ವಿಜಯಪುರ ನಗರ ಹೊರವಲಯದ ಕೃಷಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ವಿಚಾರ ಸಂಕಿರಣವನ್ನು ಕೃಷಿ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಉದ್ಘಾಟಿಸಿದರು. ಡಾ. ಎಸ್.ಎಸ್. ನೂಲಿ, ಬಾಳಪ್ಪ ಬೆಳಕೋಡ, ಶ್ರೀಮಂತ ಇಂಡಿ ಇತರರಿದ್ದಾರೆ.
- ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಸಲಹೆ
- ಕೃಷಿ ಮಹಾವಿದ್ಯಾಲಯದಲ್ಲಿ ವಿಚಾರ ಸಂಕಿರಣ
ವಿಜಯಪುರ:ಮಣ್ಣು ರೈತನ ಕಣ್ಣು. ಹಾಗಾಗಿ ರೈತರು ಮಣ್ಣಿನ ಫಲವತ್ತತೆ ಕಾಯ್ದುಕೊಳ್ಳಬೇಕು. ಜೊತೆಗೆ ಮಣ್ಣಿನಲ್ಲಿ ಪೋಷಕಾಂಶಗಳು ಹೇರಳವಾಗಿರುವಂತೆ ನೋಡಿಕೊಳ್ಳಬೇಕು ಎಂದು ಕೃಷಿ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಹೇಳಿದರು.
ನಗರ ಹೊರ ವಲಯದ ಕೃಷಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ, ಕೃಷಿ ವಿಶ್ವವಿದ್ಯಾಲಯ ಹಾಗೂ ಜಿಲ್ಲಾ ಕೃಷಿಕ ಸಮಾಜದ ಸಹಯೋಗದಲ್ಲಿ ಗುರುವಾರ ನಡೆದ ‘ಪ್ರತಿ ಎಕರೆಗೆ 100 ಟನ್ ಕಬ್ಬು ಬೆಳೆಯುವುದು ಹೇಗೆ?’ ಎಂಬ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿ, ಒಕ್ಕಲುತನದ ಬಗ್ಗೆ ಹಸಿವು ಇರಬೇಕು ಆಗ ಕೃಷಿಯಲ್ಲಿ ಪ್ರಗತಿ ಸಾಧ್ಯ ಎಂದರು.
ಕಬ್ಬು ಬೆಳೆಯಲು ನಮ್ಮಲ್ಲಿನ ಮಣ್ಣು ಬಹು ಸೂಕ್ತವಾಗಿದೆ. ಮಣ್ಣಿನ ಸತ್ವ ನೋಡಿಕೊಂಡು ಕಬ್ಬಿನ ಸಾಲಿನಿಂದ ಸಾಲಿಗೆ ಇರುವ ಅಗಲ ಖಚಿತಗೊಳಿಸಿಕೊಳ್ಳಬೇಕು. ಕಬ್ಬಿಗೆ ಅವಶ್ಯಕತೆ ಇರುವಷ್ಟು ನೀರು ನೀಡಬೇಕು. ಕಬ್ಬಿನ ಇಳುವರಿಯಲ್ಲಿ ನೀರಿನ ಪಾತ್ರ ಬಹು ಮುಖ್ಯವಾಗಿದೆ. ಹನಿ ನೀರಾವರಿ ಅಳವಡಿಸಿಕೊಂಡು ಇಳುವರಿ ಹೆಚ್ಚಿಸಿಕೊಳ್ಳಬೇಕು ಎಂದರು.
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕಲ್ಲೋಳಿ ಗ್ರಾಮದ ಪ್ರಗತಿಪರ ರೈತ ಬಾಳಪ್ಪ ಬೆಳಕೋಡ, ಇಂಡಿ ತಾಲೂಕಿನ ಶ್ರೀಮಂತ ಇಂಡಿ ಹಾಗೂ ಗೋಳಸಂಗಿಯ ನಾರಾಯಣ ಸಾಲುಂಕೆ ಅವರು ಪ್ರತಿ ಎಕರೆಗೆ 100 ಟನ್ ಕಬ್ಬು ಬೆಳೆಯುವುದು ಹೇಗೆ? ಎಂಬ ವಿಷಯದ ಕುರಿತು ತಮ್ಮ ಅನುಭವ ಹಂಚಿಕೊಂಡರು.
ಕೃಷಿ ಮಹಾವಿದ್ಯಾಲಯದ ಮುಖ್ಯ ಕೀಟ ತಜ್ಞ ಎ.ಪಿ. ಬಿರಾದಾರ ಅವರು ಕಬ್ಬು ಬೆಳೆಯಲ್ಲಿ ಕೀಟ ನಿರ್ವಹಣೆ ಕುರಿತು ಬಹು ಸೊಗಸಾಗಿ ರೈತರೊಂದಿಗೆ ವಿಷಯ ವಿನಿಮಯ ಮಾಡಿಕೊಂಡರು.
ಸಂಕೇಶ್ವರದ ಕೃಷಿ ಸಂಶೋಧನಾ ಕೇಂದ್ರದ ಮುಖ್ಯ ವಿಜ್ಞಾನಿ ಡಾ. ಎಸ್.ಎಸ್. ನೂಲಿ ಅವರು ಕಬ್ಬಿನಲ್ಲಿ ಮಣ್ಣು ಪೋಷಕಾಂಶ ಹಾಗೂ ನೀರು ನಿರ್ವಹಣೆ ಕುರಿತು ಮಾತನಾಡಿದರು.
ಉಪ ಕೃಷಿ ನಿರ್ದೇಶಕ ಶರಣಗೌಡ ಪಾಟೀಲ ಹಾಗೂ ಚಂದ್ರಕಾಂತ ಪವಾರ, ವಿಜಯಪುರದ ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ ಜಾನಮಟ್ಟಿ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಶಿವನಗೌಡ ಬಿರಾದಾರ, ಎಸ್.ಬಿ. ಜಗ್ಗಿನವರ, ಶಿವಪ್ಪಗೌಡ ಬಿರಾದಾರ ಇತರರಿದ್ದರು.