ದಿ. ಆರ್.ಆರ್. ಕಲ್ಲೂರ-ಮೀನಾಕ್ಷಿ ಆರ್. ಕಲ್ಲೂರ ದಂಪತಿ. 
ವಿಜಯಪುರ

ಮಾತೃದೇವತೆ ಮೀನಾಕ್ಷಿ ಆರ್. ಕಲ್ಲೂರ

ಪ್ರಮುಖ ಮುಖ್ಯಾಂಶಗಳು

  • ಸಾರ್ಥಕ ಬದುಕಿಗೆ ದಾರಿ
  • ಕಾರ್ಯಕ್ಷೇತ್ರ ನಿರ್ಮಿಸಿಕೊಂಡ ಧೀಮಂತೆ.
ಈ ಜಗತ್ತಿನಲ್ಲಿ ಜನ್ಮತಾಳಿದ ಪ್ರತಿಯೊಬ್ಬರಿಗೂ ಏನನ್ನಾದರೂ ಸಾಧಿಸಬೇಕು ಎಂಬ ಛಲವಿದ್ದರೂ ಬೆರಳೆಣಿಕೆಯವರಿಗಷ್ಟೇ ಆ ಅದೃಷ್ಟವೊದಗಿ ಬರುತ್ತದೆ. ಅಂತವರ ಹೆಸರು ಶಾಶ್ವತವಾಗಿ ಸಮಾಜದಲ್ಲಿ ಉಳಿಯುತ್ತದೆ. ಅವರು ಸಾಗಿದ ಹಾದಿಯೂ ಸಾರ್ಥಕ ಬದುಕಿಗೆ ದಾರಿಯಾಗುತ್ತದೆ. ಅಂತಹ ಮಹನೀಯರಲ್ಲಿ ದಿ. ಮೀನಾಕ್ಷಿ ಆರ್. ಕಲ್ಲೂರ ಅವರೊಬ್ಬರು.
ಅಥರ್ಗಾದ ಅಂಕಲಗಿ ಪ್ರತಿಷ್ಠಿತ ಮನೆತನದ ಶ್ರೇಷ್ಠ ಕುಡಿಯಾಗಿ ಜನ್ಮತಾಳಿದ ಮೀನಾಕ್ಷಿಯವರು ಮುಂದೆ ಎಲ್ಲರ ಮೆಚ್ಚಿನ ‘ಆಯಿ’ಯಾಗಿ ಮಹಿಳಾ ಸಬಲೀಕರಣಕ್ಕೆ ತಮ್ಮದೇ ಆದ ವೈಶಿಷ್ಟೃಪೂರ್ಣ ಕೊಡುಗೆಯನ್ನು ನೀಡಿದ ಮಾತೃ ದೇವತೆ ಎಂದರೆ ಅತಿಶಯೋಕ್ತಿಯಲ್ಲ.
1953ರಲ್ಲಿ ಸಜ್ಜನ ರಾಜಕಾರಣಿ ಎಂದೇ ಖ್ಯಾತಿ ಪಡೆದಿದ್ದ ಆರ್.ಆರ್. ಕಲ್ಲೂರ ಅವರೊಂದಿಗೆ ಸಪ್ತಪದಿ ತುಳಿದ ನಂತರ, ಆರ್.ಆರ್. ಕಲ್ಲೂರ ಅವರು ರಾಜಕೀಯ ಕ್ಷೇತ್ರದಲ್ಲಿ ಖ್ಯಾತಿ ಪಡೆದರೆ, ಅಮ್ಮ ಮೀನಾಕ್ಷಿಯವರು ಪತಿಯ ಸಾರ್ವಜನಿಕ ಕಾರ್ಯದಲ್ಲಿ ಸಹಕರಿಸುತ್ತಾ, ತಮ್ಮದೇ ಕಾರ್ಯಕ್ಷೇತ್ರ ನಿರ್ಮಿಸಿಕೊಂಡ ಧೀಮಂತೆ.
ಮಹಿಳಾ ಸಹಕಾರಿ ಬ್ಯಾಂಕ್‌ನ ರೂವಾರಿ: 1994ರಲ್ಲಿ ವಿಜಯಪುರದಲ್ಲಿ ಮಹಿಳಾ ಸಹಕಾರಿ ಬ್ಯಾಂಕ್ ಸ್ಥಾಪನೆಯಾದಾಗಿನಿಂದ ಅವರ ಅಂತಿಮ ಕ್ಷಣದವರೆಗೂ ಬ್ಯಾಂಕ್‌ನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿ, ಅದನ್ನು ಪ್ರಗತಿಪಥದತ್ತ ಕೊಂಡೊಯ್ದ ಕೀರ್ತಿ ಅವರದ್ದು. ಜೊತೆಗೆ ಕರ್ನಾಟಕ ರಾಜ್ಯ ಸಹಕಾರ ಪಟ್ಟಣದ ಬ್ಯಾಂಕುಗಳ ಮಹಾಮಂಡಳದ ಆಡಳಿತ ಮಂಡಳಿ ನಿರ್ದೇಶಕರಾಗಿ ಮೀನಾಕ್ಷಿ ಕಲ್ಲೂರ ಅವರು ಅತ್ಯುತ್ತಮ ಕೆಲಸವನ್ನು ಮಾಡಿದ್ದಾರೆ. ಜೊತೆಗೆ ಪತಿಯೊಡಗೂಡಿ ಶಿಕ್ಷಣ ಕ್ಷೇತ್ರದಲ್ಲೂ ಮಿಂಚಿ, ಶಾಲೆ, ಕಾಲೇಜುಗಳನ್ನು ಹುಟ್ಟಿಹಾಕಿ ವಿಜಯಪುರದ ವಿದ್ಯಾರ್ಥಿಗಳಿಗೆ ವಿದ್ಯಾದಾನವನ್ನು ಮಾಡಿದ ಕೀರ್ತಿ ಅವರದ್ದು.
ಅಂತಃಕರಣದ ಸಮಾಜಸೇವೆ: ಪತಿ ಮೂರು ಅವಧಿಗೆ ಶಾಸಕರಾದರೂ ಪತ್ನಿ ಮೀನಾಕ್ಷಿಯವರು ಕಷ್ಟ ಹೇಳಿ ಕೊಂಡು ಮನೆಗೆ ಬರುವ ಯಾರನ್ನೂ ಬರಿಗೈಲಿ ಹಿಂತಿರುಗಿಸದೆ, ಕಳಕಳಿಯಿಂದ ಸ್ಪಂದಿಸುತ್ತಿದ್ದುದು ಜನಜನಿತ. ಪತಿಗೆ ಸಾಥಿಯಾದ ಮೀನಾಕ್ಷಿ ಕಲ್ಲೂರ ಅವರ ಸಾಮಾಜಿಕ ಸೇವೆ ಅನುಪಮ. ಪತಿಯ ಯಶಸ್ಸಿನ ಹಿಂದೆ ಪತ್ನಿ, ಪತ್ನಿಯ ಯಶಸ್ಸಿನ ಹಿಂದೆ ಪತಿ ಪರಸ್ಪರವಾಗಿ ಇರುತ್ತಾರೆಂಬುದಕ್ಕೆ ಕಲ್ಲೂರ ದಂಪತಿ ನಿದರ್ಶನ.
ಸಹಕಾರಿ ರತ್ನ ಪ್ರಶಸ್ತಿಗೆ ಭಾಜನ: ಮೀನಾಕ್ಷಿ ಕಲ್ಲೂರ ಅವರು ಸಹಕಾರಿ ಕ್ಷೇತ್ರದಲ್ಲಿ ಮಾಡಿದ ಸೇವೆಯನ್ನು ಪರಿಗಣಿಸಿ ಅವರಿಗೆ ಕರ್ನಾಟಕ ಸರ್ಕಾರ ‘ಮಹಿಳಾ ಸಹಕಾರಿ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದು, ಅವರ ನಿಸ್ವಾರ್ಥ ಸೇವೆಗೆ ಹಾಗೂ ದಕ್ಷ ಆಡಳಿತಕ್ಕೆ ಸಂದ ಮನ್ನಣೆಯಾಗಿದೆ.
2017ರಲ್ಲಿ ಅಭಿನಂದನೆ ಸಮಾರಂಭ: ಕಲ್ಲೂರ ದಂಪತಿಯ ಸಾರ್ವಜನಿಕ, ಸಾಮಾಜಿಕ, ಶೈಕ್ಷಣಿಕ ಸೇವೆಯನ್ನು ಗುರುತಿಸಿ ಅವರನ್ನು ಅಭಿನಂದಿಸಿ 2017ರಲ್ಲಿ ವಿಜಯಪುರದ ಸೊಲ್ಲಾಪುರ ರಸ್ತೆಯಲ್ಲಿರುವ ಮುಗಳಖೋಡ ಮಠದ ಆವರಣದಲ್ಲಿ ಸ್ನೇಹಿತರು, ಸಮಾಜ ಬಾಂಧವರು ಅಭಿನಂದಿಸಿ, ಗೌರವಿಸಿದ್ದು ಸ್ತುತ್ಯಾರ್ಹ. ಶಿವ-ಪಾರ್ವತಿಯರಂತೆ ಅನ್ಯೋನ್ಯದಿಂದ ಇಳಿ ವಯದಲ್ಲೂ ಅವರಿಬ್ಬರು ನವ ದಂಪತಿಯಂತೆ ಬಾಳ್ವೆ ಮಾಡಿದ್ದು ಇಂದಿನ ಯುವ ಪೀಳಿಗೆಗೆ ಮಾದರಿ.
"

21ರಂದು ಮೂರ್ತಿ ಪ್ರತಿಷ್ಠಾಪನೆ

ಲಿಂ. ಆರ್.ಆರ್. ಕಲ್ಲೂರ ಹಾಗೂ ಲಿಂ. ಮೀನಾಕ್ಷಿ ಆರ್. ಕಲ್ಲೂರ ಅವರ ಐದನೇ ಪುಣ್ಯಸ್ಮರಣೆ ಹಾಗೂ ಮೂರ್ತಿ ಪ್ರತಿಷ್ಠಾಪನೆ ಹಾಗೂ ಅನಾವರಣ ಸಮಾರಂಭ ಮೇ, 21ರಂದು, 2026ರಂದು ಬೆಳಗ್ಗೆ 10-30ಗಂಟೆಗೆ, ನಗರದ ಆಶ್ರಮ ರಸ್ತೆಯಲ್ಲಿರುವ ಸದಾಶಿವ ನಗರದಲ್ಲಿರುವ ಕಿತ್ತೂರ ರಾಣಿ ಚನ್ನಮ್ಮ ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ. ಮೈಸೂರಿನ ಸುಕ್ಷೇತ್ರ ಸುತ್ತೂರು ಮಹಾಸಂಸ್ಥಾನ ಮಠದ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಮೂರ್ತಿ ಅನಾವರಣಗೊಳ್ಳಲಿದೆ.