ವಿಜಯಪುರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಗಣ್ಯರು ಚಾಲನೆ ನೀಡಿದರು.ಡಾ. ಆನಂದ ಕೆ., ಕೆ.ಕೆ. ಚೌವಾಣ ಮತ್ತಿತರರಿದ್ದಾರೆ. 
ವಿಜಯಪುರ

ಮಹಿಳೆಯರು ಆರ್ಥಿಕ ಸಬಲೀಕರಣ ಹೊಂದಲಿ

ಮಹಿಳೆಯರು‌ ಸ್ತ್ರೀ ಶಕ್ತಿ ಮತ್ತು ಸ್ವಸಹಾಯ ಸಂಘಗಳಲ್ಲಿ ಕ್ರಿಯಾಶೀಲರಾಗಿ ಆರ್ಥಿಕ ಸಬಲೀಕರಣ ಹೊಂದಬೇಕು ಎಂದು ಜಿಲ್ಲಾಧಿಕಾರಿ ಡಾ.ಆನಂದ ಕೆ.ಹೇಳಿದರು.
ಜಿಲ್ಲಾಡಳಿತ, ಜಿ.ಪಂ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಶಿಶು ಅಭಿವೃದ್ಧಿ ಯೋಜನೆ, ಸರ್ಕಾರೇತರ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸರ್ಕಾರ ಮಹಿಳಾ ಸಬಲೀಕರಣಕ್ಕಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ. ಹಲವು ಯೋಜನೆಗಳ ಅನುಷ್ಟಾನದ ಮೂಲಕ ಮಹಿಳೆಯರನ್ನು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಸಬಲರನ್ನಾಗಿಸುವ ಮೂಲಕ ಅವರನ್ನು ಸಬಲೀಕರಣಗೊಳಿಸಲಾಗುತ್ತಿದೆ. ಮಹಿಳೆಯರು ಇಂದು ಎಲ್ಲ ರಂಗಗಳಲ್ಲೂ ದಾಪುಗಾಲನ್ನಿಟ್ಟಿರುವುದು ಸಂತಸದ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಾಮಾಜಿಕ ಪಿಡುಗಾಗಿರುವ ಬಾಲ್ಯ ವಿವಾಹ, ವರದಕ್ಷಿಣೆ, ಪ್ರಸವ ಪೂರ್ವ ಲಿಂಗ ಪತ್ತೆ ಹಾಗೂ ಹತ್ಯೆ, ಕೌಟುಂಬಿಕ ಹಿಂಸೆಯಂತಹ ಸಮಸ್ಯೆಗಳನ್ನು ತೊಡೆದು ಹಾಕುವ ನಿಟ್ಟಿನಲ್ಲಿ ನಾವೆಲ್ಲರೂ ಕೈ ಜೋಡಿಸುವ ಮೂಲಕ ಈ ಪಿಡುಗುಗಳ ನಿರ್ಮೂಲನೆ ಹಾಗೂ ಕಡಿವಾಣಕ್ಕೆ ಕಟಿಬದ್ಧರಾಗಿ ಕಾರ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿರಲ್ಲದೇ. ಮಹಿಳೆಯರು ಬಾಹ್ಯಾಕಾಶದಲ್ಲಿ, ಸೈನ್ಯ, ಮಹಿಳಾ ಕ್ರಿಕೆಟ್ ಸೇರಿ ವಿವಿಧ ರಂಗಗಳಲ್ಲಿ ತೋರಿರುವ ಸಾಧನೆ ಅಪಾರವಾಗಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ.ಕೆ. ಚೌವಾಣ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಲಕ್ಷ್ಮೀ ಯೋಜನೆಯಡಿ ಮಹಿಳಾ ಸಬಲೀಕರಣ ಹಾಗೂ ಸ್ವಾವಲಂಬನೆ ಬದುಕು ನಡೆಸಲು ಬಹಳ ಅನುಕೂಲಕರವಾಗಿದೆ ಎಂದರು.
ಬಾಲ್ಯ ವಿವಾಹದಂತಹ ಅನೇಕ ಸಾಮಾಜಿಕ ಸೇವೆ, ಮಕ್ಕಳ ಹಕ್ಕುಗಳ ರಕ್ಷಣೆ ಸೇರಿ ಸಾಮಾಜಿಕ ಕಳಕಳಿಯ ಕಾರ್ಯ ನಿರ್ವಹಿಸಿರುವ ಮಹಿಳಾ ಮೇಲ್ವಿಚಾರಕರು, ಇಲಾಖೆ ಅಽಕಾರಿಗಳನ್ನು ಹಾಗೂ ಗ್ರಾಮೀಣ ಭಾಗದಲ್ಲಿ ಮಕ್ಕಳ ಶ್ರೇಯೋಭಿವೃದ್ಧಿಗೆ ಕಾರ್ಯ ನಿರ್ವಹಿಸಿರುವ ವಿವಿಧ ಸರ್ಕಾರೇತರ ಸಂಘ ಸಂಸ್ಥೆಗಳ ಪದಾಽಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.