ವಿಜಯಪುರ ಹೊರವಲಯದ ಇಂಡಿ ರಸ್ತೆಯಲ್ಲಿರುವ ಪಾಂಗ್ರೂನ್ ದೊಡ್ಡಿಯ ಸಂಚಾರಿ ಕುರಿಗಾಹಿ ಮಹಿಳೆಯ ರೊಂದಿಗೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಸಂವಾದ ನಡೆಸಿದರು. 
ವಿಜಯಪುರ

ಸಂಚಾರಿ ಕುರಿಗಾಹಿ ಮಹಿಳೆಯರ ಸುರಕ್ಷೆಗೆ ಕ್ರಮ

ಪ್ರಮುಖ ಮುಖ್ಯಾಂಶಗಳು

  • ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಸೂಚನೆ
  • ಸರ್ಕಾರದ ಯೋಜನೆಗಳ ಲಾಭ ಪಡೆಯಿರಿ
ವಿಜಯಪುರ :

ಸಂಚಾರಿ ಕುರಿಗಾಹಿ ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕು. ತಮ್ಮ ದೊಡ್ಡಿಗಳಿರುವ ಸ್ಥಳಗಳ ಮಾಹಿತಿಯನ್ನು ಸಮೀಪದ ಪೊಲೀಸ್ ಠಾಣೆಗಳಿಗೆ ನೀಡಿ, ಯಾವುದೇ ಸಮಸ್ಯೆ ಎದುರಾದಲ್ಲಿ ತಕ್ಷಣ 112 ತುರ್ತು ಸಹಾಯವಾಣಿಗೆ ಕರೆ ಮಾಡಿ ನೆರವು ಪಡೆಯಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಹೇಳಿದರು.

ನಗರದ ಹೊರ ವಲಯದ ಇಂಡಿ ರಸ್ತೆಯಲ್ಲಿರುವ ಪಾಂಗ್ರೂನ್ ದೊಡ್ಡಿಯ ಸಂಚಾರಿ ಕುರಿಗಾಹಿ ಮಹಿಳೆಯರೊಂದಿಗೆ ಸೋಮವಾರ ಸಂವಾದ ನಡೆಸಿ, ಸಂಚಾರಿ ಕುರಿಗಾಹಿಗಳಿಗಾಗಿ ಸರ್ಕಾರ ಜಾರಿಗೊಳಿಸಿರುವ ವಿವಿಧ ಯೋಜನೆಗಳು ಹಾಗೂ ಸೌಲಭ್ಯಗಳ ಕುರಿತು ಸಮಗ್ರ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದ ಅವರು, ಸಂಚಾರಿ ಕುರಿಗಾಹಿಗಳಿಗಾಗಿ ಕುರಿಗಾಹಿಗಳು ಯಾವ ಯಾವ ಪ್ರದೇಶಗಳಲ್ಲಿ ವಾಸ್ತವ್ಯ ಹೂಡಿದ್ದಾರೆ ಎಂಬುದನ್ನು ಗುರುತಿಸಿ, ಸಂಬಂಧಪಟ್ಟ ಅಧಿಕಾರಿಗಳು ಆಯಾ ಸ್ಥಳಗಳಿಗೆ ಭೇಟಿ ನೀಡಿ ಅವರಿಗೆ ಲಭ್ಯವಿರುವ ಸರ್ಕಾರಿ ಯೋಜನೆಗಳು, ಸೌಲಭ್ಯಗಳು ಹಾಗೂ ಹಕ್ಕುಗಳ ಕುರಿತು ಮಾಹಿತಿ ನೀಡಬೇಕು ಎಂದು ಸೂಚನೆ ನೀಡಿದರು.
ಸಂಚಾರಿ ಕುರಿಗಾಹಿಗಳ ಕುರಿ ಹಾಗೂ ಮೇಕೆಗಳು ಆಕಸ್ಮಿಕವಾಗಿ ಮೃತಪಟ್ಟ ಸಂದರ್ಭದಲ್ಲಿ ಸರ್ಕಾರದ ಅನುಗ್ರಹ ಯೋಜನೆಯಡಿ ದೊರೆಯುವ ಪರಿಹಾರದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.
ಬಸ್ ವ್ಯವಸ್ಥೆ ಕಲ್ಪಿಸಿ: ಹಂಚಿನಾಳ ಗ್ರಾಮದ ಪಾಂಗ್ರೂನ್ ದೊಡ್ಡಿಯಿಂದ ಬೇರೆ ಸ್ಥಳಗಳಿಗೆ ಶಾಲೆಗೆ ತೆರಳುವ ಮಕ್ಕಳು ಹಾಗೂ ನಗರ ಪ್ರದೇಶಕ್ಕೆ ತೆರಳುವ ಸಾರ್ವಜನಿಕರ ಅನುಕೂಲಕ್ಕಾಗಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ತಾತ್ಕಾಲಿಕ ಬಸ್ ನಿಲ್ದಾಣ ನಿರ್ಮಿಸಿ, ಅಗತ್ಯ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಬೇಕು ಎಂದು ಅವರು ಹೇಳಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಸಂತೋಷ್ ಕುಮಾರ್ ಎಚ್., ವಿಜಯಪುರ ತಾಲೂಕು ತಹಸೀಲ್ದಾರ್ ಪ್ರಶಾಂತ್ ಚನಗೊಂಡ, ವಿವಿಧ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಸಂಚಾರಿ ಕುರಿಗಾಹಿ ಮಹಿಳೆಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.