ವಿಜಯಪುರ ನಗರದ ಬಿಎಲ್ಡಿಇ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ನಡೆದ 39ನೇ ದಕ್ಷಿಣ ಭಾರತ ಚಿಕ್ಕಮಕ್ಕಳ ತಜ್ಞರ ಸಮ್ಮೇಳನ ಹಾಗೂ ಕರ್ನಾಟಕ ರಾಜ್ಯ 44ನೇ ಚಿಕ್ಕಮಕ್ಕಳ ತಜ್ಞರ ಮೂರು ದಿನಗಳ ಸಮ್ಮೇಳನದ ಸ್ಮರಣ ಸಂಚಿಕೆಯನ್ನು ಕೈಗಾರಿಕೆ ಸಚಿವ ಎಂ. ಬಿ. ಪಾಟೀಲ ಬಿಡುಗಡೆ ಮಾಡಿದರು. ಸಮಕುಲಾಧಿಪತಿ ಡಾ. ವೈ.ಎಂ. ಜಯರಾಜ, ಚಿಕ್ಕಮಕ್ಕಳ ವೈದ್ಯರ ಸಂಘದ ಪದಾಧಿಕಾರಿ ಡಾ. ಎಸ್.ವಿ. ಪಾಟೀಲ, ಡಾ. ಸಿದ್ದು ಚರಕಿ, ಡಾ. ಎಂ. ಎಂ. ಪಾಟೀಲ ಮತ್ತಿತರರಿದ್ದಾರೆ.
- 39ನೇ ದಕ್ಷಿಣ ಭಾರತ ಚಿಕ್ಕಮಕ್ಕಳ ತಜ್ಞರ ಸಮ್ಮೇಳನ
- ಕರ್ನಾಟಕ ರಾಜ್ಯ 44ನೇ ಚಿಕ್ಕಮಕ್ಕಳ ತಜ್ಞರ ಸಮ್ಮೇಳನ
- ಶ್ರೀ ಬಿ.ಎಂ. ಪಾಟೀಲ ಮೆಡಿಕಲ್ ಕಾಲೇಜು ಸಂಯುಕ್ತಾಶ್ರಯ
ವಿಜಯಪುರ: ಸಮಾಜದಲ್ಲಿ ಉತ್ತಮ ಮತ್ತು ಆರೋಗ್ಯಪೂರ್ಣ ಪರಿಸರ ಒದಗಿಸಲು ವಿಜ್ಞಾನ, ತಂತ್ರಜ್ಞಾನ ಮತ್ತು ಸಹಾನುಭೂತಿ ಒಗ್ಗೂಡಿ ಸಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.
ನಗರದ ಬಿಎಲ್ಡಿಇ ಡೀಮ್ಡ್ ವಿಶ್ವ ವಿದ್ಯಾಲಯದ ಶ್ರೀ ಬಿ.ಎಂ. ಪಾಟೀಲ ಮೆಡಿಕಲ್ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದ ಶಿಶುರೋಗ ವಿಭಾಗ, ಭಾರತೀಯ ಚಿಕ್ಕಮಕ್ಕಳ ತಜ್ಞರ ಸಂಘ, ಕರ್ನಾಟಕ ಚಿಕ್ಕಮಕ್ಕಳ ತಜ್ಞರ ತಂಡ ಹಾಗೂ ಡಾ. ಬಿದರಿಯವರ ಅಶ್ವಿನಿ ಇನಸ್ಟಿಟ್ಯೂಟ್ ಆಫ್ ಚೈಲ್ಡ್ ಹೆಲ್ತ್ ಸಂಯುಕ್ತಾಶ್ರಯದಲ್ಲಿ ಶನಿವಾರ ಆಯೋಜಿಸಿದ್ದ 39ನೇ ದಕ್ಷಿಣ ಭಾರತ ಚಿಕ್ಕಮಕ್ಕಳ ತಜ್ಞರ ಸಮ್ಮೇಳನ ಹಾಗೂ ಕರ್ನಾಟಕ ರಾಜ್ಯ
44ನೇ ಚಿಕ್ಕಮಕ್ಕಳ ತಜ್ಞರ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ಮಗುವಿಗೆ ಜ್ಞಾನ, ನಾವೀನ್ಯತೆ ಮತ್ತು ಆರೈಕೆ ಈ ಬಾರಿಯ ಸಮ್ಮೇಳನದ ಘೋಷವಾಕ್ಯವಾಗಿದೆ. ಇಲ್ಲಿ ಚರ್ಚಿಸುವ ವಿಚಾರಗಳು ಮತ್ತು ಕೈಗೊಳ್ಳುವ ನಿರ್ಣಯಗಳು ಮಕ್ಕಳ ಆರೋಗ್ಯಪೂರ್ಣ ಭವಿಷ್ಯಕ್ಕೆ ಅಗತ್ಯವಾಗಿರಲು ಕ್ರಮಗಳನ್ನು ಕೈಗೊಳ್ಳಲು ಸಹಾಯವಾಗಲಿವೆ. ಪ್ರತಿಯೊಂದು ಮಗುವನ್ನು ಆರೋಗ್ಯವಾಗಿ ಬೆಳೆದು ಉತ್ತಮವಾಗಿ ಕಲಿತು, ತನ್ನ ಕನಸನ್ನು ನನಸು ಮಾಡಲು ಮತ್ತು ಈ ಮೂಲಕ ಭವ್ಯ ಭಾರತಕ್ಕೆ ಕೊಡುಗೆ ನೀಡಲು ಪೂರಕವಾಗಲಿವೆ ಎಂಬ ವಿಶ್ವಾಸವಿದೆ ಎಂದರು.
ಪ್ರತಿಯೊಂದು ಮಗುವಿನ ಹಿನ್ನೆಲೆ ಅಥವಾ ಭೌಗೋಳಿಕತೆಯನ್ನು ಲೆಕ್ಕಿಸದೆ, ಸಕಾಲಿಕ, ಗುಣಮಟ್ಟದ ಹಾಗೂ ಸಮಾನ ಆರೈಕೆಯನ್ನು ಒದಗಿಸುವುದು ಇಂದು ತುರ್ತಾಗಿ ಆಗಬೇಕಿದೆ. ನೀತಿ ನಿರೂಪಕರು, ಶಿಕ್ಷಕರು, ವೈದ್ಯರು ಮತ್ತು ಸಂಶೋಧಕು ಮಕ್ಕಳನ್ನು ಬದುಕಿಸುವುದು ಮಾತ್ರವಲ್ಲದೇ, ಈ ನಿಟ್ಟಿನಲ್ಲಿ ರೂಪಿಸಬೇಕಿರುವ ಯೋಜನೆಗಳ ಬಗ್ಗೆ ಸಾಮೂಹಿಕವಾಗಿ ಜವಾಬ್ದಾರಿ ವಹಿಸಬೇಕಿದೆ. ಇಂಥ ಸಮ್ಮೇಳನಗಳನ್ನು ಆಯೋಜಿಸುವ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ಮಕ್ಕಳಹಿತ ಕಾಪಾಡುವ ಮನಸ್ಸುಗಳನ್ನು ಒಟ್ಟುಗೂಡಿಸಲು ಸಾಧ್ಯವಾಗುತ್ತದೆ. ಹೊಸ ಆಲೋಚನೆಗಳು, ಸಹಯೋಗದ ಸಂಶೋಧನೆ ಮತ್ತು ಸುಧಾರಿತ ಚಿಕಿತ್ಸೆ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ನಿರ್ಣಾಯಕ ಪಾತ್ರ ವಹಿಸುತ್ತವೆ. ಮಕ್ಕಳ ಹಿರಿಯ ತಜ್ಞವೈದ್ಯರು, ಸಂಘದ ಪದಾಧಿಕಾರಿಗಳು, ಉದಯೋನ್ಮುಖ ಯುವ ವೃತ್ತಿಪರ ವೈದ್ಯರು ಇಲ್ಲಿ ಸೇರುವ ಮೂಲಕ ಎಲ್ಲರೂ ಒಗ್ಗೂಡಿ ಶಿಶು ಮರಣ ಪ್ರಮಾಣವನ್ನು ಕಡಿಮೆ ಮಾಡಲು, ಚಿಕ್ಕಮಕ್ಕಳ ಕಾಯಿಲೆಗಳನ್ನು ನಿಭಾಯಿಸಲು, ಹದಿಹರೆಯದವರ ಮಕ್ಕಳಲ್ಲಿ ಆರೋಗ್ಯವನ್ನು ಬಲಪಡಿಸುವ ಮೂಲಕ ಭವ್ಯ ಭಾರತದ ನಿರ್ಮಾಣಕ್ಕೆ ಕೊಡುಗೆ ನೀಡಲು ಸಾಧ್ಯವಾಗಲಿದೆ ಎಂದು ಅವರು ಹೇಳಿದರು.
ಸಂಘದ ರಾಜ್ಯಾಧ್ಯಕ್ಷ ಡಾ. ಎಸ್.ವಿ. ಪಾಟೀಲ ಮಾತನಾಡಿ, ಜವಾಬ್ದಾರಿ ವಹಿಸಿಕೊಂಡ ನಂತರ ಇಟ್ಟುಕೊಂಡಿದ್ದ ಗುರಿಗಳನ್ನು ಈಡೇರಿಸಿದ್ದೇನೆ. ರಾಜ್ಯದ ಎಲ್ಲ ಜಿಲ್ಲಾ ಘಟಕಗಳನ್ನು ಬಲಪಡಿಸಿದ್ದೇವೆ. ವೃತ್ತಿ ನೈಪುಣ್ಯತೆ ಹೆಚ್ಚಿಸುವುದು ಮತ್ತು ನೀತಿ ಸಂಹಿತೆ ಪಾಲನೆ, ನವಜಾತ ಶಿಶುಗಳ ಆರೋಗ್ಯ ಕಾಪಾಡುವುದು, ಮಕ್ಕಳ ಆರೋಗ್ಯ ಸಂರಕ್ಷಣೆ ಚಟುವಟಿಕೆಗಳಿಗೆ ಕಳೆದ ಒಂದು ವರ್ಷದಲ್ಲಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಡಾ. ರವಿಶಂಕರ ಮಾರ್ಪಳ್ಳಿ ಮಾತನಾಡಿ, ಡಿಜಿಟಲ್ ಸಲಕರಣೆಗಳ ಬಳಕೆಯಿಂದ ಮಕ್ಕಳ ಮೇಲಾಗುತ್ತಿರುವ ಪರಿಣಾಮ, ಪೋಷಕರು ಎದುರಿಸುತ್ತಿರುವ ಆತಂಕಗಳ ಬಗ್ಗೆ ಗಮನ ಹರಿಸಲಾಗುವುದು. ಪಂಚಮಹಾಭೂತಗಳನ್ನು ಸಂರಕ್ಷಿಸುವುದರ ಮೂಲಕ ಪರಿಸರ ಸಂರಕ್ಷಣೆ ಈ ಮೂಲಕ ಮಕ್ಕಳಿಗೆ ಉತ್ತಮ ಆರೋಗ್ಯ ಒದಗಿಸಲು ಹಾಗೂ ತುರ್ತು ಔಷಧ ಮತ್ತು ಚಿಕಿತ್ಸೆ(ಎಮರ್ಜೆನ್ಸಿ ಮೆಡಿಸೀನ್) ಕಡೆಗೆ ಹೆಚ್ಚಿನ ಗಮನ ಹರಿಸಲಾಗುವುದು. ಪ್ರತಿ ಎರಡು ತಿಂಗಳಿಗೊಮ್ಮೆ ಆನಲೈನ್ ಮೀಟಿಂಗ್ ನಡೆಸಿ ಮಕ್ಕಳ ಆರೋಗ್ಯ ಚಟುವಟಿಕೆಗಳ ಕುರಿತು ಚರ್ಚಿಸಲಾಗುವುದು ಎಂದು ತಿಳಿಸಿದರು.
ಡಾ. ಯೋಗೇಶ ಪಾರೀಖ ಮಾತನಾಡಿ, ಕರ್ನಾಟಕ ಚಿಕ್ಕಮಕ್ಕಳ ತಜ್ಞರ ಸಂಘ ಅತ್ಯುತ್ತಮವಾಗಿ ಕೆಲಸ ಮಾಡಿದೆ ಎಂದು ಶ್ಲಾಘಿಸಿದರು.
ಇದೇ ವೇಳೆ ಸಚಿವರು ಸಮ್ಮೇಳನದ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದರು. ಸಂಘದ ರಾಜ್ಯ ಕಾರ್ಯದರ್ಶಿ ಡಾ. ಸಿದ್ದು ಚರಕಿ ವರದಿ ವಾಚಿಸಿದರು.
ಸಮಕುಲಾಧಿಪತಿ ಡಾ. ವೈ.ಎಂ. ಜಯರಾಜ, ಕುಲಪತಿ ಡಾ. ಅರುಣ ಚಂ. ಇನಾಮದಾರ, ರಜಿಸ್ಟ್ರಾರ್ ಡಾ. ಆರ್.ವಿ. ಕುಲಕರ್ಣಿ, ಪ್ರಭಾರ ಪ್ರಾಚಾರ್ಯೆ ಡಾ. ತೇಜಶ್ವಿನಿ ವಲ್ಲಭ, ಚಿಕ್ಕಮಕ್ಕಳ ತಜ್ಞರ ಸಂಘದ ರಾಷ್ಟ್ರ ಮತ್ತು ರಾಜ್ಯ ಘಟಕಗಳ ಪದಾಧಿಕಾರಿಗಳಾದ ಡಾ. ಬಸವರಾಜ ಜಿ. ವಿ, ಡಾ. ಸಂತೋಷ ಸೊನ್ನ, ಡಾ. ಪ್ರೀತಿ ಗಲಗಲಿ, ಡಾ. ಕೆ. ರಾಜೇಂದ್ರನ, ಡಾ. ಅಭಿಷೇಕ ಫಡಕೆ, ಡಾ. ಎಲ್.ಎಚ್. ಬಿದರಿ, ಮಾಜಿ ಶಾಸಕ ಮತ್ತು ಚಿಕ್ಕಮಕ್ಕಳ ತಜ್ಞ ಡಾ. ಸಾರ್ವಭೌಮ ಬಗಲಿ, ಡಾ. ಆರ್.ಟಿ. ಪಾಟೀಲ, ಡಾ. ಎಂ.ಎಂ. ಪಾಟೀಲ, ಡಾ. ಎಸ್.ಎಸ್. ಕಲ್ಯಾಣಶೆಟ್ಟರ, ಡಾ. ಪರೀಕ್ಷಿತ ಕೋಟಿ, ಡಾ. ಶ್ರೀಶೈಲ ಗಿಡಗಂಟಿ, ಡಾ. ರವಿ ಬರಡೋಲ, ಡಾ. ಎಂ. ವೆಂಕಟಾಚಲಪತಿ, ಡಾ. ಸಿಂಗಾರವೇಲು, ಡಾ. ನಂದೀಶ ಬಿ, ಡಾ. ದುರ್ಗಪ್ಪ, ಡಾ. ವಿ.ಡಿ. ಪಾಟೀಲ ಮತ್ತಿತರರಿದ್ದರು.
ಡಾ. ಆರತಿ ಜಯಕುಮಾರ ಪ್ರಾರ್ಥಿಸಿದರು. ಡಾ. ಎಂ. ಎಂ. ಪಾಟೀಲ ಸ್ವಾಗತಿಸಿದರು. ಡಾ. ಎಸ್.ಎಸ್. ಕಲ್ಯಾಣಶೆಟ್ಟರ ವಂದಿಸಿದರು.