- ಶಾಸಕರು-ವಿಧಾನ ಪರಿಷತ್ ಸದಸ್ಯರ ಧ್ವನಿ
- ಪಿಪಿಪಿ ಮಾದರಿ ಕೈಬಿಡಲು ಒತ್ತಾಯ
- ವೈದ್ಯಕೀಯ ಶಿಕ್ಷಣ ಸಚಿವರಿಂದ ಸಕಾರಾತ್ಮಕ ಸ್ಪಂದನೆ
ವಿಜಯಪುರ: ಪಿಪಿಪಿ ಮಾದರಿ ಕೈ ಬಿಟ್ಟು ಸರ್ಕಾರದಿಂದಲೇ ವೈದ್ಯಕೀಯ ಕಾಲೇಜ್ ಸ್ಥಾಪಿಸಲು ಆಗ್ರಹಿಸಿ 85 ದಿನಗಳಿಂದ ನಡೆಯುತ್ತಿರುವ ಹೋರಾಟದ ಬಿಸಿ ಇದೀಗ ಚಳಿಗಾಲದ ಅಧಿವೇಶನಕ್ಕೂ ತಟ್ಟಿದೆ.
ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಕೇಶವ ಪ್ರಸಾದ್, ಹಣಮಂತ ನಿರಾಣಿ ಅಧಿವೇಶನದಲ್ಲಿ ಪ್ರಸ್ತಾಪಿಸುವ ಮೂಲಕ ಸರ್ಕಾರದ ಪರವಾಗಿರುವ ತಮ್ಮ ಬದ್ಧತೆ ಮತ್ತು ಕಾಳಜಿ ಪ್ರದರ್ಶಿಸಿದ್ದಾರೆ. ಸರ್ಕಾರದಿಂದಲೇ ವೈದ್ಯಕೀಯ ಕಾಲೇಜ್ ಸ್ಥಾಪಿಸಬೇಕೆಂಬ ಆಶಯ ಈ ನಾಯಕರ ಪ್ರಶ್ನೆ ಹಾಗೂ ಚರ್ಚಿತ ವಿಷಯಗಳಲ್ಲಿ ಅಡಗಿದ್ದು ಕಂಡು ಬಂದಿತು.
ಈ ಹಿಂದೆಯೂ ಶಾಸಕ ಯಶವಂತರಾಯಗೌಡ ಪಾಟೀಲ, ಮಾಜಿ ಶಾಸಕ ದೇವಾನಂದ ಚವಾಣ್, ಪ್ರಕಾಶ ರಾಠೋಡ ಸೇರಿದಂತೆ ಅನೇಕ ನಾಯಕರು ಈ ಕುರಿತು ಸದನದಲ್ಲಿ ಪ್ರಸ್ತಾಪಿಸಿದ್ದರು. ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಪಿಪಿಪಿ ಮಾದರಿಯಲ್ಲಿ ವೈದ್ಯಕೀಯ ಕಾಲೇಜ್ ಸ್ಥಾಪಿಸುವುದಾಗಿ ಪ್ರತಿಕ್ರಿಯಿಸಲಾಗಿತ್ತಾದರೂ ಆಗೆಲ್ಲ ಇಷ್ಟೊಂದು ಚರ್ಚೆಯಾಗಿರಲಿಲ್ಲ. ನಂತರ ಬಂದ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸದನದಲ್ಲಿ ಪಿಪಿಪಿ ಮಾದರಿಯಲ್ಲಿ ಸ್ಥಾಪಿಸುವುದಾದರೆ ತಮಗೇ ಕೊಡುವಂತೆ ಹೇಳಿದರು. ಅಲ್ಲಿಂದ ಹೊತ್ತಿಕೊಂಡ ಹೋರಾಟದ ಕಿಡಿ ಇದೀಗ ಚಳಿಗಾಲದ ಅಧಿವೇಶನದವರೆಗೂ ತಲುಪಿದೆ.
ಹೋರಾಟ ಸ್ಥಳಕ್ಕೆ ಭೇಟಿ ನೀಡಿದ್ದ ಜನಪ್ರತಿನಿಧಿಗಳ ಪೈಕಿ ಸಚಿವ ಎಂ.ಬಿ. ಪಾಟೀಲರು ಹೋರಾಟಗಾರರ ನಿಯೋಗ ಕರೆದೊಯ್ದು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿಸಿದರು. ಆದರೆ, ಈ ಕುರಿತು ಹೋರಾಟಗಾರರಲ್ಲಿ ತೃಪ್ತಿ ಕಾಣಿಸಲಿಲ್ಲ. ಬಳಿಕ ಸಚಿವ ಶಿವಾನಂದ ಪಾಟೀಲ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದರು. ಇದೀಗ ಶಾಸಕ ಯಶವಂತರಾಗೌಡ ಪಾಟೀಲರು ಚುಕ್ಕೆ ಗುರುತಿನ ಪ್ರಶ್ನೆ ಮೂಲಕ ಸರ್ಕಾರದ ಗಮನ ಸೆಳೆದರೆ ಹಣಮಂತ ನಿರಾಣಿ ಶೂನ್ಯವೇಳೆಯಲ್ಲಿ ಸರ್ಕಾರದ ಗಮನ ಸೆಳೆದರು. ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ್ ಚುಕ್ಕೆ ಗುರುತಿಲ್ಲದ ಪ್ರಶ್ನೆ ಮೂಲಕ ಸರ್ಕಾರದ ನಿಲುವು ತಿಳಿಯಲೆತ್ನಿಸಿದರು.
ಮಲತಾಯಿ ಧೋರಣೆ ಹೋಗಲಾಡಿಸಿ; ಹಣಮಂತ ನಿರಾಣಿ
ಉತ್ತರ ಕರ್ನಾಟಕ ಮಲತಾಯಿ ಧೋರಣೆಗೆ ಒಳಗಾಗುತ್ತಲೇ ಇದೆ. ಈ ಧೋರಣೆ ಹೋಗಲಾಡಿಸುವ ನಿಟ್ಟಿನಲ್ಲಿ ವಿಜಯಪುರ ಜಿಲ್ಲೆಯಲ್ಲಿ ಉದ್ದೇಶಿತ ಪಿಪಿಪಿ ಮಾದರಿ ಕೈ ಬಿಟ್ಟು ಸರ್ಕಾರದಿಂದಲೇ ವೈದ್ಯಕೀಯ ಕಾಲೇಜ್ ಸ್ಥಾಪಿಸಬೇಕೆಂದು ಹಣಮಂತ ನಿರಾಣಿ ವಿಧಾನ ಪರಿಷತ್‌ನಲ್ಲಿ ಆಗ್ರಹಿಸಿದರು.
ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ 153 ಎಕರೆ ಜಮೀನು ಮೀಸಲಿದೆ. ಅಗತ್ಯ ಹಾಸಿಗೆ ಸೌಲಭ್ಯ, ಉಪಕರಣಗಳಿವೆ. ಇಂಥ ಆಸ್ಪತ್ರೆಯನ್ನು ಖಾಸಗಿ ಸಹಭಾಗಿತ್ವಕ್ಕೆ ನೀಡುವುದು ಸರಿಯಲ್ಲ. ಇದರಿಂದ ಬಡ, ಮಧ್ಯಮ ವರ್ಗದವರಿಗೆ ವೈದ್ಯಕೀಯ ಶಿಕ್ಷಣ ಮರೀಚಿಕೆಯಾಗಲಿದೆ. ಉಚಿತ ಹಾಗೂ ಕಡಿಮೆ ವೆಚ್ಚದ ಚಿಕಿತ್ಸೆ ಸಿಗುವುದಿಲ್ಲ. ಹೀಗಾಗಿ ಸರ್ಕಾರವೇ ನೇರವಾಗಿ ಕಾಲೇಜ್ ನಡೆಸಿದರೆ ಉತ್ತಮ ಎಂದಿದ್ದಾರೆ.
ವಿಜಯಪುರ ಮತ್ತು ಬಾಗಲಕೋಟೆಯ ಜನ ಹೆಚ್ಚಿನ ಚಿಕಿತ್ಸೆಗಾಗಿ ಹೊರರಾಜ್ಯಗಳಿಗೆ ಹೋಗುವ ಅನಿವಾರ್ಯತೆ ಇದೆ. ಹೀಗಾಗಿ ಏಮ್ಸ್ ಮಾದರಿ ಆಸ್ಪತ್ರೆ ನಿರ್ಮಿಸಬೇಕು. ಇದರಿಂದ ಉತ್ತಮ ಆರೋಗ್ಯ ಕಂಡುಕೊಳ್ಳಲು ಸಹಕಾರಿಯಾಗಲಿದೆ ಎಂದರು.
ಅನಿರ್ದಿಷ್ಟಾವಧಿ ಧರಣಿ ಗಮನಕ್ಕಿದೆಯೇ?
ಸರ್ಕಾರಿ ವೈದ್ಯಕೀಯ ಕಾಲೇಜ್‌ಗಾಗಿ ವಿಜಯಪುರದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸರ್ಕಾರದ ಗಮನಕ್ಕಿದೆಯೇ? ಇದ್ದರೆ ಸರ್ಕಾರ ಕೈಗೊಂಡ ಕ್ರಮ ಏನು? ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪನೆ ಯಾವಾಗ? ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹಾಗೂ ಕೇಶವ ಪ್ರಸಾದ್ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವೈದ್ಯಕೀಯ ಶಿಕ್ಷಣ ಸಚಿವರು, ರಾಜ್ಯದ ಪ್ರತಿ ಜಿಲ್ಲೆಗೊಂದು ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪಿಸಬೇಕೆಂಬುದು ಸರ್ಕಾರದ ನೀತಿಯಾಗಿದೆ. ಹೊಸ ವೈದ್ಯಕೀಯ ಕಾಲೇಜ್ ಸ್ಥಾಪಿಸಲು ಅಂದಾಜು 610 ಕೋಟಿಗಳ ಆನಾವರ್ತಕ ವೆಚ್ಛ ಹಾಗೂ 60 ಕೋಟಿ ಆವರ್ತಕ ವೆಚ್ಚದ ಅವಶ್ಯಕತೆ ಇದೆ. ಅದರಂತೆ ಅನುದಾನದ ಲಭ್ಯತೆ ಆಧರಿಸಿ ಸರ್ಕಾರಿ ವೈದ್ಯಕೀಯ ಕಾಲೇಜು ಹೊಂದಿರದ ಜಿಲ್ಲೆಗಳಲ್ಲಿ ಪಿಪಿಪಿ ಮಾದರಿಯಲ್ಲಿ ವೈದ್ಯಕೀಯ ಕಾಲೇಜ್ ಪ್ರಾರಂಭಿಸಲು ಸರ್ಕಾರದಿಂದ ಪೂರ್ವಭಾವಿ ಸಭೆ ನಡೆಸಿ ‘ಐಡೆಕ್’ ಸಂಸ್ಥೆಯನ್ನು ‘ಟ್ರಾನ್‌ಜಕ್ಷನ್ ಅಡ್‌ವೈಸರ್’ ಆಗಿ ನೇಮಿಸಲಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಸರ್ಕಾರದಿಂದಲೇ ವೈದ್ಯಕೀಯ ಕಾಲೇಜ್ ಆರಂಭಿಸಲು ಆಗ್ರಹಿಸಿ ಧರಣಿ ನಡೆಯುತ್ತಿದ್ದು, ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಗಣ್ಯರ ಸಭೆ ನಡೆಸಿ ಪರಿಶೀಲಿಸುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಆರ್.ಪಾಟೀಲ ಪ್ರತಿಕ್ರಿಯಿಸಿದ್ದಾರೆ.