ವಿಜಯಪುರ ನಗರದಲ್ಲಿ ಹಮ್ಮಿಕೊಂಡಿದ್ದ ಆಸ್ಮಿತಾ ಖೇಲೋ ಇಂಡಿಯಾ ಮಹಿಳಾ ಸೈಕ್ಲಿಂಗ್ ಸಿಟಿ ಲೀಗ್ ಸ್ಪರ್ಧೆಗೆ ಸಂಸದ ರಮೇಶ ಜಿಗಜಿಣಗಿ ಚಾಲನೆ ನೀಡಿದರು. ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ರಾಜು ಬಿರಾದಾರ, ರಾಜಲಕ್ಷ್ಮಿ ಪೃಥ್ವಿರಾಜ್ ಇತರರಿದ್ದಾರೆ.
- ಜಿಲ್ಲಾ ಮಟ್ಟದ ಸೈಕ್ಲಿಂಗ್ ಸ್ಪರ್ಧೆಗೆ ಚಾಲನೆ
- ಜಿಲ್ಲಾ ಸೈಕ್ಲಿಂಗ್ ಅಸೋಸಿಯೇಶನ್ ನೇತೃತ್ವ
- ಜಿಲ್ಲಾಡಳಿತ ಸೇರಿ ವಿವಿಧ ಸಂಸ್ಥೆಗಳ ಸಹಕಾರ
ವಿಜಯಪುರ: ಕೇಂದ್ರ ಸರ್ಕಾರಕ್ಕೆ ಕ್ರೀಡಾ ಕ್ಷೇತ್ರಕ್ಕೆ ಅಪಾರ ಪ್ರೋತ್ಸಾಹ ನೀಡುತ್ತಿದೆ. ಪರಿಣಾಮ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಕ್ರೀಡಾಪಟುಗಳು ಉತ್ತಮ ಸಾಧನೆ ಮೆರೆಯಲು ಸಾಧ್ಯವಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೆಮ್ಮೆ ವ್ಯಕ್ತಪಡಿಸಿದರು.
ಸೈಕ್ಲಿಂಗ್ ಕಾಶಿ ಖ್ಯಾತಿಯ ಐತಿಹಾಸಿಕ ವಿಜಯಪುರ ನಗರದಲ್ಲಿ ಕೇಂದ್ರ ಸರ್ಕಾರದ ಕ್ರೀಡಾ ಪ್ರಾಧಿಕಾರ, ಸೈಕ್ಲಿಂಗ್ ಫೆಡರೇಷನ್ ಆಫ್ ಇಂಡಿಯಾ, ಕರ್ನಾಟಕ ರಾಜ್ಯ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಶನ್, ಜಿಲ್ಲಾ ಸೈಕ್ಲಿಂಗ್ ಅಸೋಸಿಯೇಶನ್, ವಿಶಾಲ್ ಸೈಕಲ್ ಮಾಲ್, ಜಿಲ್ಲಾಡಳಿತ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಶನಿವಾರ ನಡೆದ ‘ಆಸ್ಮಿತಾ ಖೇಲೋ ಇಂಡಿಯಾ ಮಹಿಳಾ ಸೈಕ್ಲಿಂಗ್ ಸಿಟಿ ಲೀಗ್ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ದೇಶದಲ್ಲಿ ಕ್ರೀಡಾ ಕ್ಷೇತ್ರದ ಬೆಳವಣಿಗೆಗೆ ಕೇಂದ್ರ ಸರ್ಕಾರ ವಿಶೇಷ ಒತ್ತು ನೀಡುತ್ತಿದ್ದು, ಮಹಿಳಾ ಕ್ರೀಡಾಪಟುಗಳಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ದೇಶದ ವಿವಿಧ ಜಿಲ್ಲೆಗಳಲ್ಲಿ ಸೈಕ್ಲಿಂಗ್ ಸೇರಿ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸುವ ಮೂಲಕ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಪ್ರತಿಭೆಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.
2038ರ ಒಲಿಂಪಿಕ್ಸ್ ಗುರಿಯಾಗಿಸಿಕೊಂಡು ಕ್ರೀಡಾಪಟುಗಳನ್ನು ಈಗಿನಿಂದಲೇ ಸಿದ್ಧಗೊಳಿಸುವ ಉದ್ದೇಶದಿಂದ ಇಂತಹ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ರಾಜ್ಯದ ಆರು ಜಿಲ್ಲೆಗಳಲ್ಲಿ ಆಸ್ಮಿತಾ ಮಹಿಳಾ ಸೈಕ್ಲಿಂಗ್ ಲೀಗ್ ನಡೆಸಲಾಗುತ್ತಿದ್ದು, ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕು ಎಂದು ಕರೆ ನೀಡಿದರು.
ಕರ್ನಾಟಕ ರಾಜ್ಯ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಶನ್ ಅಧ್ಯಕ್ಷ ರಾಜು ಬಿರಾದಾರ ಮಾತನಾಡಿ, ವಿಜಯಪುರ ಜಿಲ್ಲೆ ರಾಜ್ಯದಲ್ಲಿಯೇ ಸೈಕ್ಲಿಂಗ್ ಕ್ರೀಡೆಗೆ ಹೆಸರುವಾಸಿಯಾಗಿದ್ದು, ರಾಷ್ಟ್ರೀಯ, ರಾಜ್ಯ ಹಾಗೂ ಜಿಲ್ಲಾ ಮಟ್ಟದ ಅನೇಕ ಸ್ಪರ್ಧೆಗಳಿಗೆ ಆತಿಥ್ಯ ವಹಿಸಿದೆ ಎಂದು ಹೇಳಿದರು.
ಜಿಲ್ಲೆಯ ಕ್ರೀಡಾಭಿಮಾನಿಗಳು ಹಾಗೂ ಸಹೃದಯ ದಾನಿಗಳ ಬೆಂಬಲದಿಂದ ಸೈಕ್ಲಿಂಗ್ ಕ್ರೀಡೆ ನಿರಂತರವಾಗಿ ಬೆಳೆಯುತ್ತಿದ್ದು, ಈ ಬಾರಿಯ ಆಸ್ಮಿತಾ ವುಮೆನ್ಸ್ ಲೀಗ್ ಕೂಡ ಯಶಸ್ವಿಯಾಗಿ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಪ್ರಿನ್ಸಿಪಲ್ ರಾಜಲಕ್ಷ್ಮಿ ಪೃಥ್ವಿರಾಜ್, ಮಹಾಪೌರ ಮಡಿವಾಳಪ್ಪ ಕರಡಿ, ಸೈನಿಕ ಶಾಲೆಯ ಪ್ರಾಂಶುಪಾಲೆ ರಾಜಲಕ್ಷ್ಮಿ ಪೃಥ್ವಿರಾಜ, ಮಹಾನಗರ ಪಾಲಿಕೆ ಸದಸ್ಯ ರಾಹುಲ್ ಜಾಧವ, ಶಿವರುದ್ರ ಬಾಗಲಕೋಟ, ಆಸೀಪ್ ಶ್ಯಾನವಾಲೆ, ಅಷ್ಪಾಕ್ ಮನಗೂಳಿ, ವಿಸಿಜಿ ಗ್ರೂಪ್‌ನ ಶಿವನಗೌಡ ಪಾಟೀಲ, ವಿಶಾಲ್ ಸೈಕಲ್ ಮಾರ್ಟ್‌ನ ವಿಶಾಲ ಹಿರಜಕರ, ಡಿವೈಎಸ್‌ಪಿ ನಾಗರಾಜ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ರಾಜಶೇಖರ ದೈವಾಡಿ ಇತರರಿದ್ದರು.
ವಿಜೇತರು-ಸನ್ಮಾನಿತರ ವಿವರ
ಆಸ್ಮಿತಾ ವುಮೆನ್ಸ್ ಲೀಗ್ (ಇಂಡಿಯನ್ ಮೇಡ್ ಸೈಕ್ಲಿಂಗ್) ವಿಭಾಗದಲ್ಲಿ ಅಪೇಕ್ಷಾ ಜಗತಾಪ್ ಪ್ರಥಮ, ವೆಂಕವ್ವ ಧ್ಯಾಮಣ್ಣನವರ ದ್ವಿತೀಯ ಹಾಗೂ ಶ್ರೀದೇವಿ ತೃತೀಯ ಸ್ಥಾನ ಪಡೆದರು. 18 ವರ್ಷದ ವಯೋಮಿತಿ ವಿಭಾಗದಲ್ಲಿ ಐಶು ಚವ್ಹಾಣ ಪ್ರಥಮ, ಶಿವಬಾಯಿ ದ್ವಿತೀಯ ಹಾಗೂ ಶ್ವೇತಾ ತೃತೀಯ ಸ್ಥಾನ ಪಡೆದರು.
16 ವರ್ಷದೊಳಗಿನ ವಿಭಾಗದಲ್ಲಿ ಶಿವಾನಿ ಬೂದಿಹಾಳ ಪ್ರಥಮ, ಅಲ್ಫಿಯಾ ಜಹಾಗೀರದಾರ ದ್ವಿತೀಯ ಹಾಗೂ ಹರ್ಷಿತಾ ಭಜಂತ್ರಿ ತೃತೀಯ ಸ್ಥಾನ ಗಳಿಸಿದರು.ಪ್ರೊಫೆಷನಲ್ ವಿಭಾಗದ ವುಮೆನ್ಸ್ ಎಲೈಟ್ ಸ್ಪರ್ಧೆಯಲ್ಲಿ ಗಂಗಾ ದಂಡಿ ಪ್ರಥಮ, ಪಾಯಲ್ ಚವ್ಹಾಣ್ ದ್ವಿತೀಯ ಹಾಗೂ ಸವಿತಾ ಆಡಗಲ್ ತೃತೀಯ ಸ್ಥಾನ ಪಡೆದರು.
18 ವರ್ಷದ ವಯೋಮಿತಿ ವಿಭಾಗದಲ್ಲಿ ಜ್ಯೋತಿ ರಾಠೋಡ ಪ್ರಥಮ, ದಿವ್ಯಶ್ರೀ ಲೋಣಿ ದ್ವಿತೀಯ ಹಾಗೂ ಸಂಗವ್ವ ಬನಸೋಡೆ ತೃತೀಯ ಸ್ಥಾನ ಪಡೆದರು. 16 ವರ್ಷದ ವಯೋಮಿತಿ ವಿಭಾಗದಲ್ಲಿ ವರ್ಷಾ ಚವ್ಹಾಣ್ ಪ್ರಥಮ, ಕೌಶಲ್ಯ ರಾಮಗೊಂಡ ದ್ವಿತೀಯ ಹಾಗೂ ಭೂಮಿಕಾ ಬೂದಿಹಾಳ ತೃತೀಯ ಸ್ಥಾನ ಪಡೆದು ಗಮನ ಸೆಳೆದರು.
ಮಹಾನಗರ ಪಾಲಿಕೆ ಸದಸ್ಯೆ ಆರತಿ ಶಹಾಪುರ, ಸ್ವಪ್ನಾ ಕಣಮುಚನಾಳ ಹಾಗೂ ಸುನೀತಾ ಮಹೇಶ ಒಡೆಯರ ಅವರು ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಎರಡನೇ ಬಾರಿಗೆ ರಾಜ್ಯ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಶನ್‌ನ ಅಧ್ಯಕ್ಷರಾಗಿ ಆಯ್ಕೆಯಾದ ರಾಜು ಬಿರಾದಾರ ಅವರಿಗೆ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.