ವಿಜಯಪುರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಉಸ್ತವಾರಿ ಸಚಿವ ಎಂ.ಬಿ. ಪಾಟೀಲ ಸುದ್ದಿಗೋಷ್ಠಿ ನಡೆಸಿದರು. ನಾಗಠಾಣ ಶಾಸಕ ವಿಠಲ ಕಟಕದೊಂಡ, ಜಿಲ್ಲಾಧಿಕಾರಿ ಡಾ. ಆನಂದ ಕೆ, ಜಿಪಂ ಸಿಇಒ ರಿಷಿ ಆನಂದ ಇತರರಿದ್ದಾರೆ.
- ಬರ ಪರಿಶೀಲನೆ ಕುರಿತು ಮಾಹಿತಿ
- ವೈಜ್ಞಾನಿಕ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಕೆ
- ತ್ವರಿತವಾಗಿ ಪರಿಹಾರ ಒದಗಿಸಲು ಕ್ರಮ
ವಿಜಯಪುರ: ‘ರಾಜ್ಯ ತೀವ್ರ ಬರದಿಂದ ತತ್ತರಿಸಿದೆ. ಹೀಗಾಗಿ ರಾಜ್ಯಾದ್ಯಂತ ಸಚಿವರು ಪ್ರವಾಸ ಕೈಗೊಂಡು ಬರ ಪರಿಶೀಲನೆ ನಡೆಸುತ್ತಿದ್ದಾರೆ. ಶೀಘ್ರದಲ್ಲೇ ವೈಜ್ಞಾನಿಕ ವರದಿ ಸಿದ್ಧಪಡಿಸಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಭರವಸೆ ನೀಡಿದರು.
‘ಕುಡಿಯುವ ನೀರು, ಜಾನುವಾರುವಿಗೆ ಮೇವಿನ ಲಭ್ಯತೆ, ಬೆಳೆ ವಿಮೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ರೈತರು ಬೆಳೆ ವಿಮೆ ಮಾಡಿಸಿಕೊಂಡಿರುವುದು ತೃಪ್ತಿಕರ ಬೆಳವಣಿಗೆ. ಶೀಘ್ರದಲ್ಲೇ ರೈತರ ಬೆಳೆ ಹಾನಿಗೆ ಸಂಬಂಧಿಸಿದಂತೆ ವರದಿ ಸಿದ್ಧಪಡಿಸಿ ಮುಂದಿನ ಕ್ರಮಕ್ಕಾಗಿ ಮುಖ್ಯಮಂತ್ರಿಗಳಿಗೆ ಸಲ್ಲಿಸುವುದಾಗಿ’ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
‘ಸದ್ಯ ಬರಪರಿಶೀಲನೆ ನಡೆಸಲಾಗಿ ಮಳೆ ಪ್ರಮಾಣ ಸಮರ್ಪಕವಾಗಿದ್ದರೂ ಸಕಾಲಕ್ಕೆ ಮಳೆ ಬಂದಿಲ್ಲ. ಹೀಗಾಗಿ ಬೆಳೆ ಒಣಗುತ್ತಿವೆ. ರೈತನೋರ್ವ ಮಳೆಯ ನಿರೀಕ್ಷೆಯಲ್ಲಿ ಒಂದಾದ ಮೇಲೊಂದರಂತೆ ಬಿತ್ತನೆ ಮಾಡಿ ಕೈಸುಟ್ಟುಕೊಂಡಿರುವುದು ಕಂಡು ಬಂದಿದ್ದು, ತೀವ್ರ ಸಂಕಟವನ್ನುಂಟು ಮಾಡಿದೆ. ತೊಗರಿ, ಹತ್ತಿ ಬಿತ್ತನೆ ಮಾಡಿದರೂ ಸಮರ್ಪಕವಾಗಿ ಬೆಳೆ ಬಂದಿಲ್ಲ. ಇನ್ನೂ ಕೆಲವರು ಬೇರೊಬ್ಬರ ಜಮೀನು ಪಡೆದು ಬಿತ್ತನೆ ಮಾಡಿದ್ದು, ಅಂಥವರ ಸ್ಥಿತಿಯಂತೂ ತೀರ ಘೋರ. ಹೀಗಾಗಿ ಸರ್ಕಾರದಿಂದ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಅತ್ಯಂತ ಬದ್ಧತೆಯಿಂದ, ಪ್ರಾಮಾಣಿಕತೆಯಿಂದ ಶ್ರಮಿಸುವುದಾಗಿ’ ತಿಳಿಸಿದರು.
ನೀರಿನ ಸಮಸ್ಯೆ ಇಲ್ಲ
ಸದ್ಯ ನೀರಿನ ಸಮಸ್ಯೆ ಇಲ್ಲ. ಮಹಾರಾಷ್ಟ್ರದಲ್ಲಿ ಮಳೆಯಾದ ಹಿನ್ನೆಲೆ ಜಲಾಶಯಗಳು ಭರ್ತಿಯಾಗಿವೆ. ಕೃಷ್ಣಾ ಮತ್ತು ಭೀಮಾ ನದಿಗೆ ನೀರು ಹರಿದು ಬರುತ್ತಿದೆ. ಆಲಮಟ್ಟಿ ಜಲಾಶಯದಲ್ಲಿ 33 ಟಿಎಂಸಿ ನೀರಿನ ಲಭ್ಯತೆ ಇದೆ. ಕಾಲುವೆಗೆ ನೀರು ಹರಿಸಲಾಗುತ್ತಿದೆ. ಶೇ.94ರಷ್ಟು ನೀರಿನ ಲಭ್ಯತೆ ಇದೆ. ಕುಡಿಯುವ ನೀರಿನ ತೊಂದರೆಯಿಲ್ಲ. ಕುಡಿಯುವ ನೀರಿನ ಉದ್ದೇಶಕ್ಕಾಗಿಯೇ ಕಾಮಗಾರಿ ಕೈಗೊಳ್ಳಲು ಪ್ರತಿ ಮತಕ್ಷೇತ್ರಕ್ಕೆ ರೂ.1 ಕೋಟಿ ಅನುದಾನ ನೀಡಲಾಗಿದೆ. ಒಟ್ಟು 12 ಕೋಟಿ ರೂಪಾಯಿ ಅನುದಾನ ಒದಗಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಪರಿಹಾರ ಜಮೆಯಲ್ಲಿ ದಾಖಲೆ
2025-26ನೇ ಸಾಲಿನಲ್ಲಿ ಪ್ರವಾಹ, ಅತಿವೃಷ್ಟಿಯಿಂದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ 300384 ರೈತರಿಗೆ ಎಸ್‌ಡಿಆರ್‌ಎಫ್‌ಮತ್ತು ಎನ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ 328.72 ಕೋಟಿ ರೂ. ಹಾಗೂ ರಾಜ್ಯ ಸರ್ಕಾರ ಘೋಷಿಸಿದಂತೆ ಹೆಚ್ಚುವರಿಯಾಗಿ 243.02 ಕೋಟಿ ಸೇರಿ ಒಟ್ಟು 571.44 ಕೋಟಿ ರೂ. ಪರಿಹಾರವನ್ನು ಡಿಬಿಟಿ ಮೂಲಕ ನೇರವಾಗಿ ರೈತರ ಖಾತೆಗಳಿಗೆ ವಿತರಿಸಲಾಗಿದೆ ಎಂದ ಅವರು, ಇಷ್ಟೊಂದು ಹೆಚ್ಚಿನ ಮೊತ್ತದ ಪರಿಹಾರ ನೀಡಿದ ಮೊದಲ ಜಿಲ್ಲೆ ಎಂಬ ಹೆಗ್ಗಳಿಕೆಗೆ ವಿಜಯಪುರ ಜಿಲ್ಲೆ ಪಾತ್ರವಾಗಿದೆ ಎಂದರು.
ಬೆಳೆ ವಿಮೆ ಮಾಡಿಸುವಲ್ಲಿಯೂ ಜಿಲ್ಲೆಯ ಸಾಧನೆ ಆಶಾದಾಯಕವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 1.10 ಲಕ್ಷ ಜನ ಹೆಚ್ಚುವರಿಯಾಗಿ ಬೆಳೆ ವಿಮೆ ಮಾಡಿಸಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಒಟ್ಟು 2.56 ಲಕ್ಷ ಜನ ಬೆಳೆ ವಿಮೆ ಮಾಡಿಸಿದ್ದಾರೆ ಎಂದರು.
ಬೆಳೆ ಹಾನಿ-ಬಿತ್ತನೆ ವಿವರ
ಜಿಲ್ಲೆಯಲ್ಲಿ 7.75 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿಯಿತ್ತು. ಆದರೆ ಈವರೆಗೆ 6.79 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಶೇ. 87.7 ರಷ್ಟು ಪ್ರದೇಶದಲ್ಲಿ ಮಾತ್ರ ವಿವಿಧ ಬೆಳೆಗಳ ಬಿತ್ತನೆಯಾಗಿದೆ. 2026ನೇ ಸಾಲಿನಲ್ಲಿ ಜೂನ್‌ನಲ್ಲಿ ವಾಡಿಕೆ ಮಳೆ 90.4ಮಿಮೀ ಪೈಕಿ ಕೇವಲ 72.6 ಮಿಮೀ ಮಾತ್ರ ಮಳೆಯಾಗಿದೆ. ಅಂದರೆ ‘-20’ ಮಿಮೀ ಮಳೆಯಾಗಿದೆ. ಜುಲೈನಲ್ಲಿ ವಾಡಿಕೆಯಂತೆ 72.5ರಷ್ಟು ಮಳೆಯಾಗಿದೆ. ಆ. 7ರವರೆಗೆ ವಾಡಿಕೆಯಂತೆ 19.4 ಮಿಮೀ ಮಳೆಯಾಗಬೇಕಿತ್ತು. ಆದರೆ ಕೇವಲ 12.5 ಮಿಮೀ ಮಳೆಯಾಗಿದ್ದರಿಂದ ‘-36‘ ಮಿಮೀ ಮಳೆಯಾಗಿದೆ. ಜೂ. 1 ರಿಂದ ಆ. 8ರವರೆಗೆ ವಾಡಿಕೆಯಂತೆ 182.3 ಮಿಮೀ ಮಳೆಯಾಗಬೇಕಿತ್ತು. ಆದರೆ 157.6 ಮಿಮೀ ಮಳೆಯಾಗಿದೆ. ಇದರಿಂದಾಗಿ ‘-14‘ ಮಿಮೀ ಮಳೆ ಕೊರತೆಯಾಗಿದೆ ಎಂದು ಸಚಿವರು ವಿವರಿಸಿದರು.
ಜಿಲ್ಲೆಯಲ್ಲಿ ಅಂದಾಜು 268616 ದೊಡ್ಡ ಮತ್ತು 805963 ಸಣ್ಣ ಜಾನುವಾರು ಇವೆ. ಅಂದಾಜು 383089 ಮೆಟ್ರಿಕ್ ಟನ್ ಒಣ ಮೇವು ರೈತರ ಬಳಿ ದಾಸ್ತಾನಿದೆ. ಈ ಮೇವು ಮುಂದಿನ 28 ವಾರಗಳಿಗೆ ಸಾಕಾಗುತ್ತದೆ ಎಂದರು.
ನಾಗಠಾಣ ಶಾಸಕ ವಿಠಲ ಕಟಕದೊಂಡ, ವಿಡಿಎ ಅಧ್ಯಕ್ಷ ಡಾ. ಗಂಗಾಧರ ಸಂಬಣ್ಣಿ, ಜಿಲ್ಲಾಧಿಕಾರಿ ಡಾ. ಆನಂದ ಕೆ, ಜಿಪಂ ಸಿಇಒ ರಿಷಿ ಆನಂದ, ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ, ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಸಿದ್ರಾಮ ಬರಗಿಮಠ, ಕೃಷಿ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಇತರರಿದ್ದರು.