ವಿಜಯಪುರ ನಗರದ ಖಾಸಗಿ ಹೊಟೇಲ್‌ನಲ್ಲಿ ಕೆಪಿಸಿಸಿ ವಕ್ತಾರ ಎಸ್.ಎಂ. ಪಾಟೀಲ ಗಣಿಹಾರ ಸುದ್ದಿಗೋಷ್ಠಿ ನಡೆಸಿದರು. ಮುಖಂಡರಾದ ಎಂ.ಸಿ. ಮುಲ್ಲಾ, ಫಯಾಜ್ ಕಲಾದಗಿ ಇದ್ದಾರೆ.
- ಕಾಂಗ್ರೆಸ್ ವಿರುದ್ಧ ಸಾತ್ವಿಕ ಸಿಟ್ಟು ಪ್ರದರ್ಶನ
- ಅಧಿಕಾರ ಹಂಚಿಕೆ ವಿಚಾರದಲ್ಲಿ ಕಡೆಗಣಿಸಬೇಡಿ
- ಮತಬ್ಯಾಂಕ್‌ಗೆ ಮಾತ್ರ ಮುಸ್ಲಿಂರ ಬಳಕೆ ಬೇಡ
ವಿಜಯಪುರ: ‘ಸ್ವಾತಂತ್ರೃ ಪೂರ್ವದಿಂದ ಹಿಡಿದು ಸ್ವಾತಂತ್ರಾೃ ನಂತರದಲ್ಲಿಯೂ ಮುಸ್ಲಿಂರು ಕಾಂಗ್ರೆಸ್ ಜೊತೆಗಿದ್ದಾರೆ. ಆದರೆ, ಮತಬ್ಯಾಂಕ್ ಆಗಿ ಬಳಸಿಕೊಳ್ಳುವ ಕಾಂಗ್ರೆಸ್ ಅಧಿಕಾರ ಹಂಚಿಕೆ ವಿಚಾರ ಬಂದಾಗ ಮುಸ್ಲಿಂರನ್ನು ಕಡೆಗಣಿಸುತ್ತಿರುವುದು ಈಚೆಗೆ ಹೆಚ್ಚಾಗುತ್ತಿದೆ, ಅದರಲ್ಲೂ ಉತ್ತರ ಕರ್ನಾಟಕದ ಮುಸ್ಲಿಂರಿಗೆ ವಿಧಾನ ಪರಿಷತ್, ನಿಗಮ-ಮಂಡಳಿಗಳಿಗೆ ನೇಮಕ ದೂರದ ಮಾತಾಗಿದೆ’ ಎಂದು ಕೆಪಿಸಿಸಿ ವಕ್ತಾರ ಎಸ್.ಎಂ. ಪಾಟೀಲ ಗಣಿಹಾರ ಅಸಮಾಧಾನ ಹೊರಹಾಕಿದರು.
ಬೆಂಗಳೂರು, ಕೊಲ್ಹಾರ, ಮೈಸೂರು, ದಾವಣಗೆರೆವರೆಗೆ ಮಾತ್ರ ಅಲ್ಪಸಂಖ್ಯಾತರನ್ನು ಪರಿಗಣಿಸಲಾಗುತ್ತಿದೆ. ಉತ್ತರ ಕರ್ನಾಟಕ ಭಾಗದ ಅಲ್ಪಸಂಖ್ಯಾತರನ್ನು ಪರಿಣನೆಗೆ ತೆಗೆದುಕೊಳ್ಳುತ್ತಲೇ ಇಲ್ಲ. ಕಳೆದ ಅವಧಿಯಲ್ಲಿ ಏಳು ವಿಧಾನ ಪರಿಷತ್ ಸ್ಥಾನ ಖಾಲಿ ಇದ್ದಾಗಲೂ ಕಡೆಗಣಿಸಲಾಯಿತು, ಈ ಬಾರಿಯೂ ಕಡೆಗಣಿಸಲಾಗುತ್ತಿದೆ. ಹೀಗಾದರೆ ಅಲ್ಪಸಂಖ್ಯಾತರಲ್ಲಿಯೂ ‘ಕೈ’ ಬಿಡುವ ವಿಚಾರ ಬಲಗೊಳ್ಳುತ್ತಿದ್ದು, ಅದಕ್ಕೆ ಅವಕಾಶ ಕೊಡಬಾರದೆಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ವಿಜಯಪುರ ಜಿಲ್ಲೆ ಕೆಪಿಸಿಸಿ ಪಟ್ಟಿಯಲ್ಲಿ ಇದೆಯೋ ಇಲ್ಲವೋ ಎಂಬ ಅನುಮಾನ ಕಾಡುತ್ತಿದೆ. ಚುನಾವಣೆ ಸಂದರ್ಭಲ್ಲಿ ಚಪ್ಪಲಿ ಸವೆಸಿ ಈ ಭಾಗದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುತ್ತಿರುವ ಅಲ್ಪಸಂಖ್ಯಾತರು ಅವರು ಗೆದ್ದಾಗ ತಾವೇ ಗೆದ್ದಂತೆ ಸಂಭ್ರಮಿಸುತ್ತಾರೆ. ಸಚಿವ ಸ್ಥಾನ ಸಿಕ್ಕಾಗ ಅವರಿಗಿಂದ ಹೆಚ್ಚಾಗಿ ಖುಷಿ ಪಡುತ್ತಾರೆ. ಆದರೆ, ಅಧಿಕಾರ ಹಂಚಿಕೆ ವಿಚಾರ ಬಂದಾಗ ಅಲ್ಪಸಂಖ್ಯಾತರನ್ನು ದೂರವಿರಿಸಲಾಗುತ್ತಿದೆ. ಈ ಭಾಗದ ಶಾಸಕರು ಅಲ್ಪಸಂಖ್ಯಾತರ ನೋವನ್ನು ಬೆಂಗಳೂರಿನ ಕೆಪಿಸಿಸಿ ಕಚೇರಿಗೆ ಮುಟ್ಟಿಸುತ್ತಾರೋ ಇಲ್ಲವೋ ಎಂಬ ನೋವು ಮತ್ತು ಅಸಮಾಧಾನ ಕಾಡುತ್ತಿದೆ ಎಂದರು.
ಇತ್ತೀಚೆಗೆ ನೋವು ಹಂಚಿಕೊಳ್ಳಲು ಸಹ ಹೆದರಿಕೆ ಬರುತ್ತಿದೆ. ಈ ಹಿಂದೆ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ನೋವು ಹಂಚಿಕೊಳ್ಳಲೆಂದು ಹೋದರೆ ಮುಖ ಕೊಟ್ಟು ಮಾತನಾಡಲಿಲ್ಲ. ಚಕಾರ ಎತ್ತದೆ ಎದ್ದು ಹೋದರು. ಮುಂದೆ ವಿಜಯಪುರಕ್ಕೆ ಕಾರ್ಯಕ್ರಮಕ್ಕೆಂದು ಬಂದಾಗ ಕಾಂಗ್ರೆಸ್‌ನ ಆರು ಶಾಸಕರು ಮತ್ತು ಡಿಸಿಎಂ ಸಮ್ಮುಖದಲ್ಲಿಯೇ ಶಾಸಕ ಬಸನಗೌಡ ಪಾಟೀಲ ಯತ್ನಾಳರನ್ನು ಕೊಂಡಾಡಿದರು. ಕನಿಷ್ಠ ಪಕ್ಷ ಈ ಭಾಗದ ಅಲ್ಪಸಂಖ್ಯಾತರ ಭಾವನೆಯನ್ನೂ ಅರಿತುಕೊಳ್ಳದೇ ಪಕ್ಷದ ಪರಾಜಿತ ಅಭ್ಯರ್ಥಿ ಎದುರು ಎದುರಾಳಿ ಶಾಸಕನನ್ನು ಹೊಗಳಿದ್ದು ಅಲ್ಪಸಂಖ್ಯಾತರಿಗೆ ಸಾಕಷ್ಟು ನೋವುಂಟು ಮಾಡಿತು. ಶಿವಾನಂದ ಪಾಟೀಲರು ದರಬಾರ್ ಮೈದಾನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅಲ್ಪಸಂಖ್ಯಾತರಿಗೆ ಎಂಎಲ್‌ಸಿ ಮಾಡಬೇಕೆಂದು ಬಹಿರಂಗವಾಗಿ ಹೇಳಿಕೆ ನೀಡಿದರೂ ಗಮನ ಕೊಡಲಿಲ್ಲ. ಹೀಗಾಗಿ ಅಲ್ಪಸಂಖ್ಯಾತರು ರಾಜಕೀಯವಾಗಿ ಸಾಕಷ್ಟು ನೋವು ಅನುಭವಿಸುವಂತಾಗಿದೆ ಎಂದು ಅಳಲು ತೋಡಿಕೊಂಡರು.
ಹೊಂದಾಣಿಕೆ ರಾಜಕಾರಣಕ್ಕೆ ಅಲ್ಪಸಂಖ್ಯಾತರು ಬಲಿಯಾಗುತ್ತಿದ್ದಾರೆ. ಸ್ವತಃ ಶಾಸಕ ಬಸನಗೌಡ ಪಾಟೀಲ ಯತ್ನಾಳರೇ ಹೊಂದಾಣಿಕೆ ಹೂರಣ ಬಿಚ್ಚಿಡುತ್ತಿದ್ದರೆ ಕಾಂಗ್ರೆಸ್ ಶಾಸಕರು ಚಪ್ಪಾಳೆ ತಟ್ಟುತ್ತಾರೆ ಎಂದು ಅಸಮಾಧಾನ ತೋಡಿಕೊಂಡ ಪಾಟೀಲ ಅವರು, ಮುಸ್ಲಿಂರಿಗೆ ಕಾಂಗ್ರೆಸ್ ಅನಿವಾರ್ಯ ಎಂಬ ಕಾರಣಕ್ಕೆ ನಿರ್ಲಕ್ಷೃ ಬೇಡ. ಮುಸ್ಲಿಂರು ಪರ್ಯಾಯ ದಾರಿ ಕಂಡುಕೊಳ್ಳುವ ಮುನ್ನ ಎಚ್ಚೆತ್ತುಕೊಂಡು ಉತ್ತರ ಕರ್ನಾಟಕ ಭಾಗದ ಅದರಲ್ಲೂ ವಿಜಯಪುರದ ಅಲ್ಪಸಂಖ್ಯಾತ ಸಮುದಾಯದ ಪ್ರಜ್ಞಾವಂತರಿಗೆ ವಿಧಾನ ಪರಿಷತ್ ಹಾಗೂ ನಿಗಮ-ಮಂಡಳಿಗಳಿಗೆ ನೇಮಕ ಮಾಡಿ ಎಂದು ಆಗ್ರಹಿಸಿದರು.
ಮುಖಂಡ ಎಂ.ಸಿ. ಮುಲ್ಲಾ ಮಾತನಾಡಿ, ಕಾಂಗ್ರೆಸ್‌ನಲ್ಲಿ ಜಿಲ್ಲಾಧ್ಯಕ್ಷ ಸ್ಥಾನ ಅಲ್ಪಸಂಖ್ಯಾತರಿಗೆ ನೀಡಬೇಕೆಂದು ಒತ್ತಾಯಿಸಿದಾಗಲೂ ನೀಡಲಿಲ್ಲ. ಸ್ಥಳೀಯ ಸಂಸ್ಥೆಗಳಲ್ಲಿಯೂ ಸಾಕಷ್ಟು ಕಡೆಗಣಿಸಲಾಗುತ್ತಿದೆ. ಹೀಗಾಗಿ ಕಾಂಗ್ರೆಸ್ ಬೆಂಬಲಿಸಿ ತಪ್ಪು ಮಾಡುತ್ತಿದ್ದೇವೇನೋ ಎಂಬ ಪ್ರಜ್ಞೆ ಅಲ್ಪಸಂಖ್ಯಾತರನ್ನು ಕಾಡುತ್ತಿದೆ ಎಂದರು.
ಮುಖಂಡ ಫಯಾಜ್ ಕಲಾದಗಿ ಇದ್ದರು.