ವಿಜಯಪುರ: ‘ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣ ಹೆಚ್ಚಿಸಿರುವ ಈ ಹಿಂದಿನ ಬಿಜೆಪಿ ಸರ್ಕಾರದ ಕ್ರಮ ಅಸಾಂವಿಧಾನಿಕ ಎಂದು ಆದೇಶಿಸಿರುವ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ದಲಿತ ಪರವಾದ ತನ್ನ ಬದ್ಧತೆ ಹಾಗೂ ನಿಲುವು ಸಾಬೀತುಪಡಿಸಬೇಕು’ ಎಂದು ಸಂಸದ ರಮೇಶ ಜಿಗಜಿಣಗಿ ಆಗ್ರಹಿಸಿದರು.
ಈ ಹಿಂದೆ 2022ರಲ್ಲಿ ಬಿಜೆಪಿ ಸರ್ಕಾರ ವಿಶೇಷ ಕಾಯ್ದೆಯ ಮೂಲಕ ಪರಿಶಿಷ್ಟ ಜಾತಿ (ಎಸ್ಸಿ) ಮೀಸಲಾತಿಯನ್ನು ಶೇ. 15 ರಿಂದ ಶೇ. 17ಕ್ಕೆ ಹಾಗೂ ಪರಿಶಿಷ್ಟ ಪಂಗಡ (ಎಸ್ಟಿ) ಮೀಸಲಾತಿಯನ್ನು ಶೇ. 3 ರಿಂದ ಶೇ. 7ಕ್ಕೆ ಹೆಚ್ಚಿಸಿ ತನ್ನ ಬದ್ಧತೆ ಮತ್ತು ಕಾಳಜಿಯನ್ನು ಪ್ರದರ್ಶಿಸಿತ್ತು. ಆದರೆ, ಅದನ್ನು ಖಂಡಿಸಿ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಪೂರಕವಾಗಿ ಪ್ರಕರಣ ಮುನ್ನಡೆಸುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಪರಿಣಾಮ ಹೈಕೋರ್ಟ್ ಈ ಕ್ರಮ ಅಸಂವಿಧಾನಿಕ ಎಂದು ಘೋಷಿಸಿ ಈ ಹೆಚ್ಚಳದ ಆದೇಶ ರದ್ದುಗೊಳಿಸಿದೆ. ಇದಕ್ಕೆ ಕಾಂಗ್ರೆಸ್ ಪಕ್ಷದ ಅಸಮರ್ಪಕ, ಅವೈಜ್ಞಾನಿಕ ಹಾಗೂ ತಾತ್ಸಾರ ಮತ್ತು ನಿರ್ಲಕ್ಷಿತ ಧೋರಣೆಯೇ ಕಾರಣ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
‘ಬಿಜೆಪಿಯ ಈ ನಿರ್ಧಾರ ಅಸಾಂವಿಧಾನಿಕ ಎನ್ನುವವರು ಇತರೆ ರಾಜ್ಯಗಳಲ್ಲಿ ಈಗಾಗಲೇ ಮೀಸಲಾತಿ ಪ್ರಮಾಣವನ್ನು ಶೇ.50ಕ್ಕಿಂತ ಹೆಚ್ಚಿಸಿರುವುದನ್ನು ಮನಗಾಣಬೇಕು. ತಮಿಳುನಾಡು ಸೇರಿ ವಿವಿಧ ರಾಜ್ಯಗಳಲ್ಲಿ ಮೀಸಲಾತಿಯ ಗಡಿ ಶೇ.50 ದಾಟಿದೆ. ಕಾನೂನಾತ್ಮಕ ರಕ್ಷಣೆಯ ಅಡಿಯಲ್ಲಿಯೇ ಈ ಮೀಸಲಾತಿ ಪ್ರಮಾಣವನ್ನು ಅನುಷ್ಟಾನಕ್ಕೆ ತರಲಾಗಿದೆಯಲ್ಲದೇ ಆ ಪ್ರಕಾರ ಈಗಾಗಲೇ ನೇಮಕ, ಪ್ರವೇಶ ಪ್ರಕ್ರಿಯೆ ಕೂಡ ನಡೆಸಲಾಗಿದೆ. ಇದೀಗ ನ್ಯಾಯಾಲಯದ ಆದೇಶದಿಂದಾಗಿ ಫಲಾನುಭವಿಗಳ ಭವಿಷ್ಯದ ಮೇಲೆ ಕಾರ್ಮೊಡ ಕವಿದಂತಾಗಿದೆ. ಹೀಗಾಗಿ ಇತರೆ ರಾಜ್ಯಗಳ ಮಾದರಿಯಲ್ಲಿಯೇ ಕಾನೂನಾತ್ಮಕ ರಕ್ಷಣೆಯ ಮೂಲಕ ಹೆಚ್ಚಳಗೊಂಡ ಮೀಸಲಾತಿಯ ಪ್ರಮಾಣವನ್ನು ಯಥಾವತ್ತಾಗಿ ಅನುಷ್ಟಾನಗೊಳಿಸಬೇಕು. ಅದಕ್ಕಾಗಿ ಸುಪ್ರೀಂ ಕೋರ್ಟ್ನಲ್ಲಿ ಹೋರಾಟ ನಡೆಸಬೇಕು’ ಎಂದು ಒತ್ತಾಯಿಸಿದರು.
‘ಮಾತೆತ್ತಿದರೆ ಕಾಂಗ್ರೆಸ್ನವರು ದಲಿತ ಪರ ಎಂದು ಭಾಷಣ ಬಿಗಿಯುತ್ತಾರೆ. ಮುಂಜಾನೆ ದಲಿತ, ಮಧ್ಯಾಹ್ನ ಅಲ್ಪಸಂಖ್ಯಾತ, ಸಂಜೆ ಹಿಂದುಳಿದ ವರ್ಗ ಎಂದು ಭಾಷಣ ಬಿಗಿಯುವ ಕಾಂಗ್ರೆಸ್ಸಿಗರು ಇದೀಗ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಬೇಕಲ್ಲದೇ ಹಿಂದಿನ ಬಿಜೆಪಿ ಸರ್ಕಾರದ ಕ್ರಮಕ್ಕೆ ನ್ಯಾಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಲೋಪಗಳಿದ್ದರೆ ಸರಿಪಡಿಸಬೇಕು ವಿನಃ ಇಡೀ ಪ್ರಕ್ರಿಯೆಯನ್ನೇ ರದ್ದುಗೊಳಿಸಬಾರದು. ಕೈಗಾದ ಗಾಯಕ್ಕೆ ಔಷಧ ನೀಡಬೇಕು ವಿನಃ ಇಡೀ ಕೈಯನ್ನೇ ಕತ್ತರಿಸಬಾರದು. ಕಾನೂನಾತ್ಮಕ ತೊಡಕುಗಳಿದ್ದರೆ ಅದನ್ನು ಸರಿಪಡಿಸಬೇಕು. ಇತರೆ ರಾಜ್ಯಗಳನ್ನೂ ಮಾದರಿಯಾಗಿಟ್ಟುಕೊಳ್ಳಬೇಕು’ ಎಂದರು.
‘ಈಗಾಗಲೇ ಹೈಕೋರ್ಟ್ನಲ್ಲಿ ಪ್ರಕರಣಕ್ಕೆ ನ್ಯಾಯ ಒದಗಿಸುವಲ್ಲಿ ವಿಫಲವಾದ ಕಾಂಗ್ರೆಸ್ ಸರ್ಕಾರದ ಸರ್ವೋಚ್ಛ ನ್ಯಾಯಾಲಯದಲ್ಲಿಯಾದರೂ ಪ್ರಶ್ನಿಸಿ ಈ ಹಿಂದಿನ ಸರ್ಕಾರದ ಕ್ರಮ ಸಮರ್ಪಕವೆಂದು ಮನವರಿಕೆ ಮಾಡಿ ಕಾರ್ಯರೂಪಕ್ಕೆ ತರುವ ಪ್ರಯತ್ನ ಮಾಡಬೇಕು. ಇಲ್ಲವಾದಲ್ಲಿ ಮುಂಬರುವ ಚುನಾವಣೆಯಲ್ಲಿ ದಲಿತ ಪರ, ಹಿಂದುಳಿದ ಪರ, ಅಲ್ಪಸಂಖ್ಯಾತ ಪರ ಎಂದು ಭಾಷಣ ಬಿಗಿಯಲು ಮುಂದಾದರೆ ಆಯಾ ಸಮುದಾಯಗಳು ತಕ್ಕ ಶಾಸ್ತಿ ಮಾಡದೇ ಬಿಡುವುದಿಲ್ಲ. ಎಚ್ಚರ’ ಎಂದರು.
ಮುಖಂಡರಾದ ಚಿದಾನಂದ ಚಲವಾದಿ, ಈರಣ್ಣ ರಾವೂರ, ಸಾಬು ಮಾಶ್ಯಾಳ, ವಿಜಯ ಜೋಷಿ ಇತರರಿದ್ದರು.