ವಿಜಯಪುರ ನಗರದ ವಿಜಯ -ಫಂಕ್ಷನ್ ಹಾಲ್‌ನಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿಯಿಂದ ಆಯೋಜಿಸಿದ್ದ ಒಂದು ದಿನದ ಕಾರ್ಯಕರ್ತರ ತರಬೇತಿ ಕಾರ್ಯಾಗಾರವನ್ನು ಸಚಿವ ಎಂ.ಬಿ. ಪಾಟೀಲ ಉದ್ಘಾಟಿಸಿದರು. ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ ಸೋರಕೆ, ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್, ಮಲ್ಲಿಕಾರ್ಜುನ ಲೋಣಿ ಇತರರಿದ್ದಾರೆ. 
ವಿಜಯಪುರ

ಬಡವರ ಹಕ್ಕು ಕಿತ್ತುಕೊಂಡ ಮೋದಿ ಸರ್ಕಾರ

ನರೇಂದ್ರ ಮೋದಿ ಸರ್ಕಾರ ಬಡವರ ಹಕ್ಕು ಕಿತ್ತುಕೊಳ್ಳುವ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ ಸೋರಕೆ ಆರೋಪಿಸಿದರು.
ನಗರದ ವಿಜಯ ಫಂಕ್ಷನ್ ಹಾಲ್‌ನಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿಯಿಂದ ಭಾನುವಾರ ಆಯೋಜಿಸಿದ್ದ ಒಂದು ದಿನದ ಕಾರ್ಯಕರ್ತರ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಕಳೆದ 12 ವರ್ಷಗಳಲ್ಲಿ ಮೋದಿ ಸರ್ಕಾರ ಬಡವರ ಹಕ್ಕುಗಳನ್ನು ಕಿತ್ತುಕೊಳ್ಳುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಕ್ರಾಂತಿಕಾರಿ ಕಾರ್ಯಕ್ರಮಗಳನ್ನು ನಿಷ್ಕ್ರೀಯಗೋಳಿಸುವ ಕೆಲಸ ಮೋದಿ ಸರ್ಕಾರ ಮಾಡುತ್ತಿದೆ ಎಂದರು.
ಮನರೇಗಾ ಕಾರ್ಯಕ್ರಮ ಸಂವಿಧಾನ ಬದ್ಧವಾದ ನಮ್ಮ ಉದ್ಯೋಗದ ಹಕ್ಕು. ಅದನ್ನು ಕಿತ್ತುಕೊಳ್ಳುವ ಕೆಲಸವನ್ನು ಕೇಂದ್ರದ ಮೋದಿ ಸರ್ಕಾರ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ದಿಲ್ಲಿಯಿಂದ ಹಳ್ಳಿಗೆ ಅಧಿಕಾರ ಕೊಟ್ಟರೆ ಬಿಜೆಪಿ ಪಕ್ಷ ಹಳ್ಳಿಯಿಂದ ಅಧಿಕಾರ ಕಿತ್ತು ದಿಲ್ಲಿಗೆ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತಿದೆ ಎಂದರು.
ಉದ್ಘಾಟನೆ ನೆರವೇರಿಸಿದ ಸಚಿವ ಎಂ.ಬಿ. ಪಾಟೀಲ ಮಾತನಾಡಿ, ದೇಶದಲ್ಲಿ ಮಹತ್ತರ ಅಭಿವೃದ್ಧಿ ಕಾರ್ಯಗಳಾಗಿರುವುದೇ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಎಂದರು.
ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟದ್ದು, ಕಾಂಗ್ರೆಸ್ ಪಕ್ಷ. ಪಡಿತರ ವ್ಯವಸ್ಥೆ, ಊಳುವವನೇ ಭೂಮಿಯ ಒಡೆಯ ಎಂಬ ಭೂ ಸುಧಾರಣಾ ನೀತಿ, ವೃದ್ಧಾಪ್ಯ ವೇತನ, ಅಂಗವಿಕಲರ ವೇತನ, ಬಡವರಿಗೆ ಮನೆ ಕಟ್ಟುವ ಯೋಜನೆಗಳು, ಹಸಿರು ಕ್ರಾಂತಿ, ಕ್ಷೀರ ಕ್ರಾಂತಿ ಸೇರಿ ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿವೆ ಎಂದರು.
2014ರಲ್ಲಿ ಅಚ್ಚೆ ದಿನ್ ಆಯೇಂಗೆ ಎಂಬ ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಜನರ ನಿರೀಕ್ಷೆಗಳನ್ನು ಈಡೇರಿಸಲಿಲ್ಲ. ರೂ.45 ಇದ್ದ ಪೆಟ್ರೋಲ್ ಬೆಲೆ ರೂ.100ಕ್ಕೆ ಏರಿಕೆಯಾಗಿದೆ. ರೂ.52 ಇದ್ದ ಡಿಸೇಲ್ ಬೆಲೆ ರೂ.98ಕ್ಕೆ ಏರಿದೆ. ರೂ.450 ಇದ್ದ ಗ್ಯಾಸ್ ಸಿಲಿಂಡರ್ ಬೆಲೆ ರೂ.1200ಕ್ಕೆ ತಲುಪಿದೆ. ಸದ್ಯ ಸಿಲಿಂಡರ್ ಕೂಡ ಸಿಗದಂತಾಗಿದೆ ಎಂದು ಲೇವಡಿ ಮಾಡಿದರು.
ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಮಾತನಾಡಿ, ರಾಮ ರಾಜ್ಯವಾಗಿದ್ದ ದೇಶವನ್ನು ಕಳೆದ 12 ವರ್ಷಗಳಲ್ಲಿ ಸಮಾಜ ಒಡೆಯುವ ಕೆಲಸ ಮಾಡುವ ಮೂಲಕ ಬಿಜೆಪಿಯರು ರಾವಣ ರಾಜ್ಯವನ್ನಾಗಿ ಮಾಡಿದ್ದಾರೆ ಎಂದರು.
ಶಾಸಕ ವಿಠ್ಠಲ ಕಟಕದೊಂಡ, ಕೆಪಿಸಿಸಿ ಪ್ರಚಾರ ಸಮಿತಿ ಮುಖ್ಯ ಸಂಯೊಜಕ ಶರಣಪ್ಪ ಕೊಟಗಿ, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಕೆಪಿಸಿಸಿ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಸರಪರಾಜ ಮಿರ್ದೆ, ಮಾಜಿ ಶಾಸಕ ಶರಣಪ್ಪ ಸುಣಗಾರ, ರಾಜು ಆಲಗೂರ, ಮುಖಂಡ ಅಬ್ದುಲ್‌ಹಮೀದ್ ಮುಶ್ರೀಫ್,ವಿಡಿಎ ಅಧ್ಯಕ್ಷ ಗಂಗಾಧರ ಸಂಬಣ್ಣಿ ಇತರರಿದ್ದರು.