- ಕಗ್ಗೋಡದ ಗೋಶಾಲೆ ಆವರಣದಲ್ಲಿ ಸಿದ್ಧತೆ
- ಶಾಸಕ ಬಸನಗೌಡ ಪಾಟೀಲ ಯತ್ನಾಳರ ಅಧ್ಯಕ್ಷತೆ
- ಆರ್ಥಿಕ ಸಬಲತೆ ದೃಷ್ಠಿಯಿಂದ ಕಾರ್ಯಕ್ರಮ
ವಿಜಯಪುರ: ತಾಲ್ಲೂಕಿನ ಕಗ್ಗೋಡ ಗ್ರಾಮದಲ್ಲಿರುವ ಸಿದ್ಧೇಶ್ವರ ಸಂಸ್ಥೆಯ ರಾಮನಗೌಡ ಬಾ. ಪಾಟೀಲ (ಯತ್ನಾಳ) ಗೋರಕ್ಷಾ ಕೇಂದ್ರದ ಆಶ್ರಯದಲ್ಲಿ ಮೇ 11 ರಂದು ಬೆಳಗ್ಗೆ 9.30 ರಿಂದ ಸಂಜೆ 5 ರವರೆಗೆ ಗೋ ಶಾಲೆ ಆವರಣದಲ್ಲಿ ಗೋ ಆಧಾರಿತ ಕೃಷಿಕರ ಚಿಂತನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಸಿದ್ಧೇಶ್ವರ ಸಂಸ್ಥೆ ಅಧ್ಯಕ್ಷರು ಹಾಗೂ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅಧ್ಯಕ್ಷತೆ ವಹಿಸುವರು. ಕೃಷಿ ಕ್ಷೇತ್ರದಲ್ಲಿ ಗೋ ಆಧಾರಿತ ಆರ್ಥಿಕತೆ ಅಭಿವೃದ್ಧಿ ಪಡಿಸಲು ಹಾಗೂ ಕೃಷಿಕರು ಗೋ ಆಧಾರಿತ ಕೃಷಿ ಹಾಗೂ ಸಾವಯವ ಕೃಷಿ ಅಳವಡಿಸಿಕೊಂಡು ಆರ್ಥಿಕ ಸಬಲತೆ ಪಡೆಯವ ದೃಷ್ಟಿಯಿಂದ ಹಮ್ಮಿಕೊಳ್ಳಲಾದ ಈ ಸಮಾವೇಶವನ್ನು ಕರ್ನಾಟಕ ಪಶು ವೈದ್ಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬೀದರ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಶಿವಪ್ರಕಾಶ ಬಿ.ವಿ ಉದ್ಘಾಟಿಸಲಿದ್ದಾರೆ.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ರಾಹುಲಕುಮಾರ ಭಾವಿದೊಡ್ಡಿ, ಪಶುಪಾಲನೆ ಇಲಾಖೆಯ ಉಪನಿರ್ದೇಶಕ ಡಾ.ಆರ್.ಎಸ್. ಪದರಾ, ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕ ಗಂಗಾಧರ ದೇಸಾಯಿ ಉಪಸ್ಥಿತವಿರುವರು.
ನಂತರ ನಡೆಯುವ ಗೋಷ್ಠಿಗಳಲ್ಲಿ ಗೋ ಆಧಾರಿತ ಕೃಷಿ ಮತ್ತು ಆರ್ಥಿಕತೆ ಕುರಿತು ಗೋ ಆಧಾರಿತ ಕೃಷಿ ಚಿಂತಕರು ಹಾಗೂ ಸಲಹೆಗಾರ ಡಾ.ಪ್ರಾಣೇಶ ಜಹಾಗೀರದಾರ, ಗೋ ಉತ್ಪನ್ನಗಳ ತಯಾರಿಕೆ ಕುರಿತು ತಜ್ಞ ಡಾ.ಸುಧೀಂದ್ರ ದೇಶಪಾಂಡೆ ಹಾಗೂ ಸಾವಯವ ಕೃಷಿ ಕುರಿತು ಡಾ.ರವಿಂದ್ರ ಬೆಳ್ಳಿ ಗೋಷ್ಠಿಗಳನ್ನು ನಡೆಸಿಕೊಡುವರು. ಅಲ್ಲದೆ, ತೋಟಗಾರಿಕೆ, ಪಶುಸಂಗೋಪನೆ ಹಾಗೂ ಜಿಲ್ಲಾ ಕೈಗಾರಿಕ ಕೇಂದ್ರದ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ರೈತರಿಗೆ ಮಾರ್ಗದರ್ಶನ ನೀಡಲಿದ್ದಾರೆ.
ಪಾಲ್ಗೊಳ್ಳುವ ಎಲ್ಲ ಸಾವಯವ ಕೃಷಿ ಅವಲಂಬಿತ ರೈತರಿಗೆ ಉಪಹಾರ ಹಾಗೂ ಊಟದ ವ್ಯವಸ್ಥೆ ಮಾಡಲಾಗಿದ್ದು, ಗೋ ಶಾಲೆ, ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರ, ಗೋ ಉತ್ಪನ್ನಗಳ ತಯಾರಿಕೆ ಘಟಕ ಮತ್ತು ಎರೆಹುಳು ಘಟಕಗಳಿಗೆ ಕ್ಷೇತ್ರ ಭೇಟಿ ಹಾಗೂ ಮಾರ್ಗದರ್ಶನದ ವ್ಯವಸ್ಥೆ ಮಾಡಲಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಸಾವಯವ ಕೃಷಿ ಅವಲಂಬಿತ ರೈತರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರಕಟಣೆ ಮೂಲಕ ತಿಳಿಸಿದ್ದಾರೆ.