ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದಲ್ಲಿ ಮಾಜಿ ಸಿಎಂ ಜಗದೀಶ ಶೆಟ್ಟರ ಅವರು ಶ್ರೀ ರೆಬ್ಬಮ್ಮ ದೇವಸ್ಥಾನದ ಲೋಕಾರ್ಪಣೆ ಹಾಗೂ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು. ಶಿರಶ್ಯಾಡದ ಅಭಿನವ ಮುರುೇಂದ್ರ ಶಿವಾಚಾರ್ಯರು, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಇತರರಿದ್ದಾರೆ.
- ರೆಬ್ಬಮ್ಮದೇವಿ ಮಂದಿರ ಲೋಕಾರ್ಪಣೆ
- ಬೆಳ್ಳಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ
- ಧರ್ಮಸಭೆಯಲ್ಲಿ ಸಾವಿರಾರು ಭಕ್ತರು ಭಾಗಿ
ಇಂಡಿ: ಶರಣರ ವಚನಗಳ ಸಾರ ಅರಿತು ಭಕ್ತಿ ಭಾವದಿಂದ ಅನುಸರಿಸಿದರೆ ಬದುಕು ಪಾವನವಾಗಲಿದೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ ಹೇಳಿದರು.
ಹಿರೇಮಸಳಿ ಗ್ರಾಮದಲಿ ್ಲಶುಕ್ರವಾರ ಶ್ರೀ ರೆಬ್ಬಮ್ಮ ದೇವಿ (ಕದಿರ ರೆಮ್ಮವ್ವೆ) ನೂತನ ಮಂದಿರದ ಲೋಕಾರ್ಪಣೆ ನೆರವೇರಿಸಿ ಧರ್ಮಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಿ ಸಮಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದವರು ಬಸವಾದಿ ಶರಣರು. ಅವರಲ್ಲಿ ರೆಬ್ಬಮ್ಮ ಕೂಡ ಒಬ್ಬರು ಎಂದು ತಿಳಿಸಿದರು.
ಬಸವಾದಿ ಶರಣರು ಸಾಮಾಜಿಕ ಕ್ರಾಂತಿ ಮಾಡಿದರು. ಅಸಮಾನತೆ ಹೋಗಲಾಡಿಸಿದರು. ಈಗಲೂ ಜಾತಿ ವ್ಯವಸ್ಥೆ ತೊಲಗಿಲ್ಲವೆಂದ ಮೇಲೆ 12 ನೇ ಶತಮಾನದಲ್ಲಿ ಪರಿಸ್ಥಿತಿ ಹೇಗಿರಬೇಕೆಂದು ಯೋಚಿಸಿ. ಬಸವಾದಿ ಶರಣರು ಸಾಮಾಜಿಕ ಕ್ರಾಂತಿ ಮಾಡದೇ ಹೋಗಿದ್ದರೆ ಏನಾಗುತ್ತಿತ್ತು ಎಂಬುದನ್ನೊಮ್ಮೆ ಅವಲೋಕಿಸಿ. ಫ.ಗು. ಹಳಕಟ್ಟಿ ಅವರು ವಚನ ಸಂಗ್ರಹಿಸಿ ಕೊಡದಿದ್ದರೆ ಇಂದಿಗೂ ಶರಣರ ಇತಿಹಾಸ ಉಳಿಯಲು ಸಾಧ್ಯವಾಗುತ್ತಿರಲಿಲ್ಲ. ಮೌಢ್ಯ, ಕಂದಾಚಾರವನ್ನು ಹೋಗಲಾಡಿಸಿ ಸುಂದರ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದ ಬಸವಾದಿ ಶರಣರ ಆಶಯಗಳನ್ನು ಈಡೇರಿಸೋಣ ಎಂದರು.
ಕಲ್ಯಾಣ ಕ್ರಾಂತಿ ಬಳಿಕ ಶರಣರೆಲ್ಲ ದಿಕ್ಕಾಪಾಲಾದರು. ಚನ್ನಬಸವಣ್ಣರಾದಿಯಾಗಿ ಅನೇಕರು ಉಳವಿಯ ಕಾಡು ಸೇರಿದರೆ ಅಲ್ಲಮ್ಮ, ಅಕ್ಕಮಹಾದೇವಿಯಾದಿಯಾಗಿ ಹಲವರು ಶ್ರೀಶೈಲದತ್ತ ನಡೆದರು. ಕೆಲವರು ತಮ್ಮ ತಮ್ಮ ಊರುಗಳಿಗೆ ಹಿಂತಿರುಗಿದರು. ಅದರಲ್ಲಿ ಕದಿರೆ ರೆಮ್ಮವ್ವೆ ಅಂದರೆ ರೆಬ್ಬಮ್ಮ ದೇವಿ ಈ ಭಾಗದಲ್ಲಿ ಉಳಿದು ಆಧ್ಯಾತ್ಮಿಕ ಸಾಧನೆ ಮಾಡಿದರೆಂಬ ಐತಿಹ್ಯ ಮೈನವಿರೇಳಿಸುವಂಥದ್ದು. ಇದೀಗ ಭವ್ಯ ಮಂದಿರ ಕಟ್ಟಿದ್ದು ಶ್ಲಾಘನೀಯ. ಶರಣರ ಆಶಯದ ಸಮಾಜ ನಿರ್ಮಿಸೋಣ ಎಂದರು.
ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ, ಈ ದೇಶದ ಸಂಸ್ಕೃತಿ, ಪರಂಪರೆ ಶ್ರೇಷ್ಠವಾದಂಥದ್ದು. ಪ್ರಪಂಚದ ಯಾವುದೇ ರಾಷ್ಟ್ರದಲ್ಲಿರದ ಭಕ್ತಿ, ಶ್ರದ್ಧೆ, ಸಂಸ್ಕಾರ ಭಾರತದಲ್ಲಿ ಹೆಚ್ಚಾಗಿದೆ. ಬಸವಣ್ಣನವರ ಆಚಾರ, ವಿಚಾರ ಶ್ರೇಷ್ಠತೆಯಲ್ಲಿಯೇ ಶ್ರೇಷ್ಠ. ಶರಣರ ಇತಿಹಾಸ ಗಮನಿಸಬೇಕು. ಅವರ ಕ್ರಾಂತಿಕಾರಿ ವಿಚಾರಗಳನ್ನು ನೆನಪಿಟ್ಟುಕೊಳ್ಳಬೇಕು ಎಂದರು.
ಶರಣರು ಸರ್ವರಿಗೂ ಸಮಾನತೆಯ ಸಂದೇಶ ಸಾರಿದರು. ವಿಶೇಷವಾಗಿ ಮಹಿಳೆಯರಿಗೆ ಅವಕಾಶ ನೀಡಿದರು. ಅವರು ಕಂಡ ಸುಂದರ ಸಮಾಜವನ್ನು ನಿರ್ಮಿಸಲು ಮುಂದಾಗೋಣ ಎಂದರು.
ಈ ಭಾಗದ ಅಭಿವೃದ್ಧಿಗೆ ಆದ್ಯತೆ ನೀಡುವೆ. ಈಗಾಗಲೇ ಸಮುದಾಯದ ಬೇಡಿಕೆಗೆ ಸ್ಪಂದಿಸಿ ಭವನ ನಿರ್ಮಾಣಕ್ಕೆ 25 ಲಕ್ಷ ರೂ.ಘೋಷಿಸಿರುವೆ. ಇನ್ನಷ್ಟು ಅನುದಾನ ಒದಗಿಸುವೆ. ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ತಿಳಿಸಿದರಲ್ಲದೇ ಗ್ಯಾರಂಟಿ ಯೋಜನೆಗಳು, ಜಿಟಿಟಿಸಿ ಸ್ಥಾಪನೆ, ಹೊಸದಾಗಿ ಪಿಯುಸಿ ಕಾಲೇಜ್‌ಗಳ ಮಂಜೂರು ಸೇರಿ ಶೈಕ್ಷಣಿಕ ಪ್ರಗತಿಗೆ ಸಂಂಧಿಸಿದಂತೆ ಕೈಗೊಂಡ ಕ್ರಮಗಳ ಕುರಿತು ವಿವರಿಸಿದರು.
ಸಾಲೋಟಗಿಯ ಸಂಗಮೇಶ್ವರ ಸ್ವಾಮೀಜಿ ಆಶೀರ್ವಚನ ನೀಡುತ್ತ, ಮಂದಿರದಲ್ಲಿ ಪ್ರತಿಷ್ಠಾಪನೆಗೊಂಡ ಮೂರ್ತಿಯಂತೆ ಹೃದಯದಲ್ಲಿಯೂ ಪ್ರತಿಷ್ಠಾಪನೆ ಮಾಡಿಕೊಳ್ಳಬೇಕು. ಶ್ರೇಷ್ಠ ಶಿವಶರಣೆ ರೆಬ್ಬಮ್ಮನ ಮೂಲಕ ಈ ಗ್ರಾಮಕ್ಕೆ 900 ವರ್ಷಗಳ ಇತಿಹಾಸ ಇದೆ ಎಂಬುದೇ ಅಭಿಮಾನದ ಸಂಗತಿ. ದೇವಸ್ಥಾನದಲ್ಲಿರೋದು ಮೂರ್ತಿ. ಅದರ ಸಾಕಾರ ರೂಪವೇ ನೀವು ಎಂದು ಭಕ್ತರನ್ನುದ್ದೇಶಿಸಿ ನುಡಿದರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ಶಿರಶ್ಯಾಡದ ಅಭಿನವ ಮುರುೇಂದ್ರ ಶಿವಾಚಾರ್ಯರು ಆಶೀರ್ವಚನ ನೀಡುತ್ತಾ, ಮುತ್ತೈದೆತನದ ಮಹತ್ವ ಕುರಿತು ವಿವರಿಸಿದರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಧೋಳ ತಾಲೂಕಿನ ಶಿರೋಳದ ರಾಮಾರೂಢ ಮಠದ ಶಂಕರಾರೂಢ ಸ್ವಾಮೀಜಿ, ಅರ್ಜುಣಗಿ ಗುರುಪಾದೇಶ್ವರ ಮಠದ ಗುರುದೇವ ದೇವರು, ಅಗರಖೇಡದ ಶ್ರೀ ಶಿವಯೋಗಿ ಆಶ್ರಮದ ಪೂಜ್ಯ ಜಯದೇವಿ ತಾಯಿ ಸಾನ್ನಿಧ್ಯ ವಹಿಸಿದ್ದರು.
ಮುಖಂಡರಾದ ಸಂಗಣ್ಣ ಈರಾಬಟ್ಟಿ, ಕಾಸಗೌಡ ಬಿರಾದಾರ, ಸಿ.ಬಿ. ದೇವರಮನಿ, ಸಂಗಪ್ಪ ಪಟ್ಟಣಶೆಟ್ಟಿ, ವಿರೂಪಾಕ್ಷಿ ಪಟ್ಟಣಶೆಟ್ಟಿ ಮತ್ತಿತರರಿದ್ದರು. ಸಾಧಕ ಸತೀಶ ಶ್ರೀಶೈಲ ಸೋಮಜಾಳ ಹಾಗೂ ಪತ್ರಕರ್ತರ ಪರಶುರಾಮ ಭಾಸಗಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶಿಕ್ಷಕರಾದ ಐ.ಎಸ್. ಮಾಶ್ಯಾಳ, ರೇವಣಸಿದ್ದ ಪಟ್ಟಣಶೆಟ್ಟಿ, ಪ್ರಶಾಂತ ಬೀಳಗಿಮಠ ನಿರೂಪಿಸಿದರು.