ವಿಜಯಪುರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಸಚಿವ ಎಂ.ಬಿ. ಪಾಟೀಲರು ಫಲಾನುಭವಿಗಳಿಗೆ ಸಲಕರಣೆ ವಿತರಿಸಿದರು. ಜಿಲ್ಲಾಧಿಕಾರಿ ಡಾ.ಆನಂದ.ಕೆ, ಸಿಇಒ ರಿಷಿ ಆನಂದ, ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ ಇತರರಿದ್ದಾರೆ. 
ವಿಜಯಪುರ

ಫಲಾನುಭವಿಗಳಿಗೆ ಸಾಧನ-ಸಲಕರಣೆ ವಿತರಣೆ, ಸಿಎಸ್‌ಆರ್ ಅನುದಾನ ಪ್ರಗತಿಗೆ ವರದಾನ ಎಂದ ಸಚಿವ ಎಂ.ಬಿ. ಪಾಟೀಲ

ಪ್ರಮುಖ ಮುಖ್ಯಾಂಶಗಳು

  • ಅಂಬೇಡ್ಕರ್ ಕ್ರೀಡಾಂಗಣಕ್ಕೆ ವಿದ್ಯುತ್ ವ್ಯವಸ್ಥೆ
  • ಮೊಬೈಲ್ ಕ್ಯಾಂಟೀನ್ ವಿತರಣೆ
  • ವೈದ್ಯಕೀಯ ಸಲಕರಣೆಗಾಗಿ ಅನುದಾನ
  • ಪ್ರಾಥಮಿಕ-ಪ್ರೌಢ ಶಾಲೆಗೆ ಬೆಂಚ್ ವಿತರಣೆ
ವಿಜಯಪುರ: ಸಿಎಸ್‌ಆರ್ ಅನುದಾನ ಜನತೆಗೆ ವರದಾನವಾಗಿದೆ. ಈ ಅನುದಾನದಡಿ ಸಿಗುವ ಸೌಲಭ್ಯಗಳನ್ನು ಬಳಸಿಕೊಂಡು ಫಲಾನುಭವಿಗಳು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಬಿ. ಪಾಟೀಲ ಹೇಳಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಸಿಎಸ್‌ಆರ್ ಅನುದಾನದಡಿ ಆರೋಗ್ಯ, ಶಿಕ್ಷಣ ಮತ್ತು ಕ್ರೀಡಾ ಇಲಾಖೆಗಳಿಗೆ ಸಾಧನ-ಸಲಕರಣೆ ವಿತರಣೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ ಇಲಾಖೆಗೆ 2500 ಮೇಜುಗಳ ವಿತರಣೆ ಸೇರಿ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣಕ್ಕೆ ವಿದ್ಯುತ್ ವ್ಯವಸ್ಥೆ ಅಳವಡಿಕೆ, ಪ್ರವಾಸೋದ್ಯಮ ಇಲಾಖೆ ಎಸ್‌ಸಿಪಿಟಿ, ಎಸ್‌ಪಿ ಯೋಜನೆಯಡಿ ಆರು ಫಲಾನುಭವಿಗಳಿಗೆ ಮೊಬೈಲ್ ಕ್ಯಾಂಟೀನ್ ವಿತರಿಸಲಾಗುತ್ತಿದೆ. ಇದರ ಸದ್ಭಳಕೆಯಾಗಬೇಕು. ಜಿಲ್ಲೆಯ ಅಭಿವೃದ್ಧಿಗಾಗಿ ವಿವಿಧ ಸಂಸ್ಥೆಗಳು ನಮ್ಮೊಂದಿಗೆ ಸದಾ ಕೈಜೋಡಿಸುತ್ತಿವೆ. ಅದರಲ್ಲಿ ಪವರ್ ಗ್ರೀಡ್ ಸಂಸ್ಥೆಯೂ ಒಂದು. ಇತ್ತೀಚೆಗಷ್ಟೆ ಜಿಂದಾಲ್ ಸಂಸ್ಥೆಯೊಂದಿಗೆ ಸಮಾಲೋಚಿಸಿದ್ದು, ಜಿಲ್ಲೆಯಲ್ಲಿ 100 ವರ್ಷ ಪೂರೈಸಿದ ಸುಮಾರು 258 ಶತಮಾನದ ಶಾಲೆಗಳ ಅಭಿವೃದ್ಧಿಗೆ ಕೈಜೋಡಿಸಲು ಕೋರಿದೆ. ಆ ಅನುದಾನದಿಂದ ಸ್ಮಾರ್ಟ್ ಕ್ಲಾಸ್, ಶಾಲಾ ಕೊಠಡಿ, ದುರಸ್ತಿ ಸೇರಿ ಜಿಲ್ಲೆಯ ಎಲ್ಲ ಶಾಲೆಗಳನ್ನು ಉನ್ನತೀಕರಿಸಲಾಗುವುದು ಎಂದರು.
ಸಿಎಸ್ ಆರ್ ಅನುದಾನ ದೊಡ್ಡದು. ಹೀಗೆ ಸರ್ಕಾರ ಹಾಗೂ ಸಾರ್ವಜನಿಕರು ಒಗ್ಗೂಡಿದಾಗ ಒಳ್ಳೆಯ ಕೆಲಸ ಮಾಡಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸಂಘ-ಸಂಸ್ಥೆಗಳ ಸಹಾಯ ಸಹಕಾರ ಅಗತ್ಯ ಎಂದರು.

ಅನುದಾನದ ವಿವರ

ಪವರ್ ಗ್ರೀಡ್ ಸಂಸ್ಥೆಯು ತನ್ನ ಸಿಎಸ್ ಆರ್ ಅನುದಾನಡಿ ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಕ್ಕೆ ಮೆಡಿಕಲ್ ಸಲಕರಣೆಗಾಗಿ 19.4 ಲಕ್ಷ ರೂ., ಶಿಕ್ಷಣ ಇಲಾಖೆಯ 145 ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ 2500 ಬೆಂಚ್ ವಿತರಣೆ, ಜಿಲ್ಲಾ ಕ್ರೀಡಾಂಗಣಕ್ಕೆ ಸೋಲಾರ್ ರೋಪ್ ಅಳವಡಿಸಲು, ಜಿಲ್ಲಾ ಪಂಚಾಯಿತಿಯಡಿ ವಿಶೇಷಚೇತನರಿಗೆ ಸಾಧನ-ಸಲಕರಣೆ ಕೊಡುಗೆ ನೀಡಿದ್ದಾರೆ. ಸ್ಮಾರ್ಟ್ ಕ್ಲಾಸ್ ನಿರ್ಮಾಣಕ್ಕೆ 40 ಲಕ್ಷ ರೂ. ಪ್ರವಾಸೋದ್ಯಮ ಇಲಾಖೆಯಿಂದ ಅನುದಾನ ಸೇರಿ ಅಪಾರ ಅನುದಾನ ನೀಡಿದ್ದನ್ನು ಸಚಿವರು ಸ್ಮರಿಸಿದರು.
ಜಿಲ್ಲಾಧಿಕಾರಿ ಡಾ.ಆನಂದ.ಕೆ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರ ಮಾರ್ಗದರ್ಶನದಲ್ಲಿ ಜಿಲ್ಲೆಯ ಎಲ್ಲ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಹಾಗೂ ಉತ್ತಮ ಆರೋಗ್ಯ ದೊರಕುವ ನಿಟ್ಟಿನಲ್ಲಿ ತುಂಬಾ ಕೆಲಸಗಳಾಗುತ್ತಿವೆ. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪವರ್ ಗ್ರೀಡ್ ಸಂಸ್ಥೆಯಿಂದ ಸಿಎಸ್‌ಆರ್ ಅನುದಾನದಡಿ ತಿಕೋಟಾ ಹಾಗೂ ಬಬಲೇಶ್ವರ ಭಾಗದ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದರು.
ಜಿಪಂ ಸಿಇಒ ರಿಷಿ ಆನಂದ ಮಾತನಾಡಿ, ಜಿಲ್ಲೆಯಲ್ಲಿರುವ ಅಂಗವಿಕಲರಿಗೆ 2025-26ನೇ ಸಾಲಿನ ಜಿಲ್ಲಾ ಪಂಚಾಯಿತಿಯ ಅನಿಭರ್ಂದಿತ ಅನುದಾನದಡಿ ರೂ.32.87 ಲಕ್ಷ ಮತ್ತು ವಿಕಲಚೇತನರ ಇಲಾಖೆಯ ಅನುದಾನದಡಿ ರೂ.3.70 ಲಕ್ಷ ಸೇರಿ ಒಟ್ಟು ಅನುದಾನ ರೂ.36.57 ಲಕ್ಷಗಳ ಮೌಲ್ಯದ ಸಾಧನ ಸಲಕರಣೆಗಳನ್ನು ವಿತರಣೆ ಮಾಡುವುದು ಮತ್ತು ಶಿಕ್ಷಣ ಇಲಾಖೆಯಡಿ ಜಿಲ್ಲೆಯಲ್ಲಿರುವ ಎಲ್ಲ ಗಡಿಭಾಗದ 20 ಸರ್ಕಾರಿ ಪ್ರೌಢಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ಪರಿಕರಗಳ ವಿತರಣೆ, ಹಾಗೂ ಪ್ರವಾಸೋದ್ಯಮ ಇಲಾಖೆಯಡಿ 2024-25ನೇ ಸಾಲಿನ ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿಯಲ್ಲಿ ಒಟ್ಟು ರೂ.30.00 ಲಕ್ಷಗಳ ಸಹಾಯದನದೊಂದಿಗೆ 6-ಮೊಬೈಲ್ ಕ್ಯಾಂಟೀನ್ ವಾಹನ ವಿತರಣೆ ಮಾಡಲಾಗುತ್ತಿದೆ ಎಂದರು.
ಪವರ್‌ಗ್ರೀಡ್‌ನ ಕಾರ್ಯನಿರ್ವಾಹಕ ನಿರ್ದೇಶಕ ಮುಕುಂದ ಶರದ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿಪಂ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ, ಮುಖ್ಯ ಯೋಜನಾಧಿಕಾರಿ ಸಿ.ಬಿ. ಕುಂಬಾರ, ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ, ಪವರ್ ಗ್ರೀಡ್‌ನ ಸಿಜಿಎಂ ಪ್ರೋಜೆಕ್ಟ್ ಮ್ಯಾನೇಜರ್ ಶಕುಂತಲಾ ಸಾಹೂ, ಜಿಎಂ ಎಚ್.ಆರ್. ತನ್ವೀರ್ ಎಂ, ಭೀಮಾಶಂಕರ ತುಗದೆ ಇತರರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ವಿವಿಧ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಗೆ ಸಾಂಕೇತಿಕವಾಗಿ ಸಾಧನ-ಸಲಕರಣ ವಿತರಿಸಲು ತೆರೆದ ಮಳಿಗೆಗಳಗೆ ಸಚಿವರು ಚಾಲನೆ ನೀಡಿದರು.