- ಶಾಲೆ ಮಾನ್ಯತೆ-ನವೀಕರಣದ ಹೆಸರಲ್ಲಿ ಲೂಟಿ
- ರಾಜ್ಯದಲ್ಲೇ ದೊಡ್ಡ ಮಟ್ಟದ ಅಕ್ರಮ ಬಯಲು
- ಉನ್ನತ ಮಟ್ಟದ ತನಿಖೆ ನಡೆಸಲು ಒತ್ತಾಯ
- ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಆಗ್ರಹ
ವಿಜಯಪುರ: ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಮಾನ್ಯತೆ ನವೀಕರಣ ಹಾಗೂ ಪ್ರಥಮ ಮಾನ್ಯತೆ ನೀಡುವಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದರೂ ಈವರೆಗೆ ಕಠಿಣ ಕ್ರಮ ಕೈಗೊಳ್ಳದಿರುವ ಕಾಂಗ್ರೆಸ್ ಸರ್ಕಾರದ ಜೀವಂತಿಕೆ ಬಗ್ಗೆ ಅನುಮಾನ ಮೂಡುತ್ತಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹರಿಹಾಯ್ದಿದ್ದಾರೆ.
ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ನಡೆದಿರುವ ಅಕ್ರಮದ ಕುರಿತು ರಾಜ್ಯಮಟ್ಟದಲ್ಲಿ ಚರ್ಚೆಯಾಗುತ್ತಿದ್ದರೂ ಈವರೆಗೆ ಸಂಬಂಧಿಸಿದ ಅಧಿಕಾರಿ ಹಾಗೂ ಸಿಬ್ಬಂದಿ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗಿಲ್ಲ. ಕೇವಲ 14 ಸಿಬ್ಬಂದಿಯನ್ನು ಅನ್ಯ ಕಡೆ ನಿಯೋಜನೆಗೊಳಿಸಿದ್ದು ಬಿಟ್ಟರೆ ಪ್ರಕರಣದ ಸಂಪೂರ್ಣ ತನಿಖೆ ಆಧರಿಸಿ ಕಠಿಣ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವುದನ್ನು ಗಮನಿಸಿದರೆ ಅಕ್ರಮದಲ್ಲಿ ರಾಜ್ಯ ಸರ್ಕಾರದ ಕೈವಾಡ ಇಲ್ಲದಿರಲು ಸಾಧ್ಯವಿಲ್ಲ ಎಂದಿದ್ದಾರೆ.
ರಾಜ್ಯದಲ್ಲೇ ಅತೀ ಹೆಚ್ಚು ಶಾಲೆಗಳಿಗೆ ಮಾನ್ಯತೆ ನವೀಕರಣ ಹಾಗೂ ಪ್ರಥಮ ಮಾನ್ಯತೆ ನೀಡಿದ ಜಿಲ್ಲೆ ವಿಜಯಪುರವಾಗಿದೆ. ಈ ಪ್ರಕ್ರಿಯೆಯಲ್ಲಿ ತಮ್ಮ ಲಾಗಿನ್ ದುರ್ಬಳಕೆಯಾಗಿದೆ ಎಂದು ಡಿಡಿಪಿಐ ಫೆ.25ರಂದು ಎಫ್‌ಐಆರ್ ಕೂಡ ದಾಖಲಿಸಿದ್ದಾರೆ. ತಮಗೇ ಗೊತ್ತಿಲ್ಲದಂತೆ ತಮ್ಮ ಲಾಗಿನ್ ಬಳಸಿ ಶಾಲೆಗಳಿಗೆ ನವೀಕರಣ ಹಾಗೂ ಪ್ರಥಮ ಮಾನ್ಯತೆ ನೀಡಲಾಗಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ. ಒಟ್ಟು 58 ಶಾಲೆಗಳ ನವೀಕರಣ ಹಾಗೂ ಪ್ರಥಮ ಮಾನ್ಯತೆಯಲ್ಲಿ ಅಕ್ರಮ ನಡೆದಿರುವುದಾಗಿ ತಿಳಿಸಿದ್ದಾರೆ. ಈ 58 ಶಾಲೆಗಳ ಪೈಕಿ ಬಹುತೇಕ ಶಾಲೆಗಳಿಗೆ ಅನುಮತಿ ನೀಡುವಂತೆ ಕಾಂಗ್ರೆಸ್ ಶಾಸಕರೇ ಪತ್ರ ಬರೆದಿದ್ದಾರೆ. ಹಾಗಾದರೆ ಇದರಲ್ಲಿ ಶಾಸಕರ ಕೈವಾಡ ಇಲ್ಲದಿರಲು ಹೇಗೆ ಸಾಧ್ಯ? ಅವರನ್ನು ಈವರೆಗೆ ತನಿಖೆಗೆ ಒಳಪಡಿಸಿಲ್ಲವೇಕೆ? ಎಂದು ಜಿಗಜಿಣಗಿ ಪ್ರಶ್ನಿಸಿದ್ದಾರೆ.
ಈ 58 ಶಾಲೆಗಳ ಹೊರತಾಗಿಯೂ 200ಕ್ಕೂ ಅಧಿಕ ಶಾಲೆಗಳಿಗೆ ಪ್ರಥಮ ಮಾನ್ಯತೆ ಹಾಗೂ ಮಾನ್ಯತೆ ನವೀಕರಿಸಲಾಗಿದೆ. ಈ ಶಾಲೆಗಳಲ್ಲಿ ಬಹುತೇಕ ಶಾಲೆಗಳು ಅನರ್ಹವಾಗಿವೆ. ಅಲ್ಲದೇ, ಮಾನ್ಯತೆ ನವೀಕರಣ ಮತ್ತು ಪ್ರಥಮ ಮಾನ್ಯತೆಯಲ್ಲಿಯೂ ನಿಯಮ ಉಲ್ಲಂಘಿಸಲಾಗಿದೆ. ಜಿಲ್ಲಾ ಪಂಚಾಯಿತಿ ಸಿಇಒ ರಚಿಸಿ ಸಮಿತಿ ನಡೆಸಿದ ತನಿಖೆಯಲ್ಲಿಯೇ ಇಂಥದ್ದೊಂದು ಅಂಶ ಬಯಲಾದ ಬಗ್ಗೆ ಮಾಧ್ಯಮಗಳಲ್ಲಿಯೂ ವರದಿಯಾಗಿದೆ. ಇನ್ನೊಂದೆಡೆ ಈಗಿರುವ ಮತ್ತು ಹಿಂದಿನ ಅಧಿಕಾರಿ ಮತ್ತು ಸಿಬ್ಬಂದಿ ನಿಯಮ ಉಲ್ಲಂಘಿಸಿರುವುದು, ಕರ್ತವ್ಯ ಲೋಪ ಎಸಗಿರುವ ಬಗ್ಗೆ ವರದಿಯಾದರೂ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳದಿರುವುದನ್ನು ಗಮನಿಸಿದರೆ ಇದರಲ್ಲಿ ಕೆಳ ಹಂತದಿಂದ ಮೇಲಿನ ಹಂತದವರೆಗಿನ ಎಲ್ಲ ಅಧಿಕಾರಿಗಳು ಮತ್ತು ಆಡಳಿತ ಪಕ್ಷದ ನಾಯಕರ ಕೈವಾಡ ಇರುವುದು ಗೋಚರಿಸುತ್ತಿದೆ ಎಂದು ಸಂಸದರು ಅನುಮಾನ ವ್ಯಕ್ತಪಡಿಸಿದ್ದಾರೆ.
ಕೂಡಲೇ ರಾಜ್ಯ ಸರ್ಕಾರ ಈ ಕುರಿತು ಉನ್ನತ ಮಟ್ಟದ ತನಿಖಾ ತಂಡ ರಚಿಸಬೇಕು. ಈಗಿರುವ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ತಾತ್ಕಾಲಿಕವಾಗಿ ಅಮಾನತ್ತಿನಲ್ಲಿಟ್ಟು ಸಮಗ್ರ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳುವ ಮೂಲಕ ತಮ್ಮ ಪ್ರಾಮಾಣಿಕತೆ, ಆಡಳಿತದಲ್ಲಿನ ಪಾರದರ್ಶಕತೆ ಹಾಗೂ ಜೀವಂತಿಕೆಯನ್ನು ಸಾಬೀತುಪಡಿಸಬೇಕು ಎಂದಿರುವ ಅವರು, ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗೂ ರಾಜ್ಯಪಾಲರಿಗೂ ಪತ್ರ ಬರೆಯುತ್ತಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.