ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ ತಿಕೋಟಾ ತಾಲೂಕಿನ ಬಾಬಾನಗರ ಹತ್ತಿರದ ಉದ್ದೇಶಿತ ಜಲಸಂಗ್ರಹಗಾರ ನಿರ್ಮಾಣ ಯೋಜನಾ ಪ್ರದೇಶಕ್ಕೆ ಸಚಿವ ಎಂ.ಬಿ. ಪಾಟೀಲ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಬಿ.ಆರ್. ರಾಠೋಡ, ಡಾ. ಹುಗ್ಗಿ ಮತ್ತಿತರರಿದ್ದಾರೆ. 
ವಿಜಯಪುರ

ತುಬಚಿ-ಬಬಲೇಶ್ವರ ಎತ ನೀರಾವರಿ ಯೋಜನೆ ಬಗ್ಗೆ ಎಂ.ಬಿ ಪಾಟೀಲ್ ಸರ್ಕಾರಕ್ಕೆ ಪತ್ರ

ವಿಜಯಪುರ: ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆಯಡಿ ಹಂಚಿಕೆಯಾದ ನಮ್ಮ ಪಾಲಿನ ನೀರನ್ನು ಗರಿಷ್ಠಮಟ್ಟದಲ್ಲಿ ಬಳಸಿಕೊಳ್ಳುವ ನಿಟ್ಟಿನಲ್ಲಿ 0.8 ಟಿಎಂಸಿ ಜಲಸಂಗ್ರಹಗಾರ ನಿರ್ಮಿಸಲು ಸಮಗ್ರ ಯೋಜನಾ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದೆಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ ತಿಳಿಸಿದರು.
ಬಾಬಾನಗರ ಬಳಿ ಉದ್ದೇಶಿತ ಯೋಜನಾ ಪ್ರದೇಶಕ್ಕೆ ಭಾನುವಾರ ಅಧಿಕಾರಿಗಳು, ರೈತ ಮುಖಂಡರೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಅವರು ಮಾತನಾಡಿದರು.
ಜಲ ಸಂಗ್ರಹಗಾರ ನಿರ್ಮಾಣಕ್ಕೆ ಎಲ್ಲರ ಸಲಹೆ-ಸೂಚನೆ ಪಡೆದು ಯಾವುದೇ ತಾಂತ್ರಿಕ ಸಮಸ್ಯೆಗಳಿದ್ದರೂ ಸರಿಪಡಿಸಿಕೊಂಡು ಯೋಜನಾವರದಿ ಸಿದ್ಧಪಡಿಸಿ ಸಲ್ಲಿಸಲಾಗುವುದು.
ಈಗಾಗಲೇ, ನಾವು ಕೇವಲ ನಮ್ಮ ಪಾಲಿನ 2 ಟಿಎಂಸಿ ನೀರು ಮಾತ್ರ ಬಳಸಿಕೊಳ್ಳಲಾಗುತ್ತಿದೆ. ಎ-ï‌ಐಸಿ ಆದ ನಂತರವೂ ಕೇವಲ 3 ಟಿಎಂಸಿ ನೀರು ಮಾತ್ರ ಬಳಕೆಯಾಗುತ್ತದೆ. ಉಳಿದ 2.5 ಟಿಎಂಸಿ ನೀರನ್ನು ಮಳೆಗಾಲದಲ್ಲಿ ಶೇಖರಿಸಿಕೊಂಡು ಗರಿಷ್ಠಮಟ್ಟದ ನೀರನ್ನು ಬಳಸುವ ನಿಟ್ಟಿನಲ್ಲಿ 0.8 ಟಿಎಂಸಿ ಜಲಸಂಗ್ರಹಾರ ನಿರ್ಮಿಸುವ ಯೋಜನೆ ಹಾಕಿಕೊಳಲಾಗಿದೆ ಎಂದು ತಿಳಿಸಿದರು.
5.5 ಟಿಎಂಸಿ ನೀರಿದ್ದರೂ ಬಳಕೆಗೆ ಸಾಧ್ಯವಾಗಿಲ್ಲ
ತುಬಚಿ ಬಬಲೇಶ್ವರ ಯೋಜನೆಯಡಿ 5.5 ಟಿಎಂಸಿ ನೀರಿದ್ದರೂ ಸಂಪೂರ್ಣ ಬಳಕೆಗೆ ಸಾಧ್ಯವಾಗಿಲ್ಲ. ಮಳೆಗಾಲದಲ್ಲಿ ಮಾತ್ರ ಏತ ನೀರಾವರಿಯಿಂದ ನೀರು ಒದಗಿಸಲಾಗುತ್ತದೆ. ಬೇಸಿಗೆಯಲ್ಲಿ ಈ ನೀರನ್ನು ಕೆರೆ-ಹಳ್ಳಗಳಿಗೆ ಹರಿಸುವ ನಿಟ್ಟಿನಲ್ಲಿ ಮಳೆಗಾಲದಲ್ಲಿ ಸಂಗ್ರಹಗಾರದಲ್ಲಿ ನೀರು ಸಂಗ್ರಹಿಸಲಾಗುವುದೆಂದು ತಿಳಿಸಿದರು.
ಬಾಬಾನಗರದ ಹತ್ತಿರ 500 ಎಕರೆ ಸರ್ಕಾರಿ ಜಮೀನು ಲಭ್ಯವಿದೆ. ಭೂಸ್ವಾಧಿನಕ್ಕೆ ಹಣ ವೆಚ್ಚ ಮಾಡುವ ಅವಶ್ಯಕತೆ ಇಲ್ಲ. ತೆಗ್ಗು ಪ್ರದೇಶ, ನೈಸರ್ಗಿಕವಾಗಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ನೀರಿನ ಸದ್ಭಳಕೆ ಮಾಡಿಕೊಳ್ಳಲು ಯೋಜನೆ ಹಾಕಿಕೊಳ್ಳಲಾಗಿದೆ. ಈ ಕುರಿತು ಈಗಾಗಲೇ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಲಾಗಿದ್ದು, ಮುಂದಿನ ಬಜೆಟ್‌ನಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲು ಸೂಚಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
2013-18ರ ಅವಧಿಯಲ್ಲಿ ತುಬಚಿ ಬಬಲೇಶ್ವರ ಯೋಜನೆಗೆ ಈ ಭಾಗದ ಅತಿ ಎತ್ತರದ ಪ್ರದೇಶವಾದ ಕನಮಡಿ, ಬಾಬಾನಗರ, ಬಿಜ್ಜರಗಿ, ತಿಕೋಟಾ ತಾಲೂಕು ಹಾಗೂ ಸಾವಳಗಿ ತಾಲೂಕಿನ 1.30 ಲಕ್ಷ ಎಕರೆ ಅಂದಾಜು 6.3 ಟಿಎಂಸಿ ನೀರಿನಲ್ಲಿ 5.5 ತಿಕೋಟಾ ಹೋಬಳಿಗೆ ಮತ್ತು ಸಾವಳಿ ತಾಲೂಕಿಗೆ 0.8 ಟಿಎಂಸಿ ನೀರೋದಗಿಸಲು 3600 ಕೋಟಿ ರೂ. ವೆಚ್ಚ ಮಾಡಲಾಗಿದೆ. ಈಗಾಗಲೇ, ಅಂತರಜಲಮಟ್ಟ ಹೆಚ್ಚಾಗಿ ಆ ಭಾಗದ ರೈತರು ಸಂತಸದಲ್ಲಿದ್ದಾರೆ. ಎ-ï‌ಐಸಿ ಯೋಜನೆ ಪೂರ್ಣಗೊಂಡು ಕೆರೆಗಳಿಗೆ ನೀರು ಒದಗಿಸಲಾಗುತ್ತಿದೆ. ಟೆಂಡರ್ ಆಗಿ ಕಾಮಗಾರಿ ನಡೆಯುತ್ತಿದ್ದು, ಮುಂದಿನ 6 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಂಡು ರೈತರ ಹೊಲಗಳಿಗೆ ನೀರು ಹರಿಸಲಾಗುವುದು ಎಂದು ತಿಳಿಸಿದರು.
ಕರ್ನಾಟಕ ನೀರಾವರಿ ನಿಗಮ ನಿಯಮಿತದ ಬೆಳಗಾವಿ ವೃತ್ತದ ಅಧಿಕ್ಷಕ ಅಭಿಯಂತರ ಬಿ.ಆರ್. ರಾಠೋಡ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಅಂಬಣ್ಣ, ನೀರಾವರಿ ತಜ್ಞ ಡಾ. ಹುಗ್ಗಿ ಮತ್ತಿತರರಿದ್ದರು.