ವಿಜಯಪುರದ ಎಕ್ಸಲಂಟ್ ವಿಜ್ಞಾನ ಪ.ಪೂ. ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ಎನ್.ಎಂ. ಬಿರಾದಾರ, ಬಸವರಾಜ್ ಕೌಲಗಿ, ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಮತ್ತಿತರರಿದ್ದಾರೆ.
ವಿಜಯಪುರ: ನಮ್ಮ ಬದುಕು ಮೇಣದ ಬತ್ತಿಯಂತೆ ಇನ್ನೊಬ್ಬರಿಗೆ ಬೆಳಕು ನೀಡುವಂತಾಗಬೇಕು ಎಂದು ಚಾಣಕ್ಯ ಕರಿಯರ್ ಅಕಾಡೆಮಿ ಸಂಸ್ಥಾಪಕ ಎನ್.ಎಂ. ಬಿರಾದಾರ ಹೇಳಿದರು.
ನಗರದ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಹಾಗೂ ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಪ್ರಾರಂಭೋತ್ಸವ ಉದ್ಘಾಟಿಸಿ ಅವರು
ಐಸ್‌ಕ್ರೀಂ ಮತ್ತು ಮೇಣದ ಬತ್ತಿಗೆ ಕರಗುವ ಗುಣವಿದೆ. ಆದರೆ, ಕರಗುವಿಕೆಯ ಹಿಂದಿರುವ ಉದ್ದೇಶ ವಿಭಿನ್ನವಾಗಿದೆ. ಐಸ್‌ಕ್ರೀಂ ಸಮಯ ಇರುವ ಮೊದಲೇ ನನ್ನನ್ನು ತಿಂದು ತೃಪ್ತನಾಗು ಎಂದರೆ, ಮೇಣದ ಬತ್ತಿ ನಾನು ಕರಗುವ ಮೊದಲೇ ಈ ಜಗತ್ತಿಗೆ ಒಂದಷ್ಟು ಬೆಳಕನ್ನು ಕೊಡುತ್ತೇನೆ ಎನ್ನುವ ಸಾರ್ಥಕತೆ ತೋರುತ್ತದೆ. ಅಂತಹ ಸಹಾಯ, ಸಹಕಾರದ ಮನೋಭಾವ ನಮ್ಮಲ್ಲಿ ಬೆಳೆಸಿಕೊಳ್ಳಬೇಕೆಂದು ಅವರು ತಿಳಿಸಿದರು.
ವಿದ್ಯೆ ಎನ್ನುವುದು ತಪ್ಪಸ್ಸಿದ್ದಂತೆ ಸಂತ ಮಹಾಂತ ಋಷಿಮುನಿಗಳು ಏಕಾಗ್ರತೆಯಿಂದ ತಪಸ್ಸು ಮಾಡಿ ಆತ್ಮ ಸಾಕ್ಷಾತ್ಕಾರ ಮಾಡಿಕೊಂಡಿದ್ದಾರೆ. ವಿದ್ಯಾರ್ಥಿಗಳು ಸಹ ವಿದ್ಯೆ ಎನ್ನುವ ತಪಸ್ಸನ್ನು ಏಕಾಗ್ರತೆಯಿಂದ ಮಾಡಿದಲ್ಲಿ ಸಾಧನೆ ಎನ್ನುವ ಸಾಕ್ಷತ್ಕಾರ ಹೊಂದಬಹುದು. ಸಾಧನೆಯ ಹಾದಿಯಲ್ಲಿ ಎದುರಾಗುವ ಕಷ್ಟಗಳಿಗೆ ಭಯ ಬೀಳದೇ ದೃಢ ಸಂಕಲ್ಪದ ಮೂಲಕ ಮುನ್ನಡೆಯಬೇಕು. ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಯಶಸ್ಸು ನಿಮ್ಮದಾಗಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿ ಸಾಹಿತಿ ಅಶೋಕ ಹಂಚಲಿ ಮಾತನಾಡಿ, ಪೇಪರ್ ಹಾಕುವ ಹುಡುಗನೊಬ್ಬ ಈ ದೇಶಕ್ಕೆ ರಾಷ್ಟ್ರ ಯಾಗುತ್ತಾನೆ ಎಂದ ಮೇಲೆ ನಮಗೇನಾಗಿದೆ ಎನ್ನುವ ಪ್ರಶ್ನೆ ನಾವೇ ಮಾಡಿಕೊಳ್ಳಬೇಕು.
ಕಾದ ಹಂಚಿನ ಮೇಲೆ ಬಿದ್ದ ನೀರಿನ ಹನಿಯೂ ಸಹ ಮುತ್ತಂತೆ ಭಾಸವಾಗುತ್ತದೆ. ಮುಂಜಾನೆ ಬಿದ್ದ ಮಂಜಿನ ಹನಿ ಬಿಸಿಲೇರಿದಂತೆ ಮುತ್ತಂತೆ ಹೊಳೆದು ಮಾಯವಾಗುತ್ತದೆ. ಆದರೆ, ಸ್ವಾತಿ ಮಳೆಯ ಹನಿ ಕಪ್ಪೆ ಚಿಪ್ಪಿನಲ್ಲಿ ಬಿದ್ದಾಗ ಮಾತ್ರ ಅದು ಮುತ್ತಾಗಿ ಪರಿವರ್ತನೆಯಾಗುತ್ತದೆ ಅದು ಶಾಶ್ವತ ಮೌಲ್ಯ ಪಡೆಯುತ್ತದೆ. ಹಾಗೆಯೇ, ವಿದ್ಯಾರ್ಥಿಗಳು ಸಹ ಇಂದು ಎಕ್ಸಲಂಟ್ ಎನ್ನುವ ಕಪ್ಪೆ ಚಿಪ್ಪಿನಲ್ಲಿ ಬಿದ್ದಾಗಿದೆ. ಇನ್ನು ಮುತ್ತಾಗುವುದು ಮಾತ್ರ ಬಾಕಿ ಇದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಬಸವನಬಾಗೇವಾಡಿ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.
ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಚೇರ್ಮನ್ ಬಸವರಾಜ್ ಕೌಲಗಿ ಮತ್ತು ಗೌರವ ನಿರ್ದೇಶಕ ರಾಜಶೇಖರ ಕೌಲಗಿ ಮಾತನಾಡಿದರು. ಶಾಲಾಶಿಕ್ಷಣ ಇಲಾಖೆಯ ನೂತನ ಉಪನಿರ್ದೇಶಕರಾಗಿ ಜವಾಬ್ದಾರಿ ವಹಿಸಿಕೊಂಡ ಕೆ.ಎ. ಉಪ್ಪಾರ, ನಿಕಟಪೂರ್ವ ಉಪ ನಿರ್ದೇಶಕ ಡಾ. ಸಿ.ಕೆ. ಹೊಸಮನಿ, ನಿವೃತ್ತ ಪ್ರಾಂಶುಪಾಲ ಬಸವರಾಜ್ ಉಮರ್ಜಿ ಅವರನ್ನು ಸನ್ಮಾನಿಸಲಾಯಿತು.
ಕೂಡಗಿ ಸರ್ಕಾರಿ ಪ.ಪೂ. ಕಾಲೇಜಿನ ಪ್ರಾಚಾರ್ಯ ಕೆ.ಜಿ. ಲಮಾಣಿ, ಕಾಲೇಜಿನ ಪ್ರಾಚಾರ್ಯ ಮಂಜುನಾಥ ಜುನಗೊಂಡ, ಶೈಕ್ಷಣಿಕ ಸಂಯೋಜಕ ಮಂಜುನಾಥ ತುಮ್ಮರಮಟ್ಟಿ ಮತ್ತಿತರರಿದ್ದರು.
ಚಿನ್ಮಯಿ ಪ್ರಾರ್ಥಿಸಿದರು. ಶರಣಗೌಡ ಪಾಟೀಲ ಸ್ವಾಗತಿಸಿದರು. ಮುಸ್ತಾಕ ಮಲಘಾಣ ನಿರೂಪಿಸಿದರು.