ವಿಜಯಪುರ ನಗರದ ಕನ್ನಡ ಸಾಹಿತ್ಯ ಪರಿಷತ್ ಸಭಾಭವನದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಸುದ್ದಿಗೋಷ್ಠಿ ನಡೆಸಿದರು. ಆನಂದ ಕುಲಕರ್ಣಿ, ಅಭಿಷೇಕ ಚಕ್ರವರ್ತಿ ಇದ್ದಾರೆ. 
ವಿಜಯಪುರ

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹಿಟ್ಟಿನಹಳ್ಳಿ ಸಜ್ಜು, ಕಸಾಪದಿಂದ ಸಕಲ ಸಿದ್ಧತೆ ಪೂರ್ಣ

ಪ್ರಮುಖ ಮುಖ್ಯಾಂಶಗಳು

  • ಹಿಟ್ಟಿನಹಳ್ಳಿಯಲ್ಲಿ 8ನೇ ಕನ್ನಡ ಸಾಹಿತ್ಯ ಸಮ್ಮೇಳನ
  • ಜ. 20 ರಿಂದ ಎರಡು ದಿನಗಳ ಕಾಲ ಕನ್ನಡ ಜಾತ್ರೆ
  • ಅಧಿಕಾರಿ ಸೋಮನಿಂಗ ಗೆಣ್ಣೂರ ಸರ್ವಾಧ್ಯಕ್ಷತೆ
ವಿಜಯಪುರ: ಕಳೆದೊಂದು ತಿಂಗಳಿನಿಂದ ತೀವ್ರ ಕುತೂಹಲ ಕೆರಳಿಸಿದ್ದ ‘ವಿಜಯಪುರ ತಾಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನ’ದ ಸಿದ್ಧತೆ ಪೂರ್ಣಗೊಂಡಿದ್ದು, ಜ. 20 ರಿಂದ ಎರಡು ದಿನಗಳ ಕಾಲ ನಡೆಯಲಿರುವ ಸಮ್ಮೇಳನಕ್ಕೆ ಹಿಟ್ಟಿನಳ್ಳಿ ಗ್ರಾಮ ಸಜ್ಜಾಗಿದೆ.
ಸ್ವಚ್ಛತೆ, ಪ್ರಮುಖ ಬೀದಿಗಳಲ್ಲಿ ಕಟೌಟ್‌ಗಳು, ಕನ್ನಡ ಬಾವುಟಗಳು, ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್‌ಗಳ ಅಳವಡಿಕೆ, ಮುಖ್ಯ ವೇದಿಕೆ ನಿರ್ಮಾಣ ಕಾರ್ಯ ಸೇರಿದಂತೆ ಎಲ್ಲ ಸಿದ್ಧತೆ ಪೂರ್ಣಗೊಂಡಿದೆ. ಜ. 20 ಮತ್ತು 21ರಂದು ಎರಡು ದಿನ ಅದ್ಧೂರಿಯಾಗಿ ಸಮ್ಮೇಳನ ಆರಿಸಲಾಗುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಹಾಗೂ ತಾಲೂಕಾಧ್ಯಕ್ಷ ಡಾ.ಆನಂದ ಕುಲಕರ್ಣಿ ತಿಳಿಸಿದರು.ಹಿಟ್ಟಿನಹಳ್ಳಿ ಗ್ರಾಮದ ಶಿವಮೂರ್ತಿಸ್ವಾಮಿ ಚರಂತಿಮಠ ಪ್ರೌಢಶಾಲಾ ಆವರಣದಲ್ಲಿ ಸಮ್ಮೇಳನ ಜರುಗಲಿದೆ. ಸಮ್ಮೇಳಧ್ಯಕ್ಷರ ಮೆರವಣಿಗೆ, ಉದ್ಘಾಟನಾ ಕಾರ್ಯಕ್ರಮ, ಪುಸ್ತಕ ಮಳಿಗೆ ಹಾಗೂ ಎರಡು ದಿನಗಳ ಕಾಲ ನಡೆಯುವ ವಿವಿಧ ಗೋಷ್ಠಿಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಂಪೂರ್ಣ ತಯಾರಿ ಮಾಡಿಕೊಳ್ಳಲಾಗಿದೆ ಎಂದು ಸೋಮವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಜ. 20ರಂದು ಬೆಳಗ್ಗೆ 8.15ಕ್ಕೆ ಧ್ವಜಾರೋಹಣ ನಡೆಯಲಿದೆ. ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸುವರು. ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ ನಾಡ ಧ್ವಜಾರೋಹಣ ಹಾಗೂ ತಹಸೀಲ್ದಾರ್ ಪ್ರಶಾಂತ ಚನಗೊಂಡ ಪರಿಷತ್ ಧ್ವಜಾರೋಹಣ ನೆರವೇರಿಸುವರು. ಇದೇ ವೇಳೆ ಪುಸ್ತಕ ಮಳಿಗೆ ಹಾಗೂ ದಾಸೋಹ ಮನೆ ಉದ್ಘಾಟನೆಗೊಳ್ಳಲಿದೆ. ಬಳಿಕ 9 ಗಂಟೆಗೆ ಸಮ್ಮೇಳಧ್ಯಕ್ಷರಾದ ಸೋಮನಿಂಗ ಗೆಣ್ಣೂರ ಅವರ ಮೆರವಣಿಗೆಯು ಮಾರುತೇಶ್ವರ ದೇವಸ್ಥಾನದಿಂದ ಸಮ್ಮೇಳನದ ಸ್ಥಳದವರೆಗೆ ಜರುಲಿದೆ. ಹಲವು ಪೂಜ್ಯರು, ಪ್ರಮುಖರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಬೆಳಗ್ಗೆ 10.30ಕ್ಕೆ ಪಂಚಮ ಶ್ರೀ ಶಿವಲಿಂಗೇಶ್ವರ ಮಹಾಸ್ವಾಮಿಗಳ ಪ್ರಧಾನ ವೇದಿಕೆಯಲ್ಲಿ ಸಮ್ಮೇಳನಕ್ಕೆ ಚಾಲನೆ ಸಿಗಲಿದೆ. ಬಬಲೇಶ್ವರದ ಮಹಾದೇವ ಶಿವಾಚಾರ್ಯರು, ನಿಡಸೋಸಿಯ ದುರದುಂಡೇಶ್ವರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಉದ್ಘಾಟನೆ ನೆರವೇರಿಸುವರು. ಸಚಿವ ಶಿವಾನಂದ ಪಾಟೀಲ ಅವರು ನಾಡದೇವಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಲಿದ್ದು, ಶಾಸಕ ವಿಠಲ ಕಟಕದೊಂಡ ಅಧ್ಯಕ್ಷತೆ ವಹಿಸುವರು. ಸೋಮಲಿಂಗ ಗೆಣ್ಣೂರ ಸವಾಧ್ಯಕ್ಷೀಯ ಭಾಷಣ ಮಂಡಿಸುವರು. ಶಾಸಕ ಬಸನಗೌಡ ಪಾಟೀಲ ಯತ್ನಾಳ, ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿರುವರು.
ಮಧ್ಯಾಹ್ನ 1ಕ್ಕೆ ಮಹಿಳಾ ಗೋಷ್ಠಿ, 3.30ಕ್ಕೆ ಜಾನಪದ ಗೋಷ್ಠಿ ಹಾಗೂ ಸಂಜೆ 6 ಕ್ಕೆ ಮನೋರಂಜನಾ ಕಾರ್ಯಕ್ರಮಗಳು ಜರುಗಲಿವೆ. ಮರು ದಿನ ಜ.21ರಂದು ಬೆಳಗ್ಗೆ 9 ಕ್ಕೆ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಉತ್ಸವ ಹಾಗೂ ಬುತ್ತಿ ಜಾತ್ರೆ ನಡೆಯಲಿದೆ. ಗ್ರಾಮದ ಮಹಿಳೆಯರು ತರುವ ಬುತ್ತಿಯನ್ನೇ ಎಲ್ಲರೂ ಸವಿಯಲಿದ್ದಾರೆ. 10.30ಕ್ಕೆ ಶರಣ ಸಾಹಿತ್ಯದ ಚಿಂತನಾ ಗೋಷ್ಠಿ, ಮಧ್ಯಾಹ್ನ 1 ಕ್ಕೆ ಕವಿಗೋಷ್ಠಿ, 3.30ಕ್ಕೆ ದಾಸ ಸಾಹಿತ್ಯ ಗೋಷ್ಠಿ ಹಾಗೂ ಸಂಜೆ ಬಹಿರಂಗಸಭೆ ಹಾಗೂ ಸಮಾರೋಪ ಸಮಾರಂಭ, ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ ಎಂದು ವಿವರಿಸಿದರು.
"

ಸ್ವಚ್ಛತಾ ಅಭಿಯಾನ

ಸಮ್ಮೇಳನದ ಹಿನ್ನೆಲೆ ಹಿಟ್ಟಿನಹಳ್ಳಿ ಗ್ರಾಮದಲ್ಲಿ ಸೋಮವಾರ ಸ್ವಚ್ಛತಾ ಅಭಿಯಾನ ನಡೆಯಿತು.

ತಾಲೂಕು ದಂಡಾಧಿಕಾರಿ ಪ್ರಶಾಂತ ಚನಗೊಂಡ ಅಭಿಯಾನಕ್ಕೆ ಚಾಲನೆ ನೀಡಿ, ಕನ್ನಡ ಸಾಹಿತ್ಯ ಸಮ್ಮೇಳನ ಜಾತ್ರೆಯಂತೆ ಚರಿಸೋಣ. ಗ್ರಾಮ ಬೀದಿ ಬೀದಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳೋಣ. ಪ್ರತಿ ಮನೆ ಮುಂದೆ ಕಸಗುಡಿಸಿ, ನೀರು ಚುಮುಕಿಸಿ, ರಂಗೋಲಿ ಬಿಡಿಸಿ ಸಂಭ್ರಮಿಸೋಣ ಎಂದರು.

ತಾಪಂ ಇಒ ಬಾಬು ರಾಠೋಡ ಮಾತನಾಡಿ, ಕನ್ನಡ ನಮ್ಮೆಲ್ಲರ ಉಸಿರು. ಹೀಗಾಗಿ ಕನ್ನಡಾಂಬೆ ಜಾತ್ರೆಯಲ್ಲಿ ಅಲ್ಲರೂ ಸಂಭ್ರಮದಿಂದ ಪಾಲ್ಗೊಳ್ಳೋಣ ಎಂದರು.

ಮುಖಂಡರಾದ ಡಾ.ಮಾಧವ ಗುಡಿ, ರವಿ ಪವಾರ, ಸತೀಶ ಪಾಟೀಲ, ಅನೀಲಕುಮಾರ ಪೂಜಾರ, ಶಂಕರ ಕುಂಬಾರ, ಎಸ್.ಸಿ. ಮ್ಯಾಗೇರಿ, ಬಸವರಾಜ ಜಗಳೂರ, ಗಿರೀಶ ಹಲಕುಡೆ, ಪ್ರಕಾಶ ನಾಯಕ, ಕೆ.ಡಿ. ಗುಂಡಬಾವಡಿ, ಐ.ಎಸ್. ಔರಂಗಾಬಾದ್, ಮೋತಿಲಾಲ ಲಮಾಣಿ, ಗಂಗಾಧರ ಜೇವೂರ, ಜಗನ್ನಾಥ ಚೌಧರಿ, ಶ್ರೀಕಾಂತ ಚೌಧರಿ, ಚಂದ್ರಶೇಖರ ಮಲಘಾಣ, ಆರ್.ಬಿ. ಬಿರಾದಾರ, ದುಂಡಪ್ಪ ಬಗಲಿ, ಹುಸೇನ ವಾಲಿಕಾರ, ಮುದಸ್ಸರ ವಾಲಿಕಾರ, ಅಶೋಕ ಬಗಲಿ, ಸಂಗನಗೌಡ ಬಿರಾದಾರ ಮತ್ತಿತರರಿದ್ದರು.