ತಿಕೋಟಾ ತಾಲೂಕಿನ ಕೋಟ್ಯಾಳ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಸುಸಜ್ಜಿತ ಶಾಲಾ ಕಟ್ಟಡದ ಉದ್ಘಾಟನೆ ನೆರವೇರಿಸಿ ಸಚಿವ ಎಂ.ಬಿ. ಪಾಟೀಲ ಮಾತನಾಡಿದರು. ಮುಖ್ಯ ಹಣಕಾಸು ಅಧಿಕಾರಿ ಭಾಸ್ಕರ ಆನಂದರಾವ, ಡಾ. ಹರಿ ಮರಾರ, ಆನಂದರಾವ ಕುಲಕರ್ಣಿ ಇತರರಿದ್ದಾರೆ. 
ವಿಜಯಪುರ

ಹೆಣ್ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸಿ, ಪೋಷಕರಿಗೆ ಸಚಿವ ಎಂ.ಬಿ. ಪಾಟೀಲ ಸೂಚನೆ

ಪ್ರಮುಖ ಮುಖ್ಯಾಂಶಗಳು

  • ಪ್ರೌಢ ಶಾಲಾ ಕಟ್ಟಡ ಲೋಕಾರ್ಪಣೆ
  • ಕೋಟ್ಯಾಳ ಗ್ರಾಮದಲ್ಲಿ ಕಾರ್ಯಕ್ರಮ
  • ಸಿ.ಎಸ್.ಆರ್ ಅನುದಾನ ಬಳಕೆ
  • ರೂ. 3.25 ಕೋಟಿ ರೂಪಾಯಿ ವೆಚ್ಚ
ವಿಜಯಪುರ: ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಸಾಕಷ್ಟು ಕ್ರಮ ಕೈಗೊಳ್ಳಲಾಗಿದೆ. ಆತ್ಯಾಧುನಿಕ ಕಲಿಕಾ ಸೌಲಭ್ಯ ಕಲ್ಪಿಸಲಾಗಿದ್ದು, ಶೈಕ್ಷಣಿಕ ವಾತಾವರಣ ನಿರ್ಮಾಣಗೊಂಡಿದೆ. ವಿದ್ಯಾರ್ಥಿಗಳು ಈ ಸೌಲಭ್ಯ ಸದುಪಯೋಗಪಡಿಸಿಕೊಳ್ಳಬೇಕು. ಪೋಸಕರು ಹೆಣ್ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಬೇಕೆಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಹೇಳಿದರು.
ಶುಕ್ರವಾರ ತಿಕೋಟಾ ತಾಲೂಕಿನ ಕೋಟ್ಯಾಳ ಗ್ರಾಮದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರತಿಷ್ಠಾನ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ಸಂಸ್ಥೆಗಳ ಸಿ.ಎಸ್.ಆರ್ ಅನುದಾನದಡಿ 3.25 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸುಸಜ್ಜಿತ ಶಾಲಾ ಕಟ್ಟಡದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಜಗತ್ತಿನಲ್ಲಿ ದೊಡ್ಡದಾದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತನ್ನ ಆದಾಯದ ಮರುಹೂಡಿಕೆ ಮಾಡಿದ ಏಕೈಕ ವಿಮಾನ ನಿಲ್ದಾಣವಾಗಿದೆ. ಆ ಲಾಭಾಂಶದಲ್ಲಿ ಸಮಾಜಮುಖಿ ಕಾರ್ಯ ನಿರ್ವಹಿಸುವುದರಲ್ಲಿ ಸದಾ ಮುಂದಿರುವ ಈ ಸಂಸ್ಥೆ, ಕೋಟ್ಯಾಳದಲ್ಲಿ ಗುಣಮಟ್ಟದ ಹಾಗೂ ಸುಂದರ ಶಾಲಾ ಕಟ್ಟಡ ನಿರ್ಮಿಸಿಕೊಟ್ಟಿದೆ. ಗ್ರಾಮೀಣ ಪ್ರತಿಭೆಗಳಿಗೆ ಈ ಶಾಲಾ ಕಟ್ಟಡ ಅನುಕೂಲವಾಗಲಿದ್ದು, ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳ ಶಿಕ್ಷಣಕ್ಕೂ ಹೆಚ್ಚು ಒತ್ತು ನೀಡಿದರೆ, ಗ್ರಾಮೀಣ ಬಾಲಕಿಯರಿಗೆ ಈ ಶಾಲೆ ಭವಿಷ್ಯದ ದಿನಗಳಲ್ಲಿ ವರದಾನವಾಗಲಿದೆ ಎಂದರು.

ಕಟ್ಟಡದ ವಿವರ

ಒಟ್ಟು 3.25 ಕೋಟಿ ರೂಪಾಯಿ ವೆಚ್ಚದಲ್ಲಿ, 7,000 ಚದರ ಅಡಿ ವಿಸ್ತೀರ್ಣದಲ್ಲಿ ಅತ್ಯಾಧುನಿಕವಾಗಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಕಟ್ಟಡ ನಿರ್ಮಿಸಲಾಗಿದೆ. ಇದರೊಂದಿಗೆ 800 ಚದರ ಅಡಿಯ ಹಳೆಯ ಕಟ್ಟಡದ ಪುನರುಜ್ಜೀವನ ಕಾರ್ಯವನ್ನು ಸಹ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಶಾಲೆಯಲ್ಲಿ 1 ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಏಳು ಸುಸಜ್ಜಿತ ಕೊಠಡಿಗಳನ್ನು ಸಿದ್ಧಪಡಿಸಲಾಗಿದ್ದು, ಮಕ್ಕಳಲ್ಲಿ ನಾವೀನ್ಯತೆ ಮತ್ತು ಚಟುವಟಿಕೆ ಆಧಾರಿತ ಕಲಿಕೆಯನ್ನು ಪ್ರೋತ್ಸಾಹಿಸಲು ಸ್ಟೇಮ್‌ಲ್ಯಾಬ್ ಹಾಗೂ ನಲಿ-ಕಲಿ ಕೊಠಡಿಗಳನ್ನು ವಿಶೇಷವಾಗಿ ಸ್ಥಾಪಿಸಲಾಗಿದೆ. ವಿದ್ಯಾರ್ಥಿಗಳ ಸುಲಭ ಕಲಿಕೆಗೆ ಪೂರಕವಾಗಿ 135 ಹೊಸ ಪೀಠೋಪಕರಣಗಳು, ಬಾಲಕ ಮತ್ತು ಬಾಲಕಿಯರಿಗಾಗಿ ಪ್ರತ್ಯೇಕ 10 ಸುಸಜ್ಜಿತ ಶೌಚಗೃಹ ಸೇರಿ ಆಧುನಿಕ ಸೌಲಭ್ಯವುಳ್ಳ ಅಡುಗೆ ಕೊಠಡಿ ಹಾಗೂ ವಿಶಾಲವಾದ ಊಟದ ಸಭಾಂಗಣವನ್ನು ಇಲ್ಲಿ ನಿರ್ಮಿಸಲಾಗಿದೆ ಎಂದರು.

ಹೊನವಾಡದಲ್ಲೂ ನಿರ್ಮಾಣ

ಹೊನವಾಡದಲ್ಲೂ ಹೈಸ್ಕೂಲ್ ಕಟ್ಟಡ ಕಟ್ಟಿಕೊಡುತ್ತಿದ್ದಾರೆ. ಬಡವರ, ಕೂಲಿ ಕಾರ್ಮಿಕರ ಮಕ್ಕಳಿಗೆ ಇಂತಹ ಅವಕಾಶ ಕಲ್ಪಿಸಿಕೊಟ್ಟು ಅವರು ಉತ್ತಮ ಶಿಕ್ಷಣ ಪಡೆಯಲು ಅವಕಾಶ ಒದಗಿಬರುತ್ತದೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದರು.
ಸಿಎಸ್‌ಆರ್ ಅನುದಾನದಲ್ಲಿ ಶಾಲಾ ಕಾಲೇಜಿಗೂ ಜಿಲ್ಲಾದ್ಯಂತ ಶಾಲಾ ಕಟ್ಟಡ ಸ್ಮಾರ್ಟ್ ಕ್ಲಾಸ್ ಕಟ್ಟಡ, ಪಾಠೋಪಕರಣ, ಮೈದಾನ, ಪೀಠೋಪಕರಣ ಒದಗಿಸಲಾಗುವುದು ಎಂದರು.

ನೀರಾವರಿಗೆ ಆದ್ಯತೆ

ನೀರಾವರಿಯಿಂದ ಭೂಮಿ ಬೇಡಿಕೆ ಹೆಚ್ಚಾಗಿದೆ. ಇಂದು ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಇಲ್ಲ. ಇದಕ್ಕೆ ನೀರಾವರಿ ಯೋಜನೆ ಒಂದು ಕಡೆಯಾದರೆ ಕೆರೆ ಹಾಗೂ ಹಳ್ಳ ತುಂಬುವುದು ಇನ್ನೊಂದೆಡೆ ನಡೆದಿದೆ. ಹಾಗಾಗಿ ಈ ಭಾಗದ ಜಮೀನಿನ ಬೇಡಿಕೆ ಹೆಚ್ಚಾಗುತ್ತಲೇ ಇದೆ ಎಂದರು.
ಪ್ರತಿ ಕಿಮೀ ಚೆಕ್ ಡ್ಯಾಂ ನಿರ್ಮಾಣ ಮಾಡಿ ನೀರು ಇಂಗಿಸಿ ಅಂತರ್ಜಲ ಮಟ್ಟ ಹೆಚ್ಚಿಸುವ ಯೋಜನೆ ಪ್ರಗತಿಯಲ್ಲಿದೆ. ಶಿಕ್ಷಣ, ಬಾಂದಾರ ನಿರ್ಮಾಣ, ನೀರಾವರಿ, ವಿದ್ಯುತ್ ಸೇರಿ ವಿವಿಧ ಅಭಿವೃದ್ಧಿ ಕಾರ್ಯ ಮಾಡಲಾಗುತ್ತಿದೆ ಎಂದರು.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಹರಿ ಮರಾರ ಅವರು ಮಾತನಾಡಿ, ಈ ಸುಂದರ ಕಟ್ಟಡ ವಿದ್ಯಾರ್ಥಿಗಳ ಭವ್ಯ ಭವಿತವ್ಯ ಬೆಳಗುವ ಜ್ಞಾನ ದೇಗುಲವಾಗಿದೆ ಎಂದರು.
ಮುಖ್ಯ ಹಣಕಾಸು ಅಧಿಕಾರಿ ಭಾಸ್ಕರ ಆನಂದರಾವ ಅವರು ಮಾತನಾಡಿ, ಶಿಕ್ಷಣ, ಮೂಲಸೌಲಭ್ಯ ನೀಡುತ್ತಿರುವ ಸಚಿವರ ಕಾರ್ಯ ಅನನ್ಯವಾಗಿದೆ. ರಾಷ್ಟ್ರದ ಭವಿಷ್ಯ ಶಾಲಾ ಕಟ್ಟಡದಲ್ಲಿ ನಿರ್ಮಾಣಗೊಳ್ಳುತ್ತದೆ ಎಂಬ ಮಾತಿದೆ. ಹಾಗಾಗಿ ಈ ಶಾಲೆಯಯಲ್ಲಿ ಭವಿಷ್ಯ ನಿರ್ಮಿಸಿಕೊಳ್ಳಲಿರುವ ಮಕ್ಕಳು ದೊಡ್ಡ ಕನಸು ಕಾಣುವ ಮೂಲಕ ಬದುಕಿನಲ್ಲಿ ಉನ್ನತ ಸಾಧನೆ ಮಾಡಬೇಕು ಎಂದರು.
ಭೂಮಿ ದಾನ ಮಾಡಿದ ಕಮಲಾ ಮುರುಗೇಶ ನಿರಾಣಿ ಅವರು ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಮಾತನಾಡಿದರು.
ಪ್ರಮುಖರಾದ ಆನಂದರಾವ ಕುಲಕರ್ಣಿ, ಅನೀಲಕುಮಾರ ಪಾಟೀಲ, ವಿ.ಎಸ್. ಪಾಟೀಲ ಇತರರಿದ್ದರು.