ಮುದ್ದೇಬಿಹಾಳ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕುಡಿಯುವ ನೀರಿನ ಸಮಸ್ಯೆಗಳ ಕುರಿತು ತಾಲೂಕು ಮಟ್ಟದ ಅಧಿಕಾರಿಗಳ ಮತ್ತು ಪಿಡಿಒಗಳ ತುರ್ತು ಸಭೆಯನ್ನು ಶಾಸಕ ಸಿ.ಎಸ್. ನಾಡಗೌಡ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಯಿತು. ತಹಸೀಲ್ದಾರ್ ಕೀರ್ತಿ ಚಾಲಕ, ತಾ.ಪಂ. ಇಒ ಸಂಗನಗೌಡ ಬಿರಾದಾರ, ತಾಳಿಕೋಟೆ ಇಒ ಅನಸೂಯಾ ಚಲವಾದಿ ಮತ್ತಿತರರಿದ್ದರು.
- ಶಾಸಕ ಸಿ.ಎಸ್. ನಾಡಗೌಡ ಸೂಚನೆ
- ತಾಲೂಕು ಮಟ್ಟದ ಅಧಿಕಾರಿಗಳ ಸಭೆ
ಮುದ್ದೇಬಿಹಾಳ: ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮುದ್ದೇಬಿಹಾಳ, ತಾಳಿಕೋಟೆ, ನಿಡಗುಂದಿ ಹಾಗೂ ನಾಲತವಾಡ ಪಟ್ಟಣ ಸೇರಿ ತಾಲೂಕಿನ ಯಾವುದೇ ಹಳ್ಳಿಗಳಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಪಿಡಿಒಗಳು ಹದ್ದಿನ ಕಣ್ಣಿಡಬೇಕು. ಕೆಲಸದಲ್ಲಿ ಬೇಜವಾಬ್ದಾರಿ ತೋರುವ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಶಿಸ್ತು ಕ್ರಮ ಅನಿವಾರ್ಯ ಎಂದು ಶಾಸಕ ಸಿ.ಎಸ್. ನಾಡಗೌಡ ಎಚ್ಚರಿಕೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕುಡಿಯುವ ನೀರಿನ ಸಮಸ್ಯೆಗಳ ಕುರಿತು ತಾಲೂಕು ಮಟ್ಟದ ಅಧಿಕಾರಿಗಳ ಮತ್ತು ಪಿಡಿಒಗಳ ತುರ್ತು ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಮೂಕಿಹಾಳ ಬಹುಹಳ್ಳಿ ಕುಡಿಯುವ ನೀರಿನ ಯೋಜನೆಯಡಿ ಬರುವ ಶಿವಪುರ, ಹಗರಗೊಂಡ, ನಾಗೂರ ಗ್ರಾಮಗಳಲ್ಲಿ ಟ್ಯಾಂಕ್ ತುಂಬುತ್ತಿಲ್ಲ ಎಂಬ ದೂರಿಗೆ ಪ್ರತಿಕ್ರಿಯಿಸಿದ ಶಾಸಕರು, ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮಕ್ಕೆ ಆದೇಶಿಸಿದರು.
ಮಿಣಜಗಿ ಗ್ರಾಮದ ಜೆಜೆಎಂ ಕಾಮಗಾರಿಯಲ್ಲಿ ವಿಳಂಬ ಮಾಡುತ್ತಿರುವ ಗುತ್ತಿಗೆದಾರರನ್ನು ಬ್ಲಾಕ್‌ಲಿಸ್ಟ್‌ಗೆ ಸೇರಿಸಲು ಸೂಚನೆ ನೀಡಿದರು. ಜಿವಿಪಿಆರ್ ಕಂಪನಿಗೂ ಕೆಲಸದ ಬಗ್ಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲು ತಿಳಿಸಿದರು.
ಅಡವಿ ಹುಲಗಬಾಳ ತಾಂಡದಲ್ಲಿ ಕುಡಿಯುವ ನೀರು ಯೋಗ್ಯವಾಗಿಲ್ಲ. ಅಲ್ಲಿಗೆ ತಕ್ಷಣ ಶುದ್ಧ ಕುಡಿಯುವ ನೀರಿನ ಘಟಕ ಒದಗಿಸಲು ಕುಡಿಯುವ ಅಧಿಕಾರಿ ಆರ್.ಎಸ್. ಹಿರೇಗೌಡರಿಗೆ ಸೂಚಿಸಲಾಯಿತು.
ಚವನಬಾವಿ ಗ್ರಾಮದಲ್ಲಿ ನೀರಿನ ಲಭ್ಯತೆ ಕಡಿಮೆ ಇರುವುದನ್ನು ಪಿಡಿಒ ನಿರ್ಮಲಾ ತೋಟದ ಸಭೆ ಗಮನಕ್ಕೆ ತಂದಾಗ, ಚವನಬಾವಿ ಗ್ರಾಮದಲ್ಲಿ ಕುಡಿಯುವ ನೀರಿನ ಪರ್ಯಾಯ ವ್ಯವಸ್ಥೆ ಮಾಡಲು ತಾ.ಪಂ. ಇಒ, ಕುಡಿಯುವ ನೀರು ಸರಬರಾಜು ಅಧಿಕಾರಿಗೆ ಶಾಸಕ ಸೂಚಿಸಿದರು.
ಬಸರಕೋಡ ಬಹುಹಳ್ಳಿ ಯೋಜನೆ ನಿರ್ವಹಣೆ ಸರಿಯಿಲ್ಲದ ಕಾರಣ ನೀರು ಹೊಲಗಳಿಗೆ ಪೋಲಾಗುತ್ತಿದೆ. ಕೂಡಲೇ ಹೊಸ ಟೆಂಡರ್ ಕರೆದು ವ್ಯವಸ್ಥೆ ಸರಿಪಡಿಸಲು ಸೂಚಿಸಲಾಯಿತು. ರಕ್ಕಸಗಿ, ಬಂಗಾರಗುಂಡ, ಕಪನೂರ, ಬಲದಿನ್ನಿ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಹಾಗೂ ನಾಗಬೇನಾಳ ಮತ್ತು ವಿರೇಶನಗರ ಗ್ರಾಮಗಳಿಗೆ ನೀರು ಸರಿಯಾಗಿ ತಲುಪದ ಬಗ್ಗೆ ಚರ್ಚಿಸಲಾಯಿತು.\
ತಾಲೂಕಿನ ಹಳ್ಳಿಗಳು ಮೈಸೂರು ನಗರದಂತೆ ಸ್ವಚ್ಛವಾಗಿರಬೇಕು. ಬಳಬಟ್ಟಿ, ವಡವಡಗಿ, ದೇವೂರ ಹಾಗೂ ಯರಝರಿ ಗ್ರಾಮಗಳಲ್ಲಿ ತಕ್ಷಣ ಸ್ವಚ್ಛತಾ ಕಾರ್ಯಕೈಗೊಳ್ಳಿ ಎಂದ ಶಾಸಕರು, ಗ್ರಾಮ ಪಂಚಾಯತಿ ಆಸ್ತಿಗಳನ್ನು ಸ್ವಂತ ಆಸ್ತಿಯಂತೆ ರಕ್ಷಿಸಬೇಕು ಎಂದು ಪಿಡಿಒಗಳಿಗೆ ಕಿವಿಮಾತು ಹೇಳಿದರು.
ಪತ್ರಿಕೆಯಲ್ಲಿ ಸುದ್ದಿ ಬಂದ ನಂತರ ಅಧಿಕಾರಿಗಳು ಪತ್ರ ಬರೆಯುವವರೆಗೆ ಕಾಯಬೇಡಿ, ನಿಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಛಾಟಿ ಬೀಸಿದರು. ಆಲೂರು ಮತ್ತು ಯರಗಲ್ಲ ಗ್ರಾಮಗಳ ಆರ್‌ಒ ಪ್ಲ್ಯಾಂಟ್ ಸಮಸ್ಯೆಗಳನ್ನು ಕೂಡಲೇ ಸರಿಪಡಿಸಲು ತಿಳಿಸಿದರು.
ಮಳೆ ಕೊರತೆಯಿರುವ ಕಾರಣ ರೈತರಿಗೆ ಬೀಜ ಮತ್ತು ಗೊಬ್ಬರದ ಸಮಸ್ಯೆಯಾಗದಂತೆ ಕೃಷಿ ಅಧಿಕಾರಿಗಳು ಎಚ್ಚರ ವಹಿಸಬೇಕು. ಇ-ಸ್ವತ್ತು ವಿಳಂಬದ ಬಗ್ಗೆ ಸಾರ್ವಜನಿಕರ ಆಗ್ರಹವಿದ್ದು, ಅದನ್ನು ಕೂಡಲೇ ಸರಿಪಡಿಸಬೇಕು. ಹುಲ್ಲೂರ-ಜಟ್ಟಗಿ ತಾಂಡಾದಲ್ಲಿನ ಸರ್ಕಾರಿ ಜಾಗದ ಅತಿಕ್ರಮಣ ತೆರವಿಗೆ ನೋಟಿಸ್ ನೀಡಿ ಕ್ರಮ ಕೈಗೊಳ್ಳಲು ಸೂಚಿಸಿದರು.
ತಹಸೀಲ್ದಾರ್ ಕೀರ್ತಿ ಚಾಲಕ, ತಾ.ಪಂ. ಇಒ ಸಂಗನಗೌಡ ಬಿರಾದಾರ, ತಾಳಿಕೋಟೆ ಇಒ ಅನಸೂಯಾ ಚಲವಾದಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ಆರ್.ಎಸ್. ಹಿರೇಗೌಡರ, ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಕುಡಿಯುವ ನೀರು ಸರಬರಾಜು ಇಲಾಖೆಯ ಇಂಜಿನಿಯರ್, ಪಿಡಿಒ ಉಪಸ್ಥಿತರಿದ್ದರು.