ವಿಜಯಪುರ ನಗರದ ಬಿಜೆಪಿ ಕಚೇರಿಯಲ್ಲಿ ನಾಗಠಾಣ ಕ್ಷೇತ್ರದ ಬಿಎಲ್‌ಎ-2ಗಳ ವಿಶೇಷ ಸಭೆ ನಡೆಯಿತು. ಸಂಸದ ರಮೇಶ ಜಿಗಜಿಣಗಿ, ಪರಾಜಿತ ಅಭ್ಯರ್ಥಿ ಸಂಜೀವ ಐಹೊಳೆ, ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಇತರರಿದ್ದಾರೆ.
- ನಾಗಠಾಣ ಕ್ಷೇತ್ರದ ಬಿಎಲ್‌ಎಗಳ ಸಭೆ
- ಕಾರ್ಯಕರ್ತರಿಗೆ ಧೈರ್ಯ ತುಂಬಿದ ಸಂಸದ
- ಬಿಜೆಪಿ ತತ್ವ-ಸಿದ್ಧಾಂತ ಅಳವಡಿಸಿಕೊಳ್ಳಲು ಸಲಹೆ
ವಿಜಯಪುರ: ‘ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಜಿಲ್ಲೆ ಎಲ್ಲ ಎಂಟು ವಿಧಾನ ಸಭೆ ಕ್ಷೇತ್ರಗಳಲ್ಲಿಯೂ ಕಮಲ ಅರಳಿಸಲು ಸಜ್ಜಾಗಿ, ಈಗಿನಿಂದಲೇ ಪ್ರತಿಯೊಬ್ಬ ಕಾರ್ಯಕರ್ತರು ಕಂಕಣ ತೊಟ್ಟು ಸಿದ್ಧರಾವಗಿ, ಎಸ್‌ಐಆರ್ ಕುರಿತು ಜಾಗೃತಿ ಮೂಡಿಸಿ’ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಈಚೆಗೆ ನಡೆದ ನಾಗಠಾಣ ವಿಧಾನ ಸಭೆ ಕ್ಷೇತ್ರದ ಬಿಎಲ್‌ಎ-2ಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ‘ಜಾತಿ, ಮತ, ಭೇದವಿಲ್ಲದೇ ಎಲ್ಲರೂ ಪಕ್ಷಕ್ಕಾಗಿ ಶ್ರಮಿಸಬೇಕು. ನಾವೆಲ್ಲರೂ ಹಿಂದೂ-ನಾವೆಲ್ಲರೂ ಒಂದು ಎಂಬ ಸಿದ್ಧಾಂತಕ್ಕೆ ಬದ್ಧರಾಗಬೇಕು. ಜಾತಿ ತಾರತಮ್ಯವಿಲ್ಲದೇ ಹಿಂದೂಗಳೆಲ್ಲರೂ ಒಗ್ಗಟ್ಟಾದಾಗ ಮಾತ್ರ ಬಲಿಷ್ಠ ರಾಷ್ಟ್ರ ನಿರ್ಮಿಸಲು ಸಾಧ್ಯ’ ಎಂದರು.
‘ಅವಕಾಶಕ್ಕಾಗಿ ಬಿಜೆಪಿ ಮತ್ತು ಹಿಂದೂತ್ವದ ಮಂತ್ರ ಪಠಿಸುವುದು, ಅಧಿಕಾರದ ಆಸೆಗಾಗಿ ಬೇರೆ ಪಕ್ಷ, ತತ್ವ, ಸಿದ್ಧಾಂತದ ಬೆನ್ನಟ್ಟಿ ಹೋಗುವುದು ನಿಲ್ಲಬೇಕು, ಯಾವುದೇ ಕಾರಣಕ್ಕೂ ಪಕ್ಷದ ತತ್ವಗಳನ್ನು ಬಿಟ್ಟು ಹೋಗಬಾರದು. ರಕ್ತದ ಕಣಕಣದಲ್ಲಿಯೂ ಬಿಜೆಪಿಯ ತತ್ವ-ಸಿದ್ಧಾಂತ ಅಡಗಿರಬೇಕು, ಅಂದಾಗ ಮಾತ್ರ ಪಕ್ಷ ಬಲಿಷ್ಠಗೊಳ್ಳಲು ಸಾಧ್ಯ’ ಎಂದರು.
ವಿಜಯಪುರ ನಗರದ ಬಿಜೆಪಿ ಕಚೇರಿಯಲ್ಲಿ ನಾಗಠಾಣ ಕ್ಷೇತ್ರದ ಬಿಎಲ್‌ಎ-2ಗಳ ವಿಶೇಷ ಸಭೆಯನ್ನುದ್ದೇಶಿಸಿ ಸಂಸದ ರಮೇಶ ಜಿಗಜಿಣಗಿ ಮಾತನಾಡಿದರು. ಪರಾಜಿತ ಅಭ್ಯರ್ಥಿ ಸಂಜೀವ ಐಹೊಳೆ, ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಇತರರಿದ್ದಾರೆ. ‘ಕೆಲವರು ಟಿಕೆಟ್‌ಗಾಗಿ ಪಕ್ಷ, ತತ್ವ, ಸಿದ್ಧಾಂತದ ಮಂತ್ರ ಪಠಿಸುತ್ತಾರೆ. ಚುನಾವಣೆ ಬಂದಾಗ ತಮ್ಮ ತಮ್ಮ ಜಾತಿ ಹಿಡಿದು ಓಡಿಹೋಗುತ್ತಾರೆ. ಲೋಕಸಭೆ ಚುನಾವಣೆ ಇರಲಿ, ವಿಧಾನ ಸಭೆ ಚುನಾವಣೆ ಇರಲಿ ಪಕ್ಷಕ್ಕಾಗಿಯೇ ಮತ ಮೀಸಲಿಡಬೇಕು. ಅದಕ್ಕಾಗಿ ಶ್ರಮಿಸಬೇಕು. ಅದನ್ನು ಬಿಟ್ಟು ಅವಕಾಶವಾದಿ ರಾಜಕಾರಣ ಮಾಡಬಾರದು. ನಾನು 40 ವರ್ಷಗಳ ರಾಜಕಾರಣದಲ್ಲಿ ಇಂಥ ಅನೇಕ ಅನುಭವಗಳನ್ನು ಉಂಡಿದ್ದೇನೆ. ಇದೇ ಕಾರಣಕ್ಕೆ ಕಳೆದ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಸ್ಥಾನಗಳನ್ನು ಕಳೆದುಕೊಂಡಿದ್ದೇವೆ. ಮತ್ತೆ ಆ ಸನ್ನಿವೇಶಕ್ಕೆ ಅವಕಾಶ ಕೊಡದೇ ಗಟ್ಟಿಯಾಗಿ ಪಕ್ಷದ ಪರ ನಿಲ್ಲೋಣ’ ಎಂದರು.
ಪರಾಜಿತ ಅಭ್ಯರ್ಥಿ ಸಂಜೀವ ಐಹೊಳೆ ಮಾತನಾಡಿ, ‘ವ್ಯಕ್ತಿಗಿಂತ ಪಕ್ಷ ಮೊದಲು, ಪಕ್ಷಕ್ಕಿಂತ ರಾಷ್ಟ್ರ ಮೊದಲು ಎಂಬ ಸಿದ್ಧಾಂತ ಬಿಜೆಪಿಯದ್ದು. ದೇಶಭಕ್ತಿ, ದೇಶಾಭಿಮಾನ ಬೆಳೆಸುವ ನಿಟ್ಟಿನಲ್ಲಿ ಹುಟ್ಟಿಕೊಂಡ ಪಕ್ಷ ಬಿಜೆಪಿ. ಹೀಗಾಗಿ ಬಲಿಷ್ಠ ಭಾರತದ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು’ ಎಂದರು.
ಮುಖಂಡರಾದ ಉಮೇಶ ಕಾರಜೋಳ ಹಾಗೂ ಮಹೇಂದ್ರ ನಾಯಕ ಮಾತನಾಡಿ, ‘ಪ್ರತಿಯೊಬ್ಬ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಎಸ್‌ಐಆರ್ ಕುರಿತು ಜಾಗೃತಿ ಮೂಡಿಸಬೇಕು’ ಎಂದರು.
ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಈರಣ್ಣ ರಾವೂರ, ಚಿದಾನಂದ ಚಲವಾದಿ, ಮಳುಗೌಡ ಪಾಟೀಲ, ಭೀಮುಗೌಡ ಬಿರಾದಾರ ಸೇರಿ ನಾಗಠಾಣ ಕ್ಷೇತ್ರದ ವಿವಿಧ ಮುಖಂಡರು ಉಪಸ್ಥಿತರಿದ್ದರು.