ವಿಜಯಪುರ ನಗರದಲ್ಲಿ ಉದ್ಯೋಗಕಾಂಕ್ಷಿಗಳು ಎಐಡಿವೈಒ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಎಐಡಿವೈಒ ರಾಜ್ಯಾಧ್ಯಕ್ಷ ಶರಣಪ್ಪ ಉದ್ಬಾಳ, ಸಿದ್ದಲಿಂಗ ಬಾಗೇವಾಡಿ, ಸಾನಿಯಾ ಇನಾಮದಾರ ಇತರರಿದ್ದಾರೆ. 
ವಿಜಯಪುರ

ಉದ್ಯೋಗಾಕಾಂಕ್ಷಿಗಳಿಂದ ಬೃಹತ್ ಪ್ರತಿಭಟನೆ, ಎಐಡಿವೈಒ ನೇತೃತ್ವದಲ್ಲಿ ಭವ್ಯ ಮೆರವಣಿಗೆ

ಪ್ರಮುಖ ಮುಖ್ಯಾಂಶಗಳು

  • 56,432 ಹುದ್ದೆಗಳಿಗೆ ವಿಳಂಬವಿಲ್ಲದೆ ಅಧಿಸೂಚನೆ ಹೊರಡಿಸಿ
  • ನೇಮಕಾತಿ ಪ್ರಕ್ರಿಯೆ ಪಾರದರ್ಶಕತೆಯಿಂದ ನಡೆಯಲಿ
  • ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ಕೈಬಿಡಬೇಕು
  • ವಾರ್ಷಿಕ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಬೇಕು
ವಿಜಯಪುರ: ರಾಜ್ಯ ಸಚಿವ ಸಂಪುಟ ಅನುಮೋದಿಸಿರುವ 56,432 ಹುದ್ದೆಗಳ ಭರ್ತಿಗೆ ಕೂಡಲೇ ಅಧಿಸೂಚನೆ ಹೊರಡಿಸಲು ಆಗ್ರಹಿಸಿ ನೂರಾರು ಉದ್ಯೋಗಾಕಾಂಕ್ಷಿಗಳು ಗುರುವಾರ ಎಐಡಿವೈಒ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಉದ್ಯೋಗಾಕಾಂಕ್ಷಿಗಳು ಬಳಿಕ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಎಐಡಿವೈಒ ರಾಜ್ಯಾಧ್ಯಕ್ಷ ಶರಣಪ್ಪ ಉದ್ಬಾಳ ಮಾತನಾಡಿ, ನಿರುದ್ಯೋಗ ಸಮಸ್ಯೆಯ ಗಂಭೀರತೆಯಿಂದಾಗಿ ಕಳೆದ ಐದಾರು ತಿಂಗಳಿನಿಂದ ರಾಜ್ಯಾದ್ಯಂತ ಉದ್ಯೋಗ ಆಕಾಂಕ್ಷಿಗಳು ಹೋರಾಟ ನಡೆಸುತ್ತಿದ್ದಾರೆ. ಪರಿಣಾಮವಾಗಿ ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿಗಳು ಐದು ವರ್ಷ ವಯೋಮಿತಿ ಸಡಿಲಿಕೆ ಮಾಡಿದ್ದರು ಹಾಗೂ 56,000 ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದರು. ಆದರೆ, ಅಧಿವೇಶನ ಮುಗಿದು 3-4 ತಿಂಗಳಾದರೂ ನೇಮಕ ಪ್ರಕ್ರಿಯೆ ಆರಂಭವಾಗಿಲ್ಲ ಎಂದರು.
56,432 ಹುದ್ದೆಗಳ ಭರ್ತಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು ಸ್ವಾಗತಾರ್ಹ. ಆದರೆ ಕಾಲ ವಿಳಂಬ ಮಾಡದೆ ಈ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಸಹ ಕರೊನಾದ ಕಾರಣಿ ನೀಡಿ ನೇಮಕ ಪ್ರಕ್ರಿಯೆ ನಡೆಸಿರಲಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಂದು ಲಕ್ಷ ಹುದ್ದೆಗಳ ಭರ್ತಿ ಮಾಡುವುದಾಗಿ ಯುವಜನತೆಗೆ ಭರವಸೆ ನೀಡಿತ್ತು. ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಆಗಿದೆ. ಆದರೆ ಒಳ ಮೀಸಲಾತಿ ನೆಪ ಮುಂದೆ ಮಾಡಿ ನೇಮಕ ಪ್ರಕ್ರಿಯೆ ನಡೆಸುತ್ತಿಲ್ಲ. ಇದರಿಂದ ಯುವಜನತೆ ತೀವ್ರವಾದ ನಿರಾಸೆಗೆ ಒಳಗಾಗಿದ್ದಾರೆ. ಬಹಳ ಕಷ್ಟಪಟ್ಟು ಸಾಲ ಸೋಲಗಳನ್ನು ಮಾಡಿಕೊಂಡು ತರಬೇತಿ ಪಡೆದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿದ ಯುವಜನತೆ ನೇಮಕಾತಿ ನಡೆಯದೇ ಇರುವುದರಿಂದ ಮಾನಸಿಕವಾಗಿ ಕುಗ್ಗಿ ಹೋಗಿ, ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದರು.
ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯ ರಾಜ್ಯ ಸಂಚಾಲಕ ಸಿದ್ದಲಿಂಗ ಬಾಗೇವಾಡಿ ಮಾತನಾಡಿ, ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) 2023-24ನೇ ಸಾಲಿನ 384 ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ನೇಮಕಕ್ಕಾಗಿ 2025ರ ಫೆ.13ರಂದು ಅಧಿಸೂಚನೆ ಹೊರಡಿಸಿ, ಕಳೆದ ಮೇ ತಿಂಗಳಲ್ಲಿ ಪರೀಕ್ಷೆ ನಡೆಸಿತ್ತು. ಈಗ ಮುಖ್ಯ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದೆ. ಆದರೆ ಒಂದೇ ಬ್ಲಾಕ್‌ನ ಹತ್ತಾರು ಅಭ್ಯರ್ಥಿಗಳು ಅರ್ಹತೆ ಪಡೆದಿರುವುದು ಅನುಮಾನಕ್ಕೆ ಕಾರಣವಾದ ಬಗ್ಗೆ ವರದಿಯಾಗಿದೆ. ಇಂಥ ಘಟನೆಗಳಿಂದಾಗಿ ಉದ್ಯೋಗಾಕಾಂಕ್ಷಿಗಳು ಮಾನಸಿಕವಾಗಿ ಕುಗ್ಗುತ್ತಿದ್ದಾರೆಂದರು.
ಉದ್ಯೋಗಾಕಾಂಕ್ಷಿ ಸಾನಿಯಾ ಇನಾಮದಾರ ಮಾತನಾಡಿ, ಪರೀಕ್ಷೆಯ ಅರ್ಜಿ ಶುಲ್ಕ ಕಡಿಮೆ ಮಾಡಲು ಒತ್ತಾಯಿಸಿದರು.
ಎಐಡಿವೈಒನ ಜಿಲ್ಲಾಧ್ಯಕ್ಷ ಶ್ರೀಕಾಂತ ಕೊಂಡಗೂಳಿ, ಜಿಲ್ಲಾ ಕಾರ್ಯದರ್ಶಿ ಸಿದ್ರಾಮಯ್ಯ ಹಿರೇಮಠ ಹಾಗೂ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯ ರಾಜ್ಯ ಘಟಕದ ಸದಸ್ಯ ರಘುವೀರ ಬಿಸನಾಳ ನೇತೃತ್ವ ವಹಿಸಿದ್ದರು.
ಬಸವರಾಜ ಮುಲಿಯಾಬಾದ, ಸಂಗೀತಾ ಮತ್ತಿತರರಿದ್ದರು.