ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಎಂ.ಬಿ. ಪಾಟೀಲರು ಭೂಮಿ ಪೂಜೆ ಹಾಗೂ ಉದ್ಘಾಟನೆ ನೆರವೇರಿಸಿದರು. ಡಾ.ಗಂಗಾಧರ ಸಂಬಣ್ಣಿ, ಸಂಗಮೇಶ ಬಬಲೇಶ್ವರ, ಸೋಮನಾಥ ಕಳ್ಳಿಮನಿ ಮತ್ತಿತರರಿದ್ದಾರೆ. 
ವಿಜಯಪುರ

ಸಾರವಾಡದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ, ಬಾಕಿ ಕಾಮಗಾರಿ ಪೂರ್ಣ-ನೀರಾವರಿ ಸಂಪೂರ್ಣ ಎಂದ ಸಚಿವ ಎಂ.ಬಿ. ಪಾಟೀಲ

ಪ್ರಮುಖ ಮುಖ್ಯಾಂಶಗಳು

  • ಸಾರವಾಡ - ಬಬಲೇಶ್ವರ ರಸ್ತೆ ಸುಧಾರಣೆ
  • ಸಾರವಾಡ ತೊನಶ್ಯಾಳ ರಸ್ತೆ ಸುಧಾರಣೆ
  • ಡೋಣಿ ನದಿ ಹೂಳೆತ್ತುವ ಕಾರ್ಯಕ್ಕೆ ಚಾಲನೆ
  • ಚಿಕ್ಕಪ್ಪಯ್ಯ ಗುಡಿ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿ ಪೂಜೆ
  • ಶಾಲೆಯಲ್ಲಿ ಮಕ್ಕಳ ಆಟಿಕೆ ಸಾಧನಗಳ ಉದ್ಘಾಟನೆ
ವಿಜಯಪುರ: ಸಾರವಾಡ ಮತ್ತು ಸುತ್ತಮುತ್ತಲಿನ ತೊನಶ್ಯಾಳ, ದದಾಮಟ್ಟಿ, ಹೊನಗನಹಳ್ಳಿ, ಸವನಹಳ್ಳಿ, ಅತಾಲಟ್ಟಿ, ತೊರವಿ ಮುಂತಾದ ಗ್ರಾಮಗಳಿಗೆ ರೇವಣಸಿದ್ಧೇಶ್ವರ ಏತನೀರಾವರಿ ಯೋಜನೆ 2ನೇ ಹಂತದಲ್ಲಿ ನೀರಾವರಿ ಸೌಲಭ್ಯ ಒದಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.
ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದಲ್ಲಿ ಮಂಗಳವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ಹಾಗೂ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ನೀರಾವರಿಗೆ ಸಂಬಂಧಿಸಿದಂತೆ ಬಾಕಿ ಕಾಮಗಾರಿ ಪೂರ್ಣಗೊಳಿಸಿ ಜಿಲ್ಲೆಯನ್ನು ಸಂಪೂರ್ಣ ನೀರಾವರಿಗೊಳಪಡಿಸಲಾಗುವುದು. ಬಬಲೇಶ್ವರ ಮತಕ್ಷೇತ್ರದಲ್ಲಿ ಸಾರವಾಡ ಗ್ರಾಮ ಹೃದಯದಲ್ಲಿದೆ. ಈ ಗ್ರಾಮಕ್ಕೆ ಮೊದಲ ಆದ್ಯತೆ ನೀಡುತ್ತಿದ್ದೇವೆ. ಈ ಗ್ರಾಮಸ್ಥರ ಉಪಕಾರ ನನ್ನ ಮೇಲೆ ಇದೆ. 2018ರಲ್ಲಿ ಪ್ರದಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಇಲ್ಲಿಗೆ ಬಂದು ನನ್ನನ್ನು ಸೋಲಿಸಲು ಭರ್ಜರಿ ಪ್ರಚಾರ ಮಾಡಿದರೂ ಸಾರವಾಡ ಗ್ರಾಮಸ್ಥರು ನನಗೆ 1600 ಮತಗಳ ಲೀಡ್ ನೀಡಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.
ಸಾರವಾಡ ಈಶ್ವರ ದೇವಸ್ಥಾನದ ಸಮುದಾಯ ಭವನ ನಿರ್ಮಾಣಕ್ಕೆ ಎರಡು ಹಂತದಲ್ಲಿ ತಲಾ ರೂ. 50 ಲಕ್ಷದಂತೆ ಒಟ್ಟು ರೂ. 1 ಕೋಟಿ ಅನುದಾನ ನೀಡುತ್ತೇನೆ. ಮತಕ್ಷೇತ್ರದ 100 ಸರ್ಕಾರಿ ಶಾಲೆಗಳ ಪೈಕಿ ಈಗಾಗಲೇ 58 ಶಾಲೆಗಳಲ್ಲಿ ಕ್ರೀಡಾ ಸಲಕರಣೆಗಳನ್ನು ಅಳವಡಿಸಲಾಗಿದೆ. ಸಾರವಾಡದಲ್ಲಿ ಟೊಯೊಟಾ ಕಿರ್ಲೋಸ್ಕರ್ ಸಿಎಸ್‌ಆರ್ ಅನುದಾನದಲ್ಲಿ ಪ್ರಾಥಮಿಕ ಶಾಲೆ ಅಭಿವೃದ್ಧಿ ಮಾಡಲಾಗುವುದು. ಬಾಲಕಿಯರ ಮತ್ತು ಉರ್ದು ಶಾಲೆಯನ್ನೂ ಅಭಿವೃದ್ಧಿ ಪಡಿಸಲಾಗುವುದು. ಪ್ರಗತಿಪಥ ಯೋಜನೆಯಡಿ ಗ್ರಾಮೀಣ ರಸ್ತೆ ಅಭಿವೃದ್ಧಿ ಪಡಿಸಲಾಗುತ್ತಿದೆ. ಸಾರವಾಡದಲ್ಲಿ 110 ಕೆವಿ ಸ್ಟೇಷನ್ ನಿರ್ಮಾಣ, ಡೋಣಿ ಸೇತುವೆ ಅಗಲೀಕರಣ ಮಾಡಲಾಗುವುದು. ಗ್ರಾಮದಲ್ಲಿ ಮೂರು ಎಕರೆಯಲ್ಲಿ ಸುಸಜ್ಜಿತವಾಗಿ ನಿವೇಶನಗಳನ್ನು ಅಭಿವೃದ್ಧಿ ಪಡಿಸಿ 123 ದಲಿತ ಕುಟುಂಬಗಳಿಗೆ ಹಂಚಿಕೆ ಮಾಡಲಾಗುವುದು. ದದಾಮಟ್ಟಿ- ಜುಮನಾಳ ಕ್ರಾಸ್ ರಸ್ತೆ ಅಭಿವೃದ್ಧಿ, ಬಸ್ ನಿಲ್ದಾಣ ನಿರ್ಮಾಣ, ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆ, ಡೋಣಿ ನದಿ ಹೂಳೆತ್ತುವ ಕಾಮಗಾರಿ ಮಾಡಲಾಗುವುದು. ಡೋಣಿ ನದಿ ಹೂಳೆತ್ತುವ ಯೋಜನೆ ಪರಿಷ್ಕೃತ ಯೋಜನೆಯನ್ನು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಕಳುಹಿಸಲಾಗಿದೆ. ಒಂದು ವರ್ಷದೊಳಗೆ ಸಾರವಾಡ ಗ್ರಾಮಸ್ಥರ ಎಲ್ಲ ಬೇಡಿಕೆಗಳನ್ನು ಈಡೇರಿಸುತ್ತೇನೆ. ಜಿಲ್ಲೆಗೆ ಐದಾರು ಕೈಗಾರಿಕೆಗಳು ಬರಲಿವೆ. ವೈಜ್ಞಾನಿಕ ಕೃಷಿ ಕೈಗೊಳ್ಳಲು ಅಕ್ಷಯ ಕಲ್ಪ ಸಂಘಟನೆಯ ಜೊತೆ ಒಡಂಬಡಿಕೆ ಮಾಡಿಕೊಳ್ಳಲಾಗಿದ್ದು, ಹೈನುಗಾರಿಕೆ ಉತ್ತೇಜನ ನೀಡಲಾಗುವುದು ಎಂದರು.
ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿ, ಬಬಲೇಶ್ವರ ಮತಕ್ಷೇತ್ರ ರಾಜ್ಯದ 224 ಮತಕ್ಷೇತ್ರಗಳಲ್ಲಿ ಜನಪ್ರಿಯ ಮತ್ತು ಜನಾನುರಾಗಿಯಾಗಿದೆ. ಇದಕ್ಕೆ ಸಚಿವ ಎಂ.ಬಿ. ಪಾಟೀಲ ಅವರು ಕಾರಣ. ಅಭಿವೃದ್ಧಿಯ ಮೂಲಕ ಜನರಲ್ಲಿ ಮನಪರಿವರ್ತನೆ ಮಾಡಿದ್ದಾರೆ. ಜಾತ್ಯತೀತವಾಗಿ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ತಾಯಿ ಹೃದಯದ ಜನನಾಯಕರಾಗಿದ್ದಾರೆ ಎಂದು ಹೇಳಿದರು.
ಮುಖಂಡ ಸೋಮನಾಥ ಕಳ್ಳಿಮನಿ ಮಾತನಾಡಿ, ರಾಜಕೀಯ ಜೀವನದಲ್ಲಿ ಅಸಾಧ್ಯವಾದುದನ್ನು ಸಾಧ್ಯ ಮಾಡಿ ತೋರಿಸಿದ ನಾಯಕ ಎಂ.ಬಿ. ಪಾಟೀಲರು ಎಂದು ಕೊಂಡಾಡಿದರು. ಜಿಪಂ ಮಾಜಿ ಅಧ್ಯಕ್ಷ ವಿ.ಎಸ್. ಪಾಟೀಲ, ಮುಖಂಡ ಚನ್ನಪ್ಪ ಕೊಪ್ಪದ ಮಾತನಾಡಿದರು.
ರೈತ ಕಂಟೆಪ್ಪ ಕಣಬೂರ ಅಭಿಪ್ರಾಯ ಹಂಚಿಕೊಂಡರೆ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ವಿದ್ಯಾರ್ಥಿನಿ ಅನನ್ಯ ವಾಲಿ ಸಚಿವ ಎಂ.ಬಿ. ಪಾಟೀಲರ ಕುರಿತು ಸ್ವರಚಿತ ಕವನ ವಾಚಿಸಿದರು.
ದಾವಣಗೆರೆಯ ಜಸಾರಂಗಪ್ಪಯ್ಯ ಸ್ವಾಮೀಜಿ, ಸಾರವಾಡ ಹಿರೇಮಠದ ರೇಣುಕಸ್ವಾಮೀಜಿ, ಬಬಲೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಗೊಂಡ ಬಿರಾದಾರ, ಮುಖಂಡರಾದ ಸದಾಶಿವ ಚಿಕರೆಡ್ಡಿ, ಶರಣಪ್ಪ ಬಿದರಿ, ಈಶ್ವರ ಇನಾಮದಾರ, ಡಾ. ಗಂಗಾಧರ ಸಂಬಣ್ಣಿ, ಗ್ರಾಪಂ ಅಧ್ಯಕ್ಷ ಎಂ.ಎಸ್. ಪಾಟೀಲ, ಈಶ್ವರಪ್ಪ ಚಿಕರೆಡ್ಡಿ, ಜಯಗೌಡ ಪಾಟೀಲ, ಶಶಿಧರ ಬಿದರಿ, ಲೋಕೋಪಯೋಗಿ ಇಲಾಖೆ ಎಕ್ಸಿಕ್ಯೂಟಿವ್ ಇಂಜಿನಿಯರ್ ಸಿ.ಎಸ್. ಪೋಲಿಸ್‌ಪಾಟೀಲ, ಗದಿಗೆಪ್ಪ ಕಲಾದಗಿ ಮತ್ತಿತರರಿದ್ದರು.

ಕಾಮಗಾರಿಗಳ ವಿವರ

ಲೋಕೋಪಯೋಗಿ ಇಲಾಖೆಯ ರೂ. 10 ಕೋಟಿ ಅನುದಾನದಲ್ಲಿ ಸಾರವಾಡ - ಬಬಲೇಶ್ವರ ರಸ್ತೆಯ ಹಲಗಣಿ ಕ್ರಾಸ್‌ವರೆಗೆ ಸುಧಾರಣೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು.ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತ್ ರಾಜ್ ಇಲಾಖೆಯ ರೂ. 2 ಕೋಟಿ ಅನುದಾನದಲ್ಲಿ ಸಾರವಾಡ ತೊನಶ್ಯಾಳ ರಸ್ತೆ ಸುಧಾರಣೆ ಕಾಮಗಾರಿ, ಲೋಕೋಪಯೋಗಿ ಇಲಾಖೆಯ ರೂ. 5 ಕೋಟಿ ಅನುದಾನದಲ್ಲಿ ಸಾರವಾಡ - ದದಾಮಟ್ಟಿ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು.ರೂ.2 ಕೋಟಿ ವೆಚ್ಚದ ಡೋಣಿ ನದಿಯಲ್ಲಿರುವ ಹೂಳೆತ್ತುವ ಕಾರ್ಯಕ್ಕೆ ಚಾಲನೆ, ರೂ. 1 ಕೋಟಿ ವೆಚ್ಚದಲ್ಲಿ ಚಿಕ್ಕಪ್ಪಯ್ಯ ಗುಡಿ ರಸ್ತೆ ಸುಧಾರಣೆ ಕಾಮಗಾರಿ ಭೂಮಿ ಪೂಜೆ, ಎಂಪಿಎಸ್ ಶಾಲೆಯಲ್ಲಿ ಮಕ್ಕಳ ಆಟಿಕೆ ಸಾಧನಗಳ ಉದ್ಘಾಟನೆ ನೆರವೇರಿಸಲಾಯಿತು.