ಬಸವನಬಾಗೇವಾಡಿ ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮವನ್ನು ಪ್ರಧಾನ ಸಿವಿಲ್ ನ್ಯಾಯಾಧೀಶ ಅಮಿತ್ ಘಟ್ಟಿ ಉದ್ಘಾಟಿಸಿದರು. ಡಾ.ಪ್ರಕಾಶ ಗೊಟಖಂಡಿ, ಗುರುಶಾಂತ ದಾಶ್ಯಾಳ, ರಾಜೇಶ್ವರಿ ಸುತ್ತಾರ ಮತ್ತಿತರರಿದ್ದರು. 
ವಿಜಯಪುರ

ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಯುವಕರು ಮುಂದಾಗಲಿ

ಪ್ರಮುಖ ಮುಖ್ಯಾಂಶಗಳು

  • ಕ್ಯಾನ್ಸರ್‌ನಂತಹ ಕಾಯಿಲೆ
  • ಕಾನೂನು ಸೇವೆಗಳ ಸಮಿತಿ,
ಬಸವನಬಾಗೇವಾಡಿ: ತಂಬಾಕು ಸೇವನೆಯಿಂದ ಕ್ಯಾನ್ಸರ್‌ನಂತಹ ಕಾಯಿಲೆಗಳಿಗೆ ಬಲಿಯಾಗಬೇಕಾಗುತ್ತದೆ, ತಂಬಾಕು ಸೇವನೆ ಮುಕ್ತರಾಗಿ ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡಲು ಯುವಜನತೆ ಮುಂದಾಗಬೇಕೆಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಅಮಿತ್ ಘಟ್ಟಿ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ ಹಾಗೂ ಪೊಲೀಸ್ ಇಲಾಖೆ ಇವರ ಸಹಯೋಗದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ ಹಾಗೂ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತಂಬಾಕಿನಿಂದ ಬಹಳಷ್ಟು ಜನರು ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ, ನಾವು ತಂಬಾಕು ಚಟಕ್ಕೆ ಮಾರು ಹೋಗದೆ ಉತ್ತಮ ಹವ್ಯಾಸ ಬೆಳೆಸಿಕೊಂಡು ಸುಂದರ ಬದುಕು ಕಟ್ಟಿಕೊಳ್ಳಬೇಕೆಂದರು.
ಜಿಲ್ಲಾ ಮನೋರೋಗ ತಜ್ಞ ಹಾಗೂ ನಶಾಮುಕ್ತ ತಜ್ಞ ಡಾ.ಮಂಜುನಾಥ ಮಸಳಿ ಉಪನ್ಯಾಸ ನೀಡಿ, ಶೇ.80ರಷ್ಟು ಜನರು ತಂಬಾಕಿನಿಂದ ಸಾವನ್ನಪ್ಪುತ್ತಿದ್ದಾರೆ, ತಂಬಾಕಿನಂತಹ ಮಾದಕ ವಸ್ತುಗಳನ್ನು ಸೇವನೆ ಮೆದುಳನ್ನು ಆವರಿಸಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ, ಈ ಚಟಕ್ಕೆ ಹೆಚ್ಚು ಯುವಜನರು ಬಲಿಯಾಗುತ್ತಿದ್ದಾರೆ. ಯುವಜನರ ಮೇಲೆ ದೇಶ ನಿಂತಿದೆ ಎನ್ನುವುದು ಮರೆಯಬಾರದು, ಪ್ರತಿಯೊಬ್ಬರು ಒಳ್ಳೆಯದನ್ನು ಹೆಚ್ಚು ಪ್ರಚಾರ ಪಡಿಸಬೇಕು, ಮಾದಕ ವಸ್ತುಗಳ ಸೇವನೆ ಬಿಟ್ಟು ಕ್ರೀಡೆ, ಯೋಗ, ವ್ಯಾಯಾಮ, ದಿನಪತ್ರಿಕೆ, ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕೆಂದು ಹೇಳಿದರು.
ಡಿವೈಎಸ್ಪಿ ಚಂದ್ರಕಾಂತ ನಂದರೆಡ್ಡಿ ಮಾತನಾಡಿ ನಮ್ಮ ಸಮಾಜ, ಕುಟುಂಬ ಚೆನ್ನಾಗಿ ಇರಬೇಕೆಂದರೆ ತಂಬಾಕು ಸೇವನೆಯಂತಹ ದುಶ್ಚಟಗಳನ್ನು ದೂರು ಮಾಡಿ ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡಲು ಎಲ್ಲರೂ ಕೈಜೋಡಿಸಬೇಕೆಂದು ತಿಳಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಕಾಶ ಗೊಟಖಂಡಿ, ಪಿಎಸ್‌ಐ ಗುರುಶಾಂತ ದಾಶ್ಯಾಳ, ಸಹಾಯಕ ಅಭಿಯೋಜಕ ರಾಜೇಶ್ವರಿ ಸುತ್ತಾರ, ನ್ಯಾಯವಾದಿ ವೈ.ಎನ್.ಲಂಕೇನವರ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಎಸ್.ಮೇಟಿ ಮತ್ತಿತರರಿದ್ದರು.