RAMESH-JIGAJINAGI 
ವಿಜಯಪುರ

ವಜ್ರಹನುಮಾನ್ ರೈಲ್ವೆ ಕೆಳಸೇತುವೆಗೆ ರಾಜ್ಯದ ಅಸಹಕಾರ, ಸಂಸದ ರಮೇಶ ಜಿಗಜಿಣಗಿ ಅಸಮಾಧಾನ

ಪ್ರಮುಖ ಮುಖ್ಯಾಂಶಗಳು

  • ಅನುದಾನ ಬಿಡುಗಡೆಗೆ ವಿಳಂಬ
  • ಪೂರಕ ಕಾಮಗಾರಿ ಕೈಗೊಳ್ಳಲು ಹಿಂದೇಟು
  • ಮಹತ್ತರ ಯೋಜನೆಗೆ ಹಿನ್ನಡೆ
ವಿಜಯಪುರ: ಐತಿಹಾಸಿಕ ವಿಜಯಪುರ ನಗರದ ವಜ್ರಹನುಮಾನ್ ರೈಲ್ವೆ ಗೇಟ್ ಬಳಿ ಕೆಳಸೇತುವೆ ನಿರ್ಮಾಣಕ್ಕೆ ಭಾರತೀಯ ರೈಲ್ವೆ ಇಲಾಖೆ ಸಿದ್ಧತೆ ನಡೆಸಿದೆ. ಆದರೆ, ಮೂಲ ಸೌಕರ್ಯಗಳಿಗೆ ಸಂಬಂಧಿಸಿದಂತೆ ಕಾಮಗಾರಿ ಕೈಗೊಳ್ಳಲು ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿರುವ ಕಾರಣ ಮಹತ್ತರ ಯೋಜನೆಯೊಂದಕ್ಕೆ ಹಿನ್ನಡೆಯುಂಟಾಗುತ್ತಿರುವುದಾಗಿ ಸಂಸದ ರಮೇಶ ಜಿಗಜಿಣಗಿ ಅಸಮಾಧಾನ ಹೊರಹಾಕಿದ್ದಾರೆ.
ಈಗಾಗಲೇ ರಸ್ತೆಯ ಲೆವೆಲ್ ಕ್ರಾಸಿಂಗ್ ಸಂಖ್ಯೆ-80 ರಲ್ಲಿ ರಸ್ತೆ ಕೆಳ ಸೇತುವೆ ನಿರ್ಮಾಣಕ್ಕೆ ಭಾರತೀಯ ರೈಲ್ವೆ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಸಾರ್ವಜನಿಕ ಅನುಕೂಲಕ್ಕಾಗಿ ಹತ್ತಿರದ ಲೆವೆಲ್ ಕ್ರಾಸಿಂಗ್ ಸಂಖ್ಯೆ-80 ರಲ್ಲಿ ಈಗಾಗಲೇ ರಸ್ತೆ ಓವರ್ ಬ್ರಿಡ್ಜ್ (ಆರ್‌ಒಬಿ) ಒದಗಿಸಲಾಗಿದೆ. ಇದರ ಜೊತೆಗೆ ಕಳಸೇತುವೆ ನಿರ್ಮಿಸಲು ಇಲಾಖೆ ಸಂಪೂರ್ಣವಾಗಿ ಸಿದ್ಧವಿದೆ. ಆದರೆ, ರಾಜ್ಯ ಸರ್ಕಾರದ ಅಧೀನದಲ್ಲಿರುವ ಸ್ಥಳೀಯ ಆಡಳಿತದಿಂದ ಪೂರಕ ಕಾಮಗಾರಿ ಕೈಗೊಳ್ಳದಿರುವುದರಿಂದ ಜನರ ಬಹುದಿನದ ಬೇಡಿಕೆ ಈಡೇರಿಕೆಗೆ ತೊಡಕುಂಟಾಗುತ್ತಿದೆ ಎಂದು ತಿಳಿಸಿದ್ದಾರೆ.
ಅಂದಾಜು 14 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲು ಯೋಜನೆ ರೂಪಿಸಲಾಗಿದೆ. ಯೋಜನೆ ಅನುಷ್ಠಾನಗೊಂಡರೆ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಗಲಿದೆ. ಜನರ ಒತ್ತಾಯ ಮತ್ತು ಒತ್ತಾಸೆ ಮೇರೆಗೆ ಅನುದಾನ ಮಂಜೂರಿಸಿ ಕಾಮಗಾರಿ ಕೈಗೊಳ್ಳಲು ಮುಂದಾದರೆ ಸ್ಥಳೀಯ ಸರ್ಕಾರಗಳಿಂದ ಸಹಕಾರ ಅಲಭ್ಯವಾಗಿದೆ. ಕಾಮಗಾರಿ ಸ್ಥಳದಲ್ಲಿ ವಿದ್ಯುತ್ ಮಾರ್ಗಗಳು, ಬಿಎಸ್‌ಎನ್‌ಎಲ್ ಕೇಬಲ್‌ಗಳು, ನೀರು ಸರಬರಾಜು ಪೈಪ್‌ಲೈನ್‌ಗಳು, ಒಳಚರಂಡಿ ವ್ಯವಸ್ಥೆ ಹಾಗೂ ಇತರೆ ಭೂಗತ ಉಪಯುಕ್ತತಾ ಸ್ಥಳಾಂತರ ಕಾಮಗಾರಿಗಳನ್ನು ಸ್ಥಳೀಯ ಸರ್ಕಾರ ನಿರ್ವಹಿಸಬೇಕಾಗಿದೆ. ಅದಕ್ಕಾಗಿ 8 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಪ್ರಸ್ತುತ ರಾಜ್ಯ ಸರ್ಕಾರದಿಂದ ಉಪಯುಕ್ತತಾ ಸ್ಥಳಾಂತರ ಕಾಮಗಾರಿಗಳಿಗೆ ಅಗತ್ಯವಿರುವ ನಿಧಿಯ ಅನುಮೋದನೆ ಇನ್ನೂ ಬಾಕಿ ಇದ್ದು, ಕೂಡಲೇ ಅನುದಾನ ಮಂಜೂರಿಸಬೇಕು. ಇಲ್ಲವಾದಲ್ಲಿ ರೈಲ್ವೆ ಕೆಳಸೇತುವೆ ನಿರ್ಮಾಣದಂಥ ಮಹತ್ತರ ಯೋಜನೆಗೆ ಹಿನ್ನಡೆಯಾಗಲಿದೆ ಎಂದು ಸಂಸದರು ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಅಗತ್ಯವಿರುವ ಹಣವನ್ನು ಎಷ್ಟು ಬೇಗ ಬಿಡುಗಡೆ ಮಾಡುತ್ತದೆಯೋ ಹಾಗೂ ಎಷ್ಟು ಬೇಗ ಸ್ಥಳಾಂತರ ಕಾಮಗಾರಿ ಕೈಗೊಳ್ಳುತ್ತದೋ ಅಷ್ಟು ಬೇಗ ಜನರ ಮಹತ್ತರ ಬೇಡಿಕೆ ಈಡೇರಲಿದೆ. ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ. ಸಂಚಾರ ದಟ್ಟಣೆ ತಗ್ಗಲಿದೆ. ಜನರ ಬಹುದಿನದ ಕನಸು ನನಸಾಗಲಿದೆ ಎಂದು ಸಂಸದ ರಮೇಶ ಜಿಗಜಿಣಗಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.