- ಸಂಸದ ರಮೇಶ ಜಿಗಜಿಣಗಿ ಹೇಳಿಕೆಗೆ ಪ್ರತಿಕ್ರಿಯೆ
- ರಾಜ್ಯ ಸರ್ಕಾರದ ವಿರುದ್ಧ ಆರೋಪ ನಿರಾಧಾರ
- ಕೇಂದ್ರ ಸರ್ಕಾರದ ಜವಾಬ್ದಾರಿ ಅರಿಯಬೇಕು
ವಿಜಯಪುರ: ರೈಲ್ವೆ ಕೆಳಸೇತುವೆ ನಿರ್ಮಾಣ ವೇಳೆ ಅಗತ್ಯವಾಗಿರುವ ಸೌಕರ್ಯಗಳ ಸ್ಥಳಾಂತರ ಜವಾಬ್ದಾರಿ ರೈಲ್ವೆ ಇಲಾಖೆಗೆ ಸೇರಿದ್ದು, ಇದರಲ್ಲಿ ರಾಜ್ಯ ಸರ್ಕಾರದ ಪಾತ್ರ ಇರುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.
ರೈಲ್ವೆ ಇಲಾಖೆ ಕೈಗೊಳ್ಳುವ ಕೆಳಸೇತುವೆ ನಿರ್ಮಾಣ ಸಂದರ್ಭದಲ್ಲಿ ಅಗತ್ಯ ವಿರುವ ವಿದ್ಯುತ್ ಮಾರ್ಗಗಳು, ಒಳಚರಂಡಿ ವ್ಯವಸ್ಥೆ ಹಾಗೂ ಇತರ ಭೂಗತ ಸೌಲಭ್ಯಗಳ ಸ್ಥಳಾಂತರ ಕೆಲಸ ರೈಲ್ವೆ ಇಲಾಖೆ ಕಾಮಗಾರಿಯ ವ್ಯಾಪ್ತಿಯಲ್ಲಿಯೇ ಬರುತ್ತದೆ. ದೇಶಾದ್ಯಂತ ಇದೇ ಪದ್ಧತಿ ಅನುಸರಿಸಲಾಗುತ್ತಿದೆ. ಆದರೆ, ಸಂಸದ ರಮೇಶ ಜಿಗಜಿಣಗಿ ಅವರು ವಿಜಯಪುರ ನಗರದ ವಜ್ರಹನುಮಾನ ರೈಲ್ವೆ ಗೇಟ್ ಬಳಿ ಕೆಳಸೇತುವೆ ನಿರ್ಮಾಣದ ವಿಷಯದಲ್ಲಿ ರೈಲ್ವೆ ಇಲಾಖೆ ಮಾಡಬೇಕಾದ ಕೆಲಸದ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯದೆ ರಾಜ್ಯ ಸರ್ಕಾರದ ವಿರುದ್ಧ ಮಾಡಿರುವ ಆರೋಪ ನಿರಾಧಾರವಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಂಸದರಿಗೆ ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ನಿಜವಾದರೂ ಕಾಳಜಿ ಇದ್ದರೆ ತಮ್ಮ ಪ್ರಭಾವ ಬಳಸಿ ರೇಲ್ವೆ ಇಲಾಖೆಯಿಂದ ಅಗತ್ಯವಿರುವ ಅನುದಾನ ತಂದು ಕಾಮಗಾರಿ ಪೂರ್ಣಗೊಳಿಸಬೇಕು. ಅದನ್ನು ಬಿಟ್ಟು ರಾಜ್ಯ ಸರ್ಕಾರದ ವಿರುದ್ಧ ಆರೋಪಿಸುವುದು ಸರಿಯಲ್ಲ ಎಂದು ಸಚಿವ ಎಂ.ಬಿ. ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.