ಸಿಂದಗಿ ವಕೀಲರ ಸಂಘದಿಂದ ಎಸ್.ಐ. ಶ್ರೀಕಾಂತ ಕಾಂಬಳೆ ಹಾಗೂ ಪೊಲೀಸ್ ಸಿಬ್ಬಂದಿ ಭಜಂತ್ರಿ ಅವರನ್ನು ಅಮಾನತು ಮಾಡಬೇಕೆಂದು ಉಪ ತಹಸೀಲ್ದಾರ್ ಮೂಲಕ ವಕೀಲರ ರಾಜ್ಯಪಾಲರಿಗೆ ಹಾಗೂ ಗಹ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಎಸ್.ಬಿ. ಪಾಟೀಲ ಗುಂದಗಿ, ರಾಜಶೇಖರ ಚೌರ, ಎಸ್.ಬಿ. ಖಾನಾಪೂರ ಮತ್ತಿತರರಿದ್ದರು.
- ನ್ಯಾಯಾಂಗ ನಿಂದನೆ ಆರೋಪ
- ಕರ್ತವ್ಯ ಲೋಪ
ಸಿಂದಗಿ : ವಕೀಲರ ಕಾರ್ಯ ಅವಮಾನಿಸಿ, ವಾಟ್ಸಪ್ ಮೂಲಕ ಹಂಚಿ ನ್ಯಾಯಾಂಗ ನಿಂದನೆ ಮಾಡಿದ ಪೇದೆ ವಿಶ್ವನಾಥ ಭಜಂತ್ರಿ ಹಾಗೂ ಆರೋಪಿಯನ್ನು ನಿಗದಿತ ಅವಧಿಯೊಳಗೆ ನ್ಯಾಯಾಲಯಕ್ಕೆ ಹಾಜರು ಪಡೆಸದೆ ಕರ್ತವ್ಯ ಲೋಪವೆಸಗಿದ ಠಾಣಾಧಿಕಾರಿ ಶ್ರೀಕಾಂಬಳೆ ಅವರನ್ನು ಅಮಾನತು ಮಾಡುವಂತೆ ತಾಲೂಕು ವಕೀಲರ ಸಂಘ ಗೃಹ ಸಚಿವರಿಗೆ ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ನಗರದ ವಕೀಲರ ಸಂಘದ ಕಚೇರಿಯಲ್ಲಿ ಬುಧವಾರ ವಕೀಲರ ಸಂಘದ ಅಧ್ಯಕ್ಷ ಎಸ್.ಬಿ. ಪಾಟೀಲ ಗುಂದಗಿ ನೇತೃತ್ವದಲ್ಲಿ ತಾಲೂಕು ಉಪ ತಹಸೀಲ್ದಾರ್ ಐ.ಎಂ. ಬಳಗಾನೂರ ಅವರ ಮೂಲಕ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷ ಎಸ್.ಬಿ. ಪಾಟೀಲ ಗುಂದಗಿ ಮಾತನಾಡಿ, ಸಿಂದಗಿ ಠಾಣೆಯಲ್ಲಿ ಜೂ. 3ರಂದು ದಾಖಲಾದ ಸಿ.ಆರ್. ನಂ. 189/2026ರ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡೆಸಲು ಕರೆತರುವ ಮೊದಲೇ, ಪೊಲೀಸರು, ಆರೋಪಿತನಿಗೆ ವಿಜಯಪುರದ ಪರಿಣಿತ ವಕೀಲರ ಪರಿಚಯ ತಮಗಿದ್ದು, ಅವರ ಮುಖಾಂತರ ಜಾಮೀನು ಪಡೆಯುವಂತೆ ಹೇಳಿ ನಗರದ ವಕೀಲರನ್ನು ಅವಮಾನಿಸಿದ್ದಾರೆ. ಅಲ್ಲದೇ ಅದೇ ಆರೋಪಿಯನ್ನು ಮೂರು ದಿನಗಳ ಹಿಂದೆ ಬಂಧಿಸಿದ್ದರೂ, ನ್ಯಾಯಾಲಯಕ್ಕೆ ಹಾಜರು ಪಡೆಸದೆ ಕರ್ತವ್ಯ ಲೋಪವೆಸಗಿದ್ದಾರೆ. ವಕೀಲರನ್ನು ಅವಮಾನಿಸಿದ ಪೇದೆಯ ಕುರಿತು ಕ್ರಮ ವಹಿಸುವಂತೆ ಎಸ್‌ಐ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.
ನ್ಯಾಯವಾದಿ ರಾಜಶೇಖರ ಚೌರ, ಎಸ್.ಬಿ. ಖಾನಾಪೂರ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಬಂಧಿಸಿದ ಆರೋಪಿಗಳನ್ನು ನಿಗದಿತ ಸಮಯದೊಳಗೆ ನ್ಯಾಯಾಲಯಕ್ಕೆ ಹಾಜರು ಪಡೆಸದೇ, ಠಾಣೆಯಲ್ಲಿಯೇ ಇಟ್ಟುಕೊಂಡು ದುಡ್ಡಿಗಾಗಿ ಕಿರುಕುಳ, ಹಿಂಸೆ ನೀಡಲಾಗುತ್ತಿದೆ ಆಗ್ರಹಿಸಿದರು.
ಸಿ.ಎಂ. ಸೂರ್ಯವಂಶಿ, ಅರವಿಂದ ಕನ್ನೂರ, ಬಿ.ಸಿ. ಪಾಟೀಲ, ಎಂ.ಸಿ. ಯಾತನೂರ, ಎನ್.ಎಸ್. ಬಗಲಿ, ರಾಜು ಪಾಟೀಲ, ಎ.ಎಸ್. ಖಾನಪಟೇಲ ಮತ್ತಿತರರಿದ್ದರು.