ವಿಜಯಪುರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ.ಆನಂದ ಕೆ ವಿಡಿಯೋ ಸಂವಾದ ನಡೆಸಿದರು. ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ್ ಇದ್ದಾರೆ.
- ಡಿಸಿ ಕಚೇರಿಯಲ್ಲಿ ಪೂರ್ವಭಾವಿ ಸಭೆ
- ತರಬೇತುದಾರರಿಗೆ ವಿಡಿಯೋ ಸಂವಾದ
- ಭಾರತ ಜನಗಣತಿ -2027ಕ್ಕೆ ಸಿದ್ಧತೆ
ವಿಜಯಪುರ: ಭಾರತ ಜನಗಣತಿ -2027ಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿ ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ. ಆನಂದ ಕೆ. ಹೇಳಿದರು.
ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ‘ಭಾರತ ಜನಗಣತಿ 2027’ರ ಕುರಿತು ಪೂರ್ವಭಾವಿ ಸಿದ್ದತೆ ಹಾಗೂ ತರಬೇತುದಾರರಿಗೆ ವಿಡಿಯೋ ಸಂವಾದ ಮೂಲಕ ಮಾತನಾಡಿದ ಅವರು, ಗಣತಿ ಕಾರ್ಯಕ್ಕೆ ನಿಯೋಜಿಸಿದ ಸಿಬ್ಬಂದಿ ಕಾಲ ಕಾಲಕ್ಕೆ ನೀಡುವ ತರಬೇತಿಯ ಪ್ರಯೋಜನ ಪಡೆದುಕೊಳ್ಳಬೇಕು. ಆ ಮೂಲಕ ಗಣತಿ ಕಾರ್ಯವನ್ನು ಯಾವುದೇ ಲೋಪ, ದೋಷಗಳಾಗದಂತೆ ಕಾರ್ಯ ನಿರ್ವಹಿಸಬೇಕು. ಮೊದಲನೇ ಹಂತವಾಗಿ ಏಪ್ರೀಲ್ 1ರಿಂದ 15ರ ವರೆಗೆ ಸ್ವಯಂ ಗಣತಿ ಕಾರ್ಯ ನಡೆಯಲಿದ್ದು, ಏಪ್ರೀಲ್ 16ರಿಂದ ಮೇ 15ರ ವರೆಗೆ ಮನೆ ಪಟ್ಟಿ ಕ್ಷೇತ್ರ ಕಾರ್ಯ ಕೈಗೊಳ್ಳಲಾಗುವುದು. ಫೆಬ್ರವರಿ 2027ರಿಂದ ಜನಗಣತಿ ಕಾರ್ಯ ನಡೆಯಲಿದೆ ಎಂದರು.
ಜಿಲ್ಲೆಯ ಎಲ್ಲ ನಗರ ಮತ್ತು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬಾಡಿಗೆಗೆ ಇರುವ ಕುಟುಂಬಗಳು ಒಳಗೊಂಡಂತೆ, ಎಲ್ಲ ಮನೆಗಳು, ತೋಟದ ವಸ್ತಿ, ಸ್ಲಂ, ಎಲ್ಲ ಕುಟುಂಬಗಳ ಮನೆ ಪಟ್ಟಿ ಕಾರ್ಯ ಕೈಗೊಳ್ಳಬೇಕು. ಜನಗಣತಿಯಿಂದ ಯಾವುದೇ ಕುಟುಂಬ ಕೈಬಿಟ್ಟು ಹೋಗದಂತೆ ಅತಿ ಎಚ್ಚರಿಕೆಯಿಂದ ಜನಗಣತಿ ಕಾರ್ಯ ನಿರ್ವಹಿಸಬೇಕು. 50 ಗಣತಿದಾರರ ಸಿಬ್ಬಂದಿಗೆ ಗುಂಪು ಮಾಡಿ ತರಬೇತಿ ನೀಡಬೇಕು ಎಂದರು.
ತರಬೇತಿಗೆ ನಿಯೋಜಿಸುವ ಸಿಬ್ಬಂದಿಗೆ 2 ರಿಂದ 3 ಬಾರಿಗೆ ತರಬೇತಿ ನೀಡಿ ಪೂರ್ಣ ಪ್ರಮಾಣದ ತಿಳಿವಳಿಕೆ ಹೊಂದುವಂತೆ ತರಬೇತಿ ನೀಡಬೇಕು. ಈ ಕಾರ್ಯದಲ್ಲಿ ಮುಖ್ಯವಾಗಿ ಒಂದು ವಾರ್ಡ್‌ನಲ್ಲಿ ಮತ್ತೊಂದು ವಾರ್ಡ್ ವಿಲೀನವಾಗದಂತೆ ಬ್ಲಾಕುಗಳನ್ನು ರಚಿಸಿ ಅಂತಿಮಗೊಳಿಸಬೇಕು. ಒಂದು ವೇಳೆ ಅಂತಿಮಗೊಳಿಸದೆ ಮುಂದಿನ ಪ್ರಕ್ರಿಯೆ ಹೋಗಲು ಬರುವುದಿಲ್ಲ. ಆದುದರಿಂದ ಅಂತಿಮಗೊಳಿಸುವ ಮುಂಚೆ ಕುಲಂಕುಷವಾಗಿ ಪರಿಶೀಲಿಸಬೇಕು. ಜಿಲ್ಲೆಯ ಎಲ್ಲ ನಗರ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಚೇರಿಗಳಿಗೆ ವರ್ಕಿಂಗ್ ಮ್ಯಾಪ್ ಸರಬರಾಜು ಮಾಡಬೇಕು. ತಹಸೀಲ್ದಾರ್‌ರು ಹಾಗೂ ಮುಖ್ಯಾಧಿಕಾರಿಗಳು ಶೀಘ್ರವಾಗಿ ತರಬೇತಿ ನೀಡಬೇಕು. ಮನೆ ಪಟ್ಟಿ ಕ್ಷೇತ್ರ ಕಾರ್ಯ ಒಂದು ತಿಂಗಳ ಕಾಲ ನಡೆಯಲಿದ್ದು ಯಾರೂ ನಿರ್ಲಕ್ಷೃ ಮಾಡದೇ ಈ ಕಾರ್ಯವನ್ನು ಪೂರ್ಣಗೊಳಿಸಿ ಕಟ್ಟು ನಿಟ್ಟಾಗಿ ಸೂಚಿಸಿದರು.
ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ್, ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ, ಇಂಡಿ ತಹಸೀಲ್ದಾರ್ ಬಿ.ಎಸ್. ಕಡಕಬಾವಿ, ಡಿಡಿಪಿಐ ವೀರಯ್ಯ ಸಾಲಿಮಠ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬದ್ರುದ್ದೀನ ಸೌದಾಗರ ಮತ್ತಿತರರಿದ್ದರು.