ಗೂಡಾಯಿತಲ್ಲದೇ ಅನೇಕ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಬಿಸಿ ಬಿಸಿ ಚರ್ಚೆಗೆ ವೇದಿಕೆ ಕಲ್ಪಿಸಿತು. ಮೂಲಸೌಕರ್ಯಗಳಿಗೆ ಸಂಬಂಧಿಸಿದಂತೆ ಸದಸ್ಯರು ಪಕ್ಷಾತೀತವಾಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಅವೈಜ್ಞಾನಿಕ ರಸ್ತೆ ಕಾಮಗಾರಿ, ಸಾರ್ವಜನಿಕ ಜಾಗಗಳ ಅತಿಕ್ರಮಣ, ಶುದ್ಧ ಕುಡಿಯುವ ನೀರಿನ ಪೂರೈಕೆ ಕುರಿತು ಸದಸ್ಯರು ಸುದೀರ್ಘವಾಗಿ ಚರ್ಚಿಸಿದರು. ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಒಟ್ಟಾಗಿ ಹರಿಹಾಯ್ದರು. ಕರ್ತವ್ಯ ನಿರ್ವಹಿಸುವಲ್ಲಿ ವಿಫಲರಾದ ಅಧಿಕಾರಿ ಮೇಲೆ ತ್ವರಿತ ಕ್ರಮಕ್ಕಾಗಿ ಮೇಯರ್ ಮತ್ತು ಆಯುಕ್ತರಿಗೆ ದುಂಬಾಲು ಬಿದ್ದರು. ಬಳಿಕ ಸೂಕ್ತ ಸಮಜಾಯಿಷಿ ನೀಡಿ ಸದಸ್ಯರನ್ನು ಸಮಾಧಾನ ಪಡಿಸಿದ ಮೇಯರ್ ಕರಡಿ ಅವರು, ಸದಸ್ಯರ ಅಹವಾಲುಗಳಿಗೆ ತ್ವರಿತವಾಗಿ ಸ್ಪಂದಿಸಲು ಕಾಲಮಿತಿ ನಿಗದಿಪಡಿಸಿದರು.
ಕಸ ವಿಲೇವಾರಿ ಸಮರ್ಪಕವಾಗಿಲ್ಲದ ಕಾರಣ ಕೆಲವು ಸದಸ್ಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕಸ ವಿಲೇವಾರಿ ಸಿಬ್ಬಂದಿ ವೇತನ, ಉದ್ಯಾನ ನಿರ್ವಹಣೆ ಸಿಬ್ಬಂದಿಯ ವೇತನ ಸಕಾಲಕ್ಕೆ ಪಾವತಿಯಾಗುತ್ತಿಲ್ಲ. ಈ ಕುರಿತು ಸದಸ್ಯ ಶಿವರುದ್ರ ಬಾಗಲಕೋಟ ತೀವ್ರ ಆಕ್ರೋಶ ಹೊರಹಾಕಿದರು.
ವಾಹನಗಳ ನಿರ್ವಹಣೆ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತಲ್ಲದೇ ಕಾರ್ಮಿಕರ ಸಂಬಳಕ್ಕಾಗಿ ಸದಸ್ಯ ಶಿವರುದ್ರ ಬಾಗಲಕೋಟೆ, ರಾಹುಲ್ ಜಾಧವ ಮತ್ತಿತರರು ಒತ್ತಾಯಿಸಿದರು. ಬಡಾವಣೆಗಳಲ್ಲಿ ಸ್ವಚ್ಛತೆ ಕೈಗೊಳ್ಳಲು ಪೌರಕಾರ್ಮಿಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡುವಂತೆ ಆಗ್ರಹಿಸಿದರು. ಆಯುಕ್ತ ವಿಜಯಕುಮಾರ ಮೆಕ್ಕಳಕಿ ಸದಸ್ಯರ ಅಹವಾಲು ಸ್ವೀಕರಿಸಿ ತ್ವರಿತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ವಿದ್ಯುತ್ ಸಮಸ್ಯೆ
ಬೇಸಿಗೆಯ ತೀವ್ರತೆ ಅಧಿಕವಾಗಿದೆ. ವಿದ್ಯುತ್ ವೋಲ್ಟೇಜ್ ಸಮಸ್ಯೆಯಿಂದಾಗಿ ಫ್ಯಾನ್‌ಗಳು, ಏರ್‌ಕೂಲರ್‌ಗಳು ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ಹೆಸ್ಕಾಂ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡುವಂತೆ ಸದಸ್ಯೆ ವಿಮಲಾ ರಫೀಕಅಹ್ಮದ್ ಖಾನೆ ಆಗ್ರಹಿಸಿದರು.
ವಾರ್ಡ್‌ನಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಸಾಕಷ್ಟು ಬಾರಿ ಅಧಿಕಾರಿಗಳಿಗೆ ಹೇಳಿದರೂ ಕ್ಯಾರೆ ಎನ್ನುತ್ತಿಲ್ಲ. ಪ್ರತಿ ಬಾರಿಯೂ ಸಮಸ್ಯೆ ಹೇಳುವುದು ಬಳಿಕ ಮನೆಗೆ ನಿರ್ಗಮಿಸುವುದೇ ಆಗಿದೆ ವಿನಃ ಪರಿಹಾರ ಮಾತ್ರ ಶೂನ್ಯ ಎಂದು ವಿಮಲಾ ಅಸಮಾಧಾನ ಹೊರಹಾಕಿದರು.
ಮೈಸೂರಿನಲ್ಲಿ 65 ವಾರ್ಡ್‌ಗಳಿದ್ದರೂ ತ್ವರಿತವಾಗಿ ಸಮಸ್ಯೆ ಬಗೆ ಹರಿಯುತ್ತದೆ. ಆದರೆ, ವಿಜಯಪುರದಲ್ಲಿ ಕೇವಲ 35 ವಾರ್ಡಗಳಿದ್ದರೂ ಪರಿಹಾರ ಮಾತ್ರ ಇಲ್ಲ. ಕುಡಿಯುವ ನೀರು ಪೂರೈಕೆಯಂತೂ ಮರೀಚಿಕೆಯಾಗಿದೆ, ಈ ರೀತಿಯಾದರೆ ಬದುಕುವುದಾದರೂ ಹೇಗೆ? ಎಂದು ಪ್ರಶ್ನಿಸಲಾಗಿ ವಿಮಲಾ ಅವರಿಗೆ ಇನ್ನುಳಿದ ಸದಸ್ಯರು ಬೆಂಬಲವಾಗಿ ನಿಂತರು.
ರಾಜಕಾಲುವೆ ಸ್ವಚ್ಛತೆ
ವಾರ್ಡ್ ನಂ.33 ರಲ್ಲಿ ರಾಜಕಾಲುವೆ ಸ್ವಚ್ಚಗೊಳಿಸುವ ಕಾರ್ಯ ಜೆಸಿಬಿಯಿಂದ ನಡೆಯುತ್ತಿದೆ, ಇದರಿಂದ ಯಾವ ಪ್ರಯೋಜನವೂ ಇಲ್ಲ, ಅದನ್ನು ಶಾಶ್ವತವಾದ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಕಾಮಗಾರಿ ಕೈಗೊಳ್ಳಿ, ನಾನು ಎಷ್ಟು ಬಾರಿ ಈ ವಿಷಯವನ್ನು ಪ್ರಸ್ತಾಪಿಸಬೇಕೋ ನೀವೇ ಹೇಳಿ? ಎಂದು ಸದಸ್ಯೆ ಆರತಿ ಶಹಾಪುರ ಹರಿಹಾಯ್ದರು.
ನಮ್ಮ ವಾರ್ಡ್ ಜನತೆಯ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ, ದಿನ ಬೆಳಗಾದರೆ ಮಾಧ್ಯಮಗಳು ಈ ವಿಷಯವನ್ನು ಪ್ರಸ್ತಾಪಿಸಿ ಚಾಟಿ ಬೀಸುತ್ತಿವೆ, ನಾನು ಎಲ್ಲಿಗೆ ಹೋಗಿ ಹೇಳಲಿ? ಎಂದು ಆಕ್ರೋಶ ಹೊರಹಾಕಿದರು.
ಆಗ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಈಗಾಗಲೇ ರಾಜಕಾಲುವೆ ಸ್ವಚ್ಚಗೊಳಿಸುವ ಕೆಲಸ ಆರಂಭವಾಗಿದೆ ಎಂದರು. ಆಗ ಅಸಮಾಧಾನ ಹೊರ ಹಾಕಿದ ಆರತಿ ಶಹಾಪೂರ, ಜೆಸಿಬಿಯಿಂದ ಯಾವ ಪ್ರಯೋಜನವೂ ಇಲ್ಲ, ಅದರಿಂದ ಯಾವ ಪರಿಹಾರವೂ ದೊರಕಲ್ಲ, ಕೂಡಲೇ ಅದನ್ನು ಮುಚ್ಚುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಿ ಎಂದರು.
ಪರಿಸರ ದಿನಾಚರಣೆ ಎಂದು ದೊಡ್ಡ ದೊಡ್ಡ ಫೋಟೊ ಹಾಕಿ ಪ್ರಚಾರ ಪಡೆಯುತ್ತೀರಿ ಆದರೆ ಗಿಡಗಳಿಗೆ ನೀರು ಹಾಕುವ ಕೆಲಸವೇ ನಡೆಯುತ್ತಿಲ್ಲ, ಈ ಬೇಸಿಗೆಯಲ್ಲಿ ಗಿಡಗಳಿಗೆ ನೀರೇ ಇಲ್ಲ, ಹೀಗಾಗಿ ಪಾಪ ಆ ಜೀವಗಳಿಗೆ ಹಾನಿ ಮಾಡುವುದಾದರೆ ಗಿಡಗಳನ್ನೇ ಹಚ್ಚಬೇಡಿ, ಹಚ್ಚುವುದಾದರೂ ಅವುಗಳನ್ನು ಸೂಕ್ತ ರೀತಿಯಲ್ಲಿ ಪೋಷಿಸಿ ಎಂದರು.