ವಿಜಯಪುರ ನಗರದ ಖಾಸಗಿ ಹೊಟೇಲ್‌ನಲ್ಲಿ ಹಾಲುಮತ ಸಮಾಜದ ಮುಖಂಡರು ಜಂಟಿ ಸುದ್ದಿಗೋಷ್ಠಿ ನಡೆಸಿದರು. ಸೋಮನಾಥ ಕಳ್ಳಿಮನಿ, ಸಿದ್ದಣ್ಣ ಮೇಟಿ, ಸಂಗೀತಾ ದಿನ್ನಿ ಇದ್ದಾರೆ.
- ಸಚಿವ ಎಂ.ಬಿ. ಪಾಟೀಲರ ಮೇಲೆ ಆರೋಪ
- ಮುದ್ದೇಬಿಹಾಳ ಶಾಸಕರ ಹೇಳಿಕೆಗೆ ಖಂಡನೆ
- ಸಿ.ಎಸ್. ನಾಡಗೌಡರಿಗೆ ಮುಖಂಡರ ಪ್ರತಿಕ್ರಿಯೆ
ವಿಜಯಪುರ: ‘ಶಾಸಕ ಸಿ.ಎಸ್. ನಾಡಗೌಡ ಅವರು ತಮಗೆ ಸಚಿವ ಸ್ಥಾನ ಸಿಗದಿರುವುದಕ್ಕೆ ಅಸಮಾಧಾನಗೊಂಡು ಹಾಲುಮತ ಸಮಾಜವನ್ನು ರಾಜಕೀಯಕ್ಕೆ ಎಳೆದು ತಂದಿರುವುದನ್ನು ತೀವ್ರವಾಗಿ ಖಂಡಿಸುವುದಾಗಿ’ ಜಿಪಂ ಮಾಜಿ ಅಧ್ಯಕ್ಷೆ ಸಂಗೀತಾ ದಿನ್ನಿ, ಮುಖಂಡ ಸೋಮನಾಥ ಕಳ್ಳಿಮನಿ ಹಾಗೂ ಸಿದ್ಧಣ್ಣ ಮೇಟಿ ತಿಳಿಸಿದರು.
ಜಿಲ್ಲಾ ಪಂಚಾಯಿತಿಗೆ ಹಾಲುಮತ ಸಮುದಾಯದಿಂದ ಸುಜಾತಾ ಕಳ್ಳಿಮನಿ, ನೀಲಮ್ಮ ಮೇಟಿ ಹಾಗೂ ಸಂಗೀತಾ ದಿನ್ನಿ ಅಧ್ಯಕ್ಷರಾಗಿದ್ದರು. ಈ ಸಂದರ್ಭ ಎಂ.ಬಿ. ಪಾಟೀಲರ ಕೊಡುಗೆ ಸಾಕಷ್ಟಿದೆ. ತನು, ಮನ, ಧನದಿಂದ ಅವರು ಸಹಕಾರ ನೀಡಿದ್ದಾರೆ. ಹೀಗಾಗಿ ‘ಸರ್ಕಸ್’ ಮಾಡುವ ಪ್ರಮೇಯವೇ ಇಲ್ಲವೆಂದು ಮಂಗಳವಾರ ಜಂಟಿಯಾಗಿ ಅವರು ಸುದ್ದಿಗೋಷ್ಠಿ ನಡೆಸಿದರು.
ಧರ್ಮಸಿಂಗ ಅವರು ಮುಖ್ಯಮಂತ್ರಿಗಳಾಗಿದ್ದಾಗ ವಿಜಯಪುರ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೇರಿಸಲು ಎಂ.ಬಿ.ಪಾಟೀಲರು ಮತ್ತು ಶಿವಾನಂದ ಪಾಟೀಲರು ಚರ್ಚಿಸಿ ಹಾಲುಮತ ಸಮಾಜದ ಮಹಿಳೆಗೆ ಅಧ್ಯಕ್ಷ ಸ್ಥಾನಕ್ಕೆ ಕೂರಿಸಲು ನಿರ್ಧರಿಸಿದ್ದರು. ಅದೇ ರೀತಿ ಅಂದು ನನ್ನನ್ನು ಪ್ರಥಮ ಹಾಲುಮತದ ಮಹಿಳಾ ಅಭ್ಯರ್ಥಿಗೆ ಅವಕಾಶವನ್ನು ಕಲ್ಪಿಸಿದ್ದರು ಎಂಬುದನ್ನು ಸ್ಮರಿಸಿದ ಸಂಗೀತಾ ದಿನ್ನಿ ಅವರು, ನಾಡಗೌಡರ ಹೇಳಿಕೆ ಅಪ್ರಸ್ತುತ ಎಂದರು.
ಮುಖಂಡ ಸೋಮನಾಥ ಕಳ್ಳಿಮನಿ ಮಾತನಾಡಿ, ವಿಜಯಪುರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಹಾಲುಮತದ ನೀಲಮ್ಮ ಮೇಟಿ ಮತ್ತು ನನ್ನ ಪತ್ನಿ ಸುಜಾತಾ ಕಳ್ಳಿಮನಿ ಅವರನ್ನು ಅಧ್ಯಕ್ಷ ಸ್ಥಾನಕ್ಕೇರಿಸುವ ಸಂದರ್ಭದಲ್ಲಿ ಬಹುಮತವಿರಲಿಲ್ಲ ಮತ್ತು ಪಕ್ಷದವರೇ ಪಕ್ಷಾಂತರ ಮಾಡಿದ್ದರು. ಇದನ್ನು ಸವಾಲಾಗಿ ಸ್ವೀಕರಿಸಿದ ಎಂ.ಬಿ. ಪಾಟೀಲರು ಆಡಳಿತಾರೂಢ ಬಿಜೆಪಿ ಪಕ್ಷದ ನಾಯಕರನ್ನು ಎದುರು ಹಾಕಿಕೊಂಡು ತನು, ಮನ, ಧನದಿಂದ ಬೆಂಬಲಿಸಿ ಅಧ್ಯಕ್ಷ ಸ್ಥಾನ ಕೊಡಿಸಿದ್ದಾರೆ ಎಂದರು.
ಸಿ.ಎಸ್.ನಾಡಗೌಡ ಅವರು ಹಾಲುಮತದವರನ್ನು ಅಧ್ಯಕ್ಷ ಸ್ಥಾನದಲ್ಲಿ ಕೂರಿಸಲು ಸರ್ಕಸ್ ಮಾಡಬೇಕಾಯಿತು, ಇದಕ್ಕೆ ಎಂ. ಬಿ. ಪಾಟೀಲರೇ ಕಾರಣ ಎಂದಿರುವುದು ಸರಿಯಲ್ಲ. ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಲು ನನ್ನ ಪತ್ನಿ ಸುಜಾತ ಕಳ್ಳಿಮನಿ ಆಗಲಿ, ನೀಲಮ್ಮ ಮೇಟಿ, ಸಂಗೀತಾ ದಿನ್ನಿಯವರಾಗಲಿ ಮೂವರು ಹಾಲುಮತದ ಮಹಿಳೆಯರು ಜಿಲ್ಲಾ ಪಂಚಾಯತ್ ಅಧ್ಯಕ್ಷಗಿರಿಗೇರಲು ಎಂ.ಬಿ.ಪಾಟೀಲರು ಕಾರಣರಾಗಿದ್ದಾರೆ ಎಂದರು.
ಸಿ.ಎಸ್. ನಾಡಗೌಡರು ಯಾರನ್ನು ಗಮನದಲ್ಲಿಟ್ಟುಕೊಂಡು ಹೇಳಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು. ಹಿರಿಯರಾದ ತಮಗೆ ಸಚಿವ ಸ್ಥಾನದ ಬೇಡಿಕೆ ನ್ಯಾಯಸಮ್ಮತವಾಗಿದೆ. ಅದಕ್ಕಾಗಿ ಹೈಕಮಾಂಡ್ ಜೊತೆ ಚರ್ಚಿಸಬೇಕು. ಅದನ್ನು ಬಿಟ್ಟು ಹಾಲುಮತದ ಸಮಾಜದವರನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನದ ಕುರಿತು ಪ್ರಸ್ತಾಪಿಸಿರುವುದು ಅಪ್ರಸ್ತುತವಾಗಿದೆ ಎಂದರು.
ಗೋವಾ ಕನ್ನಡಿಗರ ಸಂಘದ ಅಧ್ಯಕ್ಷ ಸಿದ್ದಣ್ಣ ಮೇಟಿ ಮಾತನಾಡಿ, ಮುದ್ದೇಬಿಹಾಳ ಮತ್ತು ದೇವರಹಿಪ್ಪರಗಿ ತಾಲೂಕುಗಳಲ್ಲಿ ಹಾಲುಮತ ಸಮಾಜದ ಜನಸಂಖ್ಯೆ ಹೆಚ್ಚಿದೆ. ಮುಂದಿನ ದಿನಗಳಲ್ಲಿ ನಮ್ಮ ಸಮುದಾಯಕ್ಕೆ ವಿಧಾನಸಭೆಗೆ ಟಿಕೆಟ್ ನೀಡಬೇಕೆಂದು ಎಲ್ಲರೂ ಸೇರಿ ಒತ್ತಾಯಿಸುತ್ತೇವೆ ಎಂದರು.