ವಿಜಯಪುರದ ಆಶ್ರಮ ರಸ್ತೆಯಲ್ಲಿರುವ ಆನಂದ ನಗರದಲ್ಲಿ ದಾನಮ್ಮದೇವಿ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ಸಚಿವ ಎಂ.ಬಿ. ಪಾಟೀಲರನ್ನು ಸನ್ಮಾನಿಸಲಾಯಿತು. ಶ್ರೀಗುರು ಅಭಿನವ ಮೃತ್ಯುಂಜಯ ಸ್ವಾಮೀಜಿ ಮತ್ತಿತರರಿದ್ದಾರೆ.
ವಿಜಯಪುರ : ಸಾವಿರಾರು ಎಕರೆ ಬಂಜರು ಭೂಮಿಯನ್ನು ನೀರಾವರಿ ಮೂಲಕ ನಂದನವನವನ್ನಾಗಿ ಮಾಡಿರುವ ಸಚಿವ ಎಂ.ಬಿ. ಪಾಟೀಲರು ಜನೋಪಯೋಗಿಯಾಗಿ ಬದುಕಬೇಕು ಎಂಬ ಸಿದ್ಧಾಂತದಡಿ ಕಾಯಕ ಮಾಡುತ್ತಿದ್ದಾರೆ. ಎಂದು ಸುಕ್ಷೇತ್ರ ಮಣಕವಾಡ- ಹಿರೇವಡ್ಡಟ್ಟಿ ಅನ್ನದಾನೀಶ್ವರ ದೇವಮಂದಿರ ಮಹಾಮಠದ ಶ್ರೀಗುರು ಅಭಿನವ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ನಗರದ ಆಶ್ರಮ ರಸ್ತೆಯ ಆನಂದ ನಗರದಲ್ಲಿರುವ ಶ್ರೀ ದಾನಮ್ಮದೇವಿ ದೇವಸ್ಥಾನದ 15ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಶ್ರೀಗಳು ಮಾತನಾಡಿದರು.
ಸಚಿವರು ಸಿದ್ಧೇಶ್ವರ ಶ್ರೀಗಳ ಆಶಯದಂತೆ ಕೆಲಸ ಮಾಡುತ್ತಿದ್ದಾರೆ. ಐದಾರು ವರ್ಷದ ಹಿಂದೆ ನಾವು ಶ್ರೀಮಠದ ಬಳಿ 20 ಎಕರೆ ಜಮೀನನ್ನು ಜನಸೇವೆಗಾಗಿ ಖರೀದಿಸಿದ್ದೆವು. ಗೃಹ ಸಚಿವರಾಗಿದ್ದ ಎಂ.ಬಿ. ಪಾಟೀಲರನ್ನು ಆಹ್ವಾನಿಸಿ ಭೂಮಿ ಪೂಜೆಯನ್ನು ಮಾಡಲಾಗಿತ್ತು. ಸಚಿವರ ಕೈಗುಣದಿಂದ ಇಂದು ಅಲ್ಲಿ 40 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳು ಪೂರ್ಣಗೊಂಡಿದ್ದು ಸಮಾಜಮುಖಿ ಕೆಲಸಗಳು ಆಗುತ್ತಿದೆ ಎಂದು ಹೇಳಿದರು.
ಸಚಿವ ಎಂ.ಬಿ. ಪಾಟೀಲ ಮಾತನಾಡಿ, ಸ್ವಾಮೀಜಿಗಳು ಪ್ರಾರಂಭಿಸಿರುವ ಶಿಕ್ಷಣ ಸಂಸ್ಥೆಯಲ್ಲಿ ಸಾವಿರಾರು ಮಕ್ಕಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಯಾವುದೇ ಸಂಸ್ಥೆ ಬೆಳೆಯಬೇಕಾದರೆ ಅದರ ಹಿಂದಿರುವ ವ್ಯಕ್ತಿ ಮುಖ್ಯವಾಗುತ್ತಾರೆ. ಅದೇ ರೀತಿ ಸುಕ್ಷೇತ್ರ ಮಣಕವಾಡ- ಹಿರೇವಡ್ಡಟ್ಟಿ ಅನ್ನದಾನೀಶ್ವರ ದೇವಮಂದಿರ ಮಹಾಮಠದ ಶ್ರೀಗುರು ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳ ಶ್ರಮದಿಂದಾಗಿ ಅಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ ಎಂದು ಹೇಳಿದರು.
ಸಚಿವ ಎಂ.ಬಿ. ಪಾಟೀಲರನ್ನು ದೇವಸ್ಥಾನದ ಪರವಾಗಿ ಸ್ವಾಮೀಜಿ ಸನ್ಮಾನಿಸಿ, ಆಶೀರ್ವದಿಸಿದರು.
ಕೋಡಿಮಠದ ಉತ್ತರಾಽಕಾರಿ ಚೇತನ ಸ್ವಾಮೀಜಿ, ತೆಲಸಂಗದ ವೀರೇಶ ದೇವರು, ಶಿವಲಿಂಗದೇವರು, ಸಚ್ಚಿದಾನಂದ ದೇವರು, ಅಖಿಲ ಭಾರತ ವೀರಶೈವ ಮಹಾಸಭೆ ಜಿಲ್ಲಾಧ್ಯಕ್ಷ ವಿ.ಸಿ. ನಾಗಠಾಣ, ದೇವಸ್ಥಾನ ಟ್ರಸ್ಟ್ ಸಮಿತಿ ಅಧ್ಯಕ್ಷ ಅಪ್ಪು ಇಟ್ಟಂಗಿ, ಮುಖಂಡರಾದ ಎಂ.ಬಿ. ಮೂಲಿಮನಿ, ರವೀಂದ್ರ ಬಾವೂರ, ಎಸ್.ಎಸ್. ಪಾಟೀಲ ಕನ್ನೂರ, ಎಂ.ಎಸ್. ಮೇಟಿ, ರುದ್ರಗೌಡ ಪಾಟೀಲ, ಸಿದ್ದು ಖ್ಯಾತಪ್ಪನವರ, ಡಿ.ಐ. ದುರ್ಗದ, ಪ್ರೇಮಾ ನಂದಿ, ಎಚ್.ಎಂ. ಬೋರಾವತ, ಬಸವರಾಜ ಮರನೂರ ಮತ್ತಿತರರಿದ್ದರು.