ವಿಜಯಪುರ ನಗರದ ಬಿಜೆಪಿ ಕಚೇರಿಯಲ್ಲಿ ಸಂಸದ ರಮೇಶ ಜಿಗಜಿಣಗಿ ಸುದ್ದಿಗೋಷ್ಠಿ ನಡೆಸಿದರು. ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮಾಜಿ ಶಾಸಕರ ರಮೇಶ ಭೂಸನೂರ ಇತರರಿದ್ದಾರೆ.
- ಶ್ರೀಮಂತ ರಾಷ್ಟ್ರಗಳ ಸಾಲಿಗೆ ಸೇರ್ಪಡೆ
- ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಿದ ಭಾರತ
- ಅಭಿವೃದ್ದಿಗೆ ಇನ್ನೊಂದು ಅರ್ಥವೇ ಮೋದಿ
ವಿಜಯಪುರ: ನರೇಂದ್ರ ಮೋದಿ ಆಡಳಿತದಲ್ಲಿ ಭಾರತ ವಿಶ್ವರ ಶ್ರೀಮಂತ ರಾಷ್ಟ್ರಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿದೆ. ಶಕ್ತಿ ಶಾಲಿ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಅಗ್ರ ಸ್ಥಾನ ಪಡೆದಿದೆ. ದೇಶದ ಆರ್ಥಿಕತೆ ಸದೃಢವಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೆಮ್ಮೆ ವ್ಯಕ್ತಪಡಿಸಿದರು.
ನರೇಂದ್ರ ಮೋದಿ ಸಾಧನೆ ಏನು ಎಂದು ಪ್ರಶ್ನಿಸುವವರೊಮ್ಮೆ ಅವಲೋಕಿಸಬೇಕು. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಸರ್ವಕ್ಷೇತ್ರಗಳಲ್ಲಿಯೂ ಪ್ರಗತಿ ಸಾಧಿಸಲಾಗುತ್ತಿದೆ. ಅಂತಾರಾಷ್ಟ್ರೀಯ ವಿದ್ಯಮಾನಗಳಿಂದಾಗಿ ಬೆಲೆ ಏರಿಕೆ ಉಂಟಾಗಿರಬಹುದು. ಆದರೆ, ಇಂಥ ಸ್ಥಿತಿಯಲ್ಲಿ ಕಾಂಗ್ರೆಸ್ ಸರ್ಕಾರವಿದ್ದಿದ್ದೇ ಆದರೆ ದೇಶ ಸಂಪೂರ್ಣ ದಿವಾಳಿಯಾಗಿರುತ್ತಿತ್ತು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಕರ್ನಾಟಕದ ಪಾಲಿನ ಹಣ ಸರಿಯಾಗಿ ಬಂದಿಲ್ಲ ಎಂದು ವಿನಾಕಾರಣ ಕಾಂಗ್ರೆಸ್ ಪಕ್ಷದವರು ಆರೋಪ ಮಾಡುತ್ತಿದ್ದಾರೆ. ಎನ್‌ಡಿಎ ಸರ್ಕಾರ ಯುಪಿಎ ಸರ್ಕಾರಕ್ಕಿಂತ ಹೆಚ್ಚು ಹಣ ನೀಡಿದೆ. ಯುಪಿಎ ಅವಧಿಯಲ್ಲಿ 81,794 ಕೋಟಿ ರೂ. ಹರಿದು ಬಂದರೆ ಎನ್‌ಡಿಎ ಸರ್ಕಾರದ ಅವಧಿಯಲ್ಲಿ 2,96,730 ಕೋಟಿ ರೂ. ಪಾಲು ದೊರಕಿದೆ. ಈ ಕಾಂಗ್ರೆಸ್‌ನವರು ದಿಕ್ಕು ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಹಾತ್ವಾಕಾಂಕ್ಷೆಯ ಜನಧನ ಅಕೌಂಟ್ ಆರಂಭಿಸಿದರು, ಪರಿಣಾಮವಾಗಿ ಕರ್ನಾಟಕದ 2.14 ಕೋಟಿ ಜನರು ಬ್ಯಾಂಕ್ ವ್ಯವಹಾರಕ್ಕೆ ಒಳಪಡುವಂತೆ ಮಾಡಿದ್ದು ಒಂದು ದಾಖಲೆ ಅಲ್ಲವೇ? ಮೊದಲು ಇಂದಿರಾ ಅಕ್ಕ, ಅದಕ್ಕೂ ಮೊದಲು ಅವರ ಅಪ್ಪ, ನಂತರ ಇಂದಿರಕ್ಕನ ಮಗ ಹೀಗೆ ಅವರ ವಂಶಪಾರಂಪರ್ಯವಾಗಿ ಅವರ ಕುಟುಂಬಕ್ಕೆ ಆಡಳಿತ ಮೀಸಲಾದಂತೆ ಇತ್ತು. ಆದರೆ ಜನರಿಗೆ ಕುಡಿಯುವ ನೀರು ಸಹ ಪೂರೈಕೆ ಸಾಧ್ಯವಾಗಿರಲಿಲ್ಲ. ಇಂಥ ಸಂದರ್ಭಲದಲ್ಲಿ ಹರಘರ್ ನಲ್ ಯೋಜನೆಯಡಿ ಪ್ರತಿ ಕುಟುಂಬಕ್ಕೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿದವರು ಮೋದಿ ಎಂದರು.
ಕೋವಿಡ್ ಕಾಲಘಟ್ಟದಲ್ಲಿ ಮೋದಿಜಿ ಅವರು ಬಂಗಾರದಂತಹ ಕೆಲಸ ಮಾಡಿದರು, 280 ಕೋಟಿ ಡೋಸ್ ಲಸಿಕೆ ಉಚಿತವಾಗಿ ಕೊಡುವ ಮೂಲಕ ಜೀವ ಉಳಿಸುವ ಕೆಲಸ ಮಾಡಿದರು, ಆದರೆ ಈ ವೇಳೆ ಕಾಂಗ್ರೆಸ್ ಸರ್ಕಾರ ಇದ್ದರೆ ಬೀದಿ ಬೀದಿಗೆ ಹಣಗಳ ರಾಶಿ ಬೀಳುತ್ತಿತ್ತು ಎಂದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ
ರಾಜ್ಯ ಸರ್ಕಾರ ಒಂದೇ ಒಂದು ಅಭಿವೃದ್ಧಿ ಕಾಮಗಾರಿಗೆ ಅಡಿಗಲ್ಲು ಹಾಕಿಲ್ಲ. ರಸ್ತೆಗಳೆಲ್ಲ ಹಾಳಾಗಿವೆ. ಇಂಥ ಸಂದರ್ಭದಲ್ಲಿ ಕೇಂದ್ರ ಸರ್ಕಾರ ರಸ್ತೆಗಳ ಅಭಿವೃದ್ಧಿಗೆ ಅನುದಾನ ನೀಡಿದರೆ ಅದರ ಭೂಮಿ ಪೂಜೆಗೂ ಸಂಸದರಿಗೆ ಆಹ್ವಾನ ನೀಡಲ್ಲ. ಕನಿಷ್ಠ ಪಕ್ಷ ಪ್ರಧಾನಿ ಅವರ ಫೋಟೊ ಹಾಕುವ ಸೌಜನ್ಯ ಕಾಂಗ್ರೆಸ್ಸಿಗರಿಗಿಲ್ಲ. ಹೀಗಾಗಿ ಭೂಮಿ ಪೂಜೆ ಸಮಾರಂಭಗಳಿಗೆ ಹೋಗುವುದನ್ನೇ ಬಿಟ್ಟಿದ್ದೇನೆ ಎಂದು ಜಿಗಜಿಣಗಿ ಅಸಮಾಧಾನ ಹೊರಹಾಕಿದರು.
ನಾನು ನನ್ನ ಫೋಟೋ ಹಾಕಿ ಎಂದು ಹೇಳಲ್ಲ, ಮೋದಿ ಅವರ ಫೋಟೋ ಹಾಕಿ ಎಂದು ಹೇಳಿರುವೆ, ಜಿಲ್ಲಾಡಳಿತಕ್ಕೂ ಹೇಳಿದೆ, ಆದರೆ ಅವರಿಗೂ ಒತ್ತಡ ಇದೆ. ಈ ಕಾರಣಕ್ಕೆ ಸ್ಪಂದನೆ ದೊರಕುವುದಿಲ್ಲ ಎನ್ನುವ ಕಾರಣಕ್ಕೆ ನಾನು ಭೂಮಿ ಪೂಜೆ ಹೋಗುವುದನ್ನೇ ಬಿಟ್ಟಿರುವೆ ಎಂದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಜನರ ವಿಶ್ವಾಸ ಕಳೆದುಕೊಂಡಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ 55 ಸೀಟುಗಳಿಗೂ ಒಂದೇ ಒಂದು ಸೀಟು ಹೆಚ್ಚಾಗಿ ಬಂದರೆ ನೀವು ಹೇಳಿದಂತೆ ಕೇಳುವೆ ಎಂದರು.
ರಿಂಗ್ ರೋಡ್ ನಿರ್ಮಾಣಕ್ಕೆ ಪ್ರಸ್ತಾವನೆ
ಹೆದ್ದಾರಿ ಎಂಬುದೇ ಕಾಂಗ್ರೆಸ್ ಸರ್ಕಾರಕ್ಕೆ ಗೊತ್ತಿರಲಿಲ್ಲ, ಹೆದ್ದಾರಿಗಳ ನಿರ್ಮಾಣಕ್ಕೆ ದಿ.ಅಟಲ್ ಬಿಹಾರಿ ವಾಜಪೇಯಿ ಅವರು ಮಹೋನ್ನತ ಕೊಡುಗೆ ನೀಡಿದರು. ಭಾರತ ಮಾಲಾ ಯೋಜನೆ ತಂದರು. ಮೋದಿ ಅದನ್ನು ಕಾರ್ಯಗತಗೊಳಿಸಿದರು. ವಿಜಯಪುರದಲ್ಲಿಯೇ ಆರು ರಾಷ್ಟ್ರೀಯ ಹೆದ್ದಾರಿಗಳ ಜಾಲ ಇವೆ. ಆರು ರಾಷ್ಟ್ರೀಯ ಹೈವೆಗಳಲ್ಲಿ ಸಂಚರಿಸುವ ವಾಹನಗಳು ನಗರ ಪ್ರವೇಶಿಸದೇ ರಿಂಗ್ ರೋಡ್ ನಿರ್ಮಾಣಕ್ಕೆ ಸಂಬಂಧಿಸಿದಂತೆ 713 ಕೋಟಿ ರೂ. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದ್ದು, ಸಕಾರಾತ್ಮಕ ಸ್ಪಂದನೆ ದೊರಕಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಂದೇ ಭಾರತ ರೈಲು ಸಂಚಾರ ನನ್ನ ಆಶಯ ಸಹ ಹೌದು, ವಂದೇ ಭಾರತ ರೈಲು ಪ್ರಸ್ತುತ ಹಳಿಗಳ ಮೇಲೆ ಸಂಚಾರ ಕಷ್ಟ, ಆದರೆ ಅದನ್ನು ಸಹ ಅಪಗ್ರೇಡ್ ಮಾಡುವ ಕೆಲಸ ನಡೆದಿದೆ, ಮುಂದಿನ ದಿನದಲ್ಲಿ ಆ ಕೆಲಸ ಸಹ ಆಗುವ ಸಾಧ್ಯತೆ ಇದೆ ಎಂದರು.
ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ಮಾಜಿ ಶಾಸಕ ರಮೇಶ ಭೂಸನೂರ, ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮುಖಂಡರಾದ ಸಂಜೀವ ಐಹೊಳಿ, ಸಾಬು ಮಾಶ್ಯಾಳ, ಈರಣ್ಣ ರಾವೂರ, ಸಂದೀಪ ಪಾಟೀಲ ಇತರರಿದ್ದರು.