ಆಲಮಟ್ಟಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಜಲ ಮನೋರಂಜನಾ ಉದ್ಯಾನವನದ ಮುಂದೆ ಸಚಿವ ಎಂ.ಬಿ. ಪಾಟೀಲ, ಸಚಿವ ಶಿವಾನಂದ ಪಾಟೀಲ, ಬಿ.ಎಸ್. ಕವಲಗಿ, ಕೃಷ್ಣಮೂರ್ತಿ ಕುಲಕರ್ಣಿ ಇತರರಿದ್ದಾರೆ. 
ವಿಜಯಪುರ

ಆಲಮಟ್ಟಿಯಲ್ಲಿ ಜಲ ಮನೋರಂಜನಾ ಉದ್ಯಾನವನ ಉದ್ಘಾಟನೆ, ಯುಕೆಪಿ-3ನೇ ಹಂತದ ಅನುಷ್ಠಾನಕ್ಕೆ ಬದ್ಧ ಎಂದ ಸಚಿವ ಎಂ.ಬಿ. ಪಾಟೀಲ

ಪ್ರಮುಖ ಮುಖ್ಯಾಂಶಗಳು

  • ಯುಕೆಪಿ ಹಂತ- 3 ರಾಷ್ಟ್ರೀಯ ಯೋಜನೆಯಾಗಲಿ
  • ರಾಜ್ಯ-ಕೇಂದ್ರ ಸರ್ಕಾರದ ಒಟ್ಟಾಗಿ ಶ್ರಮಿಸಲಿ
  • ಸಮಗ್ರ ನೀರಾವರಿಗೆ ಕಾಂಗ್ರೆಸ್ ಸರ್ಕಾರ ಬದ್ಧ
ವಿಜಯಪುರ: ಕೃಷ್ಣಾ ಮೇಲ್ದಂಡೆ ಯೋಜನೆ ಹಂತ- 3ರ ಅನುಷ್ಠಾನಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ತಿಳಿಸಿದರು.
ಆಲಮಟ್ಟಿಯಲ್ಲಿ ಜಲಸಂಪನ್ಮೂಲ ಇಲಾಖೆ, ಕೃಷ್ಣಾ ಭಾಗ್ಯ ಜಲ ನಿಗಮದ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಜಲ ಮನೋರಂಜನಾ ಉದ್ಯಾನವನ’ದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಯುಕೆಪಿ-3ನೇ ಹಂತದ ಯೋಜನೆಯ ಅನುಷ್ಠಾನವನ್ನು ಯಾವುದೇ ಕಾರಣಕ್ಕೂ ಮುಂದೂಡದೇ ಬರುವ ಎರಡ್ಮೂರು ವರ್ಷಗಳಲ್ಲಿ ಕಾರ್ಯಗತಗೊಳಿಸಲಾಗುವುದು ಎಂದರು.
ಆಲಮಟ್ಟಿ ಅಣೆಕಟ್ಟನ್ನು 524 ಮೀಟರ್‌ವರೆಗೆ ಎತ್ತರಿಸಲು ಸರ್ಕಾರ ಬದ್ಧವಾಗಿದೆ. ಜಲಾಶಯವನ್ನು ಎತ್ತರಿಸುವುದರಿಂದ 75 ಸಾವಿರ ಎಕರೆ ಭೂಮಿ ಮುಳುಗಡೆಯಾಗುತ್ತದೆ. 20 ಹಳ್ಳಿಗಳು ಸ್ಥಳಾಂತರಗೊಳ್ಳುತ್ತವೆ. ಈ ಬೃಹತ್ ಯೋಜನೆ ಅನುಷ್ಠಾನಕ್ಕೆ ದೊಡ್ಡ ಪ್ರಮಾಣದ ಅನುದಾನ ಬೇಕಾಗುತ್ತದೆ. ಇದನ್ನು ಅವಳಿ ಜಿಲ್ಲೆಯ ಜನಪ್ರತಿನಿಧಿಗಳೆಲ್ಲ ಸೇರಿ, ಸಚಿವ ಸಂಪುಟದಲ್ಲಿ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿರುವುದಾಗಿ ತಿಳಿಸಿದರು.

ಶೇ.90ರಷ್ಟು ನೀರು ಬಳಕೆ

ಆಲಮಟ್ಟಿ ಜಲಾಶಯ ರಾಜ್ಯದಲ್ಲೇ ಎತ್ತರವಾದದ್ದು. ಈ ಜಲಾಶಯದ ಎತ್ತರ ಹೆಚ್ಚಿಸುವುದರಿಂದ ಈಗಿರುವ 130 ಟಿಎಂಸಿ ಬದಲಿಗೆ 233 ಟಿಎಂಸಿ ನೀರು ಸಂಗ್ರಹಗೊಳ್ಳಲಿದೆ. ಇದರಿಂದ ನಮ್ಮ ಪಾಲಿನ ಶೇ. 90ರಷ್ಟು ನೀರು ಬಳಸಿಕೊಳ್ಳಲು ನಮ್ಮ ರೈತರಿಗೆ ಸಹಕಾರಿಯಾಗಲಿದೆ ಎಂದರು.
ಅಣೆಕಟ್ಟೆಗಾಗಿ ಅವಳಿ ಜಿಲ್ಲೆಯ ರೈತರು 2ಲಕ್ಷ ಹೆಕ್ಟೇರ್ ಭೂಮಿ ಕಳೆದುಕೊಂಡಿದ್ದಾರೆ. ಬ್ರಿಜೇಶಕುಮಾರ ತೀರ್ಪಿನಿನ್ವಯ 6 ಲಕ್ಷ ಹೆಕ್ಟೇರ್ ನೀರಾವರಿಯಾಗಲು ಸಾಧ್ಯವಾಗುತ್ತದೆ ಎಂದ ಅವರು, 90 ಟಿಎಂಸಿಯಷ್ಟು ನೀರು ಬರುವ ಮೂಲಕ 6 ಲಕ್ಷ ಹೆಕ್ಟೇರ್ ಪ್ರದೇಶ ನೀರಾವರಿಯಾಗಲು ಸಾಧ್ಯವಿದೆ ಎಂದರು.
ಆಲಮಟ್ಟಿಯಲ್ಲಿ ನಾನಾ ಉದ್ಯಾನವನಗಳಿವೆ. ವಿಜಯಪುರದಲ್ಲಿ ಐತಿಹಾಸಿಕ ಸ್ಮಾರಕಗಳಿವೆ. ಪ್ರವಾಸೋದ್ಯಮ ಆಕರ್ಷಣೆಗೆ ಆಲಮಟ್ಟಿಯಲ್ಲಿ ಡಿಸ್ನಿ ಪಾರ್ಕ್ ಯಾತ್ರಿ ನಿವಾಸ, ಹಳ್ಳಿ ಜನರಿಗೆ ಡಾರ್ಮೆಟರಿ, ಕೇಬಲ್, ಪ್ಲಾನೇಟರಿ, ಡ್ಯಾಶ್ ಕಾರ್ಡ್, ಮ್ಯೂಸಿಕಲ್ ಫೌಂಟೇನ್ ಮಾಡಬೇಕಿದೆ. ಈ ದಿಸೆಯಲ್ಲಿ ನಾನು ಸೇರಿದಂತೆ ಸಚಿವ ಶಿವಾನಂದ ಪಾಟೀಲ ಸೇರಿ ಮಾಡುತ್ತೇವೆ ಎಂದರು.

ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿ

ಅಧ್ಯಕ್ಷತೆ ವಹಿಸಿದ್ದ ಸಚಿವ ಶಿವಾನಂದ ಪಾಟೀಲ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಶ್ರಮಿಸಬೇಕು. ಅಲ್ಲದೇ, ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಬೇಕೆಂದು ಈಗಾಗಲೇ ಕೇಂದ್ರಕ್ಕೆ ಒತ್ತಾಯಿಸಲಾಗಿದೆ. ಬೇಡಿಕೆ ಈಡೇರಿದರೆ ರಾಷ್ಟ್ರಕ್ಕೆ ಬಲು ದೊಡ್ಡ ಕೊಡುಗೆ ನೀಡಿದಂತಾಗಲಿದೆ ಎಂದರು.
ಜಲಾಶಯದ ನೀರನ್ನು ವ್ಯರ್ಥವಾಗಿ ಸಮುದ್ರಕ್ಕೆ ಬಿಡುವ ಬದಲಿಗೆ, ಸದ್ಬಳಕೆ ಮಾಡಿಕೊಳ್ಳಬೇಕಿದೆ. ಆಲಮಟ್ಟಿ ಜಲಾಶಯ ಕೇವಲ ಕರ್ನಾಟಕದ ಯೋಜನೆಯಲ್ಲ. ನಾಲ್ಕು ರಾಜ್ಯಗಳಿಗೆ ದೊಡ್ಡ ಶಕ್ತಿ ತುಂಬುವ ಬೃಹತ್ ಯೋಜನೆಯಿದು. ಹಾಗಾಗಿ ಕೇಂದ್ರ ಸರ್ಕಾರ ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಬೇಕು ಎಂದರು.
ಇನ್ನೊಂದೆಡೆ ಆಲಮಟ್ಟಿ ಜಲಾಶಯ ನಮ್ಮ ಜಿಲ್ಲೆಗೆ ದೊಡ್ಡ ವರದಾನವಾಗಿದೆ. ಈವರೆಗೆ ಈ ಜಲಾಶಯಕ್ಕಾಗಿ ಬಹಳಷ್ಟು ಜಮೀನು ಕಳೆದುಕೊಂಡ ಸಂತ್ರಸ್ತರು ನಮ್ಮವರೇ. ಜೊತೆಗೆ ಔದ್ಯೋಗಿಕ ಕ್ರಾಂತಿಗೆ ಹೆಚ್ಚು ಜಮೀನು ಕಳೆದುಕೊಂಡವರು ಬಸವನಬಾಗೇವಾಡಿ ಮತಕ್ಷೇತ್ರದ ರೈತರು. ಹಾಗಾಗಿ ಸರ್ಕಾರಿ ನೇಮಕಾತಿಯಲ್ಲಿ ಈ ಭಾಗದ ಸಂತ್ರಸ್ತರಿಗೆ ಮೀಸಲಾತಿ ಕಲ್ಪಿಸಬೇಕು ಎಂದು ಹಿರಿಯರು ಮನವಿ ಸಲ್ಲಿಸಿದ್ದಾರೆ. ಸಂತ್ರಸ್ತರ ಈ ಮನವಿ ಕುರಿತು ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಹೇಳಿದರು.
ಅಮ್ಯೂಸ್‌ಮೆಂಟ್ ಪಾರ್ಕ್ ಲೋಕಾರ್ಪಣೆಯಾಗಿದ್ದು ಇದರ ಸದ್ಭಳಕೆಯಾಗಲಿದೆ. ಚೆನ್ನಾಗಿ ನಿರ್ವಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕರ್ನಾಟಕ ರಾಜ್ಯ ನಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಬಿ.ಎಸ್. ಕವಲಗಿ, ಆಲಮಟ್ಟಿ ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಕೃಷ್ಣಮೂರ್ತಿ ಕುಲಕರ್ಣಿ, ಮುಖಂಡ ಚಂದ್ರಶೇಖರ ಹಳೆಮನಿ, ಇಂಜಿನೀಯರ್ ಡಿ.ಬಸವರಾಜ, ಬಿ.ಎಸ್. ಪಾಟೀಲ, ಗೋವಿಂದ ರಾಠೋಡ, ಕೆ.ಎಸ್. ಅಭಿಮನ್ಯು, ಎನ್.ಕೆ. ಬಗಾಯತ ಇತರರಿದ್ದರು.