ವಿಜಯಪುರ ಜಿಲ್ಲಾಡಳಿತಕ್ಕೆ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ಮಲ್ಲಿಕಾರ್ಜುನ ಬಟಗಿ, ಸಂಗನಬಸವ ಶ್ರೀಗಳು, ಉಮೇಶ ವಾಲೀಕಾರ ಮತ್ತಿತರರಿದ್ದಾರೆ. 
ವಿಜಯಪುರ

ಬೆಳೆ ಹಾನಿ ಪರಿಹಾರಕ್ಕೆ ಆಗ್ರಹ, ರೈತರಿಂದ ಬೃಹತ್ ಪ್ರತಿಭಟನೆ

ಪ್ರಮುಖ ಮುಖ್ಯಾಂಶಗಳು

  • ಬೆಳೆಗಳು ನಿರಂತರ ಮಳೆಯಿಂದ ಸಂಪೂರ್ಣ ಹಾನಿ
  • ರೈತರಿಗೆ ಪರಿಹಾರ ಕಲ್ಪಿಸಲು ಆಗ್ರಹ
  • ರೈತರಿಂದ ಬೃಹತ್ ಪ್ರತಿಭಟನಾ ಮೆರವಣಿಗೆ
  • ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ
ವಿಜಯಪುರ: ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ತೊಗರಿ, ಹತ್ತಿ, ಶೇಂಗಾ, ಮೆಕ್ಕೆ ಜೋಳ, ಸಜ್ಜಿ, ಈರುಳ್ಳಿ ಸೇರಿದಂತೆ ಇನ್ನಿತರ ಬೆಳೆಗಳು ನಿರಂತರ ಮಳೆಯಿಂದ ಸಂಪೂರ್ಣ ಹಾನಿಯಾಗಿದ್ದು ಈವರೆಗೂ ಪರಿಹಾರ ಸಿಕ್ಕಿಲ್ಲ. ಹೀಗಾಗಿ ಕೂಡಲೇ ರೈತರಿಗೆ ಪರಿಹಾರ ಕಲ್ಪಿಸಲು ಆಗ್ರಹಿಸಿ ನಗರದಲ್ಲಿ ಸೋಮವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಪದಾಧಿಕಾರಿಗಳು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿದರಲ್ಲದೇ ಕೂಡಲೇ ಪರಿಹಾರ ಕಲ್ಪಿಸಬೇಕೆಂದು ಆಗ್ರಹಿಸಿದರು. ಬಳಿಕ ಜಿಲ್ಲಾಡಳಿತ ಕಚೇರಿವರೆಗೆ ಆಗ್ರಮಿಸಿ ಅಪರ ಜಿಲ್ಲಾಧಿಕಾರಿ ಸೋಮನಿಂಗ ಗೆಣ್ಣೂರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಮುಂಗಾರು ಹಂಗಾಮಿನಲ್ಲಿ ಅತಿಯಾದ ಮಳೆ ಹಾಗೂ ಪ್ರವಾಹದಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ತೊಗರಿ ಬೆಳೆ ಹಾನಿಗೊಳಗಾದ ರೈತರಿಗೆ ಕಲಬುರಗಿ ಜಿಲ್ಲೆಯಲ್ಲಿ ಮೊದಲ ಕಂತಿನಲ್ಲಿ 263 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ರೈತರ ಖಾತೆಗೂ ಜಮೆಯಾಗಿದೆ. ಆದರೆ, ವಿಜಯಪುರ ಜಿಲ್ಲೆಯ ರೈತರಿಗೆ ಬಿಡಿಗಾಸು ಸಹ ಬಂದಿಲ್ಲವೆಂದು ಆರೋಪಿಸಿದರು.
ಮುಂಗಾರು ಬೆಳೆಯಂತೂ ಹಾಳಾಗಿ ಹೋಯ್ತು. ಹಿಂಗಾರು ಬೆಳೆಗಳಾದ ಜೋಳ, ಕಡಲೆ ಇವುಗಳನ್ನಾದರೂ ಬಿತ್ತನೆ ಮಾಡಿ ಬದುಕಲಿಕ್ಕಾದರೂ ಸರ್ಕಾರ ಅನುಕೂಲ ಕಲ್ಪಿಸಬೇಕು. ತ್ವರಿತವಾಗಿ ಪರಿಹಾರ ಬಿಡುಗಡೆ ಮಾಡಿದರೆ ಆ ಹಣದಲ್ಲಾದರೂ ಬಿತ್ತನೆಗೆ ಅನುಕೂಲವಾಗಲಿದೆ ಎಂದರು.
ವಾಲ್ಮೀಕಿ ಸಮಾಜದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಟಗಿ, ಹುಣಶ್ಯಾಳ ಪಿ.ಬಿ. ಗ್ರಾಮದ ಸಂಗನಬಸವ ಶ್ರೀಗಳು, ಬಸವನ ಬಾಗೇವಾಡಿ ತಾಲೂಕಾಧ್ಯಕ್ಷ ಉಮೇಶ ವಾಲೀಕಾರ, ಮಹಾದೇವಪ್ಪ ತೇಲಿ, ಸಿದ್ದನಗೌಡ ಪಾಟೀಲ, ಹೊನಕೇರೆಪ್ಪ ತೆಲಗಿ, ಗುರುಲಿಂಗಪ್ಪ ಪಡಸಲಗಿ, ಈರಣ್ಣ ದೇವರಗುಡಿ, ಮೌಲಾಸಾಬ ಸಾತಲಗಾವಿ, ರಾಮನಗೌಡ ಹಾದಿಮನಿ, ಎಚ್. ನಂದುಣಗಿ, ಅಶೋಕ ಉಪ್ಪಲದಿನ್ನಿ, ಗುರುರಾಜ ಪಡಶೆಟ್ಟಿ, ಲಕ್ಷ್ಮಣ ಕಂಬಾಗಿ, ಗಿರೀಶ ಕಲಘಟಗಿ, ಜುಲಾಶ ಮುಲ್ಲಾ, ಬಸವರಾಜ ಜಂಗಮಶೆಟ್ಟಿ, ಶಿವಪ್ಪ ಮಳಗೊಂಡ, ರಾಮನಗೌಡ ಸೋರೆಗಾವಿ, ಶಿವಪ್ಪ ಮಳಕೋಟಗಿ, ಹೊನ್ನಪ್ಪ ಗೋಟ್ಯಾಳ, ನೀಲಾಂಬಿಕಾ ಪಾಟೀಲ, ಜಗದೇವ ಸೂರ್ಯವಂತಿ ಮತ್ತಿತರರಿದ್ದರು.