- ಕಾಂಗ್ರೆಸ್ ಮುಕ್ತ ಭಾರತ ಸನ್ನಿಹಿತ
- ದೇಶದಲ್ಲಿ ಅಶಾಂತಿ ಸೃಷ್ಠಿ ಸಹಿಸಲ್ಲ
- ಕಾಂಗ್ರೆಸ್‌ಗೆ ಜನರಿಂದ ತಕ್ಕ ಪಾಠ ನಿಶ್ಚಿತ
ವಿಜಯಪುರ: ‘ಸಂಸತ್‌ನಲ್ಲಿ ದೇಶದ ಜನರ ಸಮಸ್ಯೆಗಳ ಬಗ್ಗೆ ಚರ್ಚಿಸದೇ ಮುಂಗಾರು ಅಧಿವೇಶನ ಸುಸೂತ್ರವಾಗಿ ನಡೆಸಲು ಬಿಡದೇ, ಅನಿರ್ದಿಷ್ಟಾವಧಿ ಅವಧಿಗೆ ಮುಂದೂಡುವಂತೆ ಮಾಡುವುದೇ ಕಾಂಗ್ರೆಸ್‌ನ ಉದ್ದೇಶವಾಗಿತ್ತು. ದೇಶದಲ್ಲಿ ಅರಾಜಕತೆ ಸೃಷ್ಠಿಸಿಲು ಕಾಂಗ್ರೆಸ್ ಹವಣಿಸುತ್ತಿದ್ದು, ಇದಕ್ಕೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಎಂದಿಗೂ ಅವಕಾಶ ಕೊಡಲ್ಲ’ ಎಂದು ಸಂಸದ ರಮೇಶ ಜಿಗಜಿಣಗಿ ತಿಳಿಸಿದ್ದಾರೆ.
‘ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣದತ್ತ ದೇಶದ ಜನ ಮಹತ್ತರ ಹೆಜ್ಜೆಯನ್ನೇ ಮುಂದಿರಿಸಿದ್ದರಿಂದ ಕಾಂಗ್ರೆಸ್ ಹತಾಶಗೊಂಡಿದೆ. ತನ್ನ ಸೋಲಿಗಾಗಿ ಪದೇ ಪದೇ ಇವಿಎಂ ಯಂತ್ರಗಳನ್ನು ದೂಷಿಸುವುದು, ಕಲಾಪಗಳನ್ನು ಸುಗಮವಾಗಿ ನಡೆಯದಂತೆ ನೋಡಿಕೊಳ್ಳುವುದು, ದಂಗೆಗಳನ್ನು ಎಬ್ಬಿಸುವುದು, ದೇಶದಲ್ಲಿ ಅಶಾಂತಿ ಹರಡುವ ಪ್ರಯತ್ನದಲ್ಲಿ ತಲ್ಲೀನವಾಗಿದೆ. ಜನ ಇದಕ್ಕೆಲ್ಲ ಸೊಪ್ಪು ಹಾಕುವುದಿಲ್ಲವೆಂಬ ಕನಿಷ್ಠ ಪ್ರಜ್ಞೆಯೂ ಕಾಂಗ್ರೆಸ್ಸಿಗರಿಗಿಲ್ಲ’ ಎಂದು ಅವರು ಹರಿಹಾಯ್ದಿದ್ದಾರೆ.
ಮಹತ್ವದ ಮಸೂದೆಗೆ ಅಸ್ತು
ಪ್ರಸಕ್ತ ಅಧಿವೇಶನದಲ್ಲಿ ವಂದೇ ಮಾತರಂ ಮಸೂದೆ ಸೇರಿ 12 ಮಸೂದೆಗಳನ್ನು ಅಂಗೀಕರಿಸಲಾಗಿದೆ. ಕಲಾಪದ ಸಮಯದಲ್ಲಿ ವಿರೋಧ ಪಕ್ಷಗಳ ಸಂಸದರು ಪ್ರತಿಭಟನೆಯಲ್ಲಿ ನಿರತರಾಗಿದ್ದಾಗ 11 ಮಸೂದೆಗಳನ್ನು ಯಾವುದೇ ಚರ್ಚೆ ಇಲ್ಲದೇ ಅಂಗೀಕಾರವಾಗಿವೆ. ಸ್ವಾತಂತ್ರೃ ಹೋರಾಟಕ್ಕೆ ಸ್ಪೂರ್ತಿಯಾಗಿದ್ದ ವಂದೇ ಮಾತರಂ ಗೀತೆಯನ್ನು ಕಾಂಗ್ರೆಸ್ ಆರಂಭದಿಂದಲೂ ವಿರೋಧಿಸುತ್ತಲೇ ಬಂದಿತ್ತು. ಇದೀಗ ಮೋದಿ ಸರ್ಕಾರ ವಂದೇ ಮಾತರಂ ಗೀತೆಗೆ ರಾಷ್ಟ್ರಗೀತೆಗೆ ಸರಿ ಸಮನಾದ ಸ್ಥಾನಮಾನ ಕಲ್ಪಿಸಿದೆ. ಪ್ರಪ್ರಥಮ ಬಾರಿಗೆ ದೇಶದ ಸಂಸತ್‌ನಲ್ಲಿ ವಂದೇ ಮಾತರಂನ ಎಲ್ಲ ಚರಣಗಳನ್ನು ಹಾಡಲಾಗಿದೆ. ಜೊತೆಗೆ ಸ್ವಾತಂತ್ರೃ ದಿನಾಚರಣೆಯ ದಿನದಂದು ಪ್ರಥಮ ಬಾರಿಗೆ ಎಲ್ಲ ಚರಣಗಳನ್ನು ಹಾಡುತ್ತಿರುವುದು ಸುವರ್ಣಾಕ್ಷರಗಳಲ್ಲಿ ಬರೆದಿಡುವಂಥದ್ದು. ಆದರೆ, ಕಾಂಗ್ರೆಸ್ ಪಾಲಿಗೆ ಇದು ಅಸಹನೀಯವಾಗಿದೆ ಎಂದು ಟೀಕಿಸಿದರು.
ವಿದೇಶಿ ದೇಣಿಗೆಗೆ ಕಡಿವಾಣ
ದೇಶದಲ್ಲಿ ಅನೇಕ ಸಂಘ-ಸಂಸ್ಥೆಗಳಗೆ ವಿದೇಶದಿಂದ ದೇಣಿಗೆ ಹರಿದು ಬರುತ್ತಿದ್ದು ಇದರಿಂದ ಮತಾಂತರ ಸೇರಿ ಅನೇಕ ಸಂವಿಧಾನ ವಿರೋಧಿ ಕೃತ್ಯಗಳಿಗೆ ಅನುಕೂಲ ಕಲ್ಪಿಸುತ್ತಿತ್ತು. ಇದನ್ನರಿದ ಪ್ರಧಾನಿ ಮೋದಿ ಅವರು ವಿದೇಶದಿಂದ ಹರಿದು ಬರುವ ದೇಣಿಗೆಗೆ ಅಂಕುಶ ಹಾಕುವ ಪ್ರಯತ್ನ ಮಾಡಿದ್ದಾರೆ. ಆದರೆ, ಕಾಂಗ್ರೆಸ್ ಇಂಥ ಪ್ರಯತ್ನವನ್ನು ವಿರೋಧಿಸಿತು. ಇಂಥ ಅನೇಕ ಮಹತ್ವದ ಮಸೂದೆ ಮಂಡನೆಯಾಗದಂತೆ ನೋಡಿಕೊಳ್ಳಲು ಹವಣಿಸಿತು. ಇಡೀ ಅಧಿವೇಶನವನ್ನು ಹಾಳುಗೆಡಹುವ ಹುನ್ನಾರ ನಡೆಸಿತು. ಗದ್ದಲ, ಗಲಾಟೆ ಮೂಲಕ ಅಧಿವೇಶ ಮುಂದೂಡುವಂತೆ ಮಾಡಿತೆಂದು ಜಿಗಜಿಣಗಿ ಅಸಮಾಧಾನ ಹೊರಹಾಕಿದರು.
ಜಾರ್ಖಂಡ್ ಹಗರಣ
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಆರಂಭದಿಂದಲೂ ಕಠಿಣ ಕ್ರಮ ಜರುಗಿಸುತ್ತಲೇ ಬಂದಿತು. ಆದರೆ, ಕಾಂಗ್ರೆಸ್ ತೆರೆಮರೆಯಲ್ಲಿ ಅರಾಜಕೃತೆ ಸೃಷ್ಠಿಸಲು ಮುಂದಾದಾಗ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದರು. ಆದರೆ, ಜಾರ್ಖಂಡ್‌ನಲ್ಲಿ ತಮ್ಮದೇ ಪಕ್ಷದ ವಿರುದ್ಧ ಹೋರಾಟ ನಡೆಯುತ್ತಿರುವಾಗ ಲಾಠಿ ಚಾರ್ಜ್ ಮಾಡಿದ್ದರ ಬಗ್ಗೆ ರಾಹುಲ್ ಗಾಂಧಿ ಚಕಾರವೆತ್ತಲಿಲ್ಲವೇಕೆ? ದೆಹಲಿಯ ಜಂತರ್-ಮಂತರ್‌ಗೆ ಹೋದ ರಾಹುಲ್ ಗಾಂಧಿ ಜಾರ್ಖಂಡ್‌ಗೆ ಹೋಗದಿರುವುದೇಕೆ? ಇದೆಲ್ಲ ಜನ ಗಮನಿಸುತ್ತಿದ್ದಾರೆ. ದೇಶದಲ್ಲಿ ಅರಾಜಕತೆ ಸೃಷ್ಠಿಸುವ ಹುನ್ನಾರವನ್ನು ಜನ ಎಂದಿಗೂ ಸಹಿಸುವುದಿಲ್ಲ. ಬರುವ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆಂದು ಸಂಸದ ಜಿಗಜಿಣಗಿ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.