ಹುತಾತ್ಮರ ದಿನದ ನಿಮಿತ್ತ ವಿಜಯಪುರದ ನಗರದ ಹುತಾತ್ಮರ (ಮೀನಾಕ್ಷಿ ಚೌಕ್) ವೃತ್ತದಲ್ಲಿರುವ ಸ್ಮಾರಕಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಡಾ.ಆನಂದ ಕೆ, ರಿಷಿ ಆನಂದ, ಎಂ.ಎಸ್. ಕರಡಿ ಮತ್ತಿತರರಿದ್ದಾರೆ.
ಸ್ವಾತಂತ್ರ‍್ಯ ಯೋಧರ ತ್ಯಾಗ ಬಲಿದಾನ ಹೋರಾಟ ನಮ್ಮೆಲ್ಲರಿಗೂ ಮಾರ್ಗದರ್ಶನವಾಗಿದ್ದು, ನಿತ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನ ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಜಿಲ್ಲಾಧಿಕಾರಿ ಡಾ. ಆನಂದ ಕೆ.ಹೇಳಿದರು.
ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ಜಿಲ್ಲಾಡಳಿತ, ಜಿ.ಪಂ., ಮಹಾನಗರ ಪಾಲಿಕೆ, ಭಾರತೀಯ ಸೇವಾದಳ, ಭಾರತೀಯ ಸ್ಕೌಟ್ಸ್ ಹಾಗೂ ಗೈಡ್ಸ್ ಸಂಯುಕ್ತಾಶ್ರಯದಲ್ಲಿ ಹುತಾತ್ಮ ದಿನಾಚರಣೆ ನಿಮಿತ್ತ ನಗರದ ಹುತಾತ್ಮರ (ಮೀನಾಕ್ಷಿ ಚೌಕ್) ವೃತ್ತದಲ್ಲಿರುವ ಸ್ಮಾರಕಕ್ಕೆ ಹಾಗೂ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಶುಕ್ರವಾರ ಪುಷ್ಪಾರ್ಚನೆ ಸಲ್ಲಿಸಿ, ಮೌನಾಚರಣೆ ನಡಿಸಿ ಅವರು ಮಾತನಾಡಿದರು.
ಹೋರಾಟಗಾರರನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ನಮ್ಮ ಸಂವಿಧಾನದ ಆಶಯದಂತೆ ನಡೆದುಕೊಂಡು ದೇಶ ಕಟ್ಟುವ ನಿಟ್ಟಿನಲ್ಲಿ ಕೈ ಜೋಡಿಸೋಣ. ದೇಶದ ಸೈನಿಕರು ನಮ್ಮ ಹೆಮ್ಮೆಯಾಗಿದ್ದಾರೆ. ಹುತಾತ್ಮರ ದಿನವನ್ನು ಪೂರ್ಣ ಪಾವಿತ್ರ‍್ಯತೆ ಮತ್ತು ಅತ್ಯುತ್ತಮವಾಗಿ ಆಚರಿಸಲಾಗುತ್ತಿದೆ ಎಂದರು.
ಭಾರತದ ಸ್ವಾತಂತ್ರ‍್ಯ ಹೋರಾಟದಲ್ಲಿ ಹುತಾತ್ಮರಾದವರ ಪಾತ್ರ ಮತ್ತು ರಾಷ್ಟ್ರೀಯ ಐಕ್ಯತೆಯ ಮೂಲ ಉದ್ದೇಶಗಳ ಕುರಿತು ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡು ಗೌರವ ಸಲ್ಲಿಸಲಾಗುತ್ತಿದೆ. ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು ತಮ್ಮ ಸತ್ಯ-ಅಹಿಂಸಾ ಮಾರ್ಗದಿಂದ ದೇಶದ ಸ್ವಾತಂತ್ರ‍್ಯಕ್ಕಾಗಿ ಹಲವು ಸತ್ಯಾಗ್ರಹ, ಉಪವಾಸ ಕೈಗೊಂಡರು. ಮಹಾತ್ಮ ಗಾಂಧೀಜಿಯವರ ವಿಚಾರಧಾರೆಗಳು ನಮ್ಮ ಮೇಲೆ ಪ್ರಭಾವ ಬೀರಿ, ಅವರ ವಿಚಾರಧಾರೆಗಳನ್ನು ತಿಳಿಯಬೇಕು ಎಂದು ತಿಳಿಸಿದರು.
ಬಾಲಕಿಯರ ಪದವಿ ಪೂರ್ವ ಕಾಲೇಜಿನ ಆರ್.ಸಿ.ಹಿರೇಮಠ ಉಪನ್ಯಾಸ ನೀಡಿ, ಹಲವು ಹೋರಾಟಗಾರರ ತ್ಯಾಗ ಬಲಿದಾನದಿಂದ ಪಡೆದುಕೊಂಡ ನಮ್ಮ ಸ್ವಾತಂತ್ರ‍್ಯದ ಐತಿಹಾಸಿಕ ವಿಚಾರಗಳನ್ನು ಆ ಹೋರಾಟಗಾರರ ಜೀವನ ಚರಿತೆ ಅರಿಯುವ ಮೂಲಕ ಯುವಪೀಳಿಗೆ ಪ್ರೇರಣೆ ಹೊಂದಬೇಕು ಎಂದರು.
ನಂತರ ಹುತಾತ್ಮರ ಚೌಕದಿಂದ ಮಹಾತ್ಮ ಗಾಂಧಿ ವೃತ್ತಕ್ಕೆ ತೆರಳಿ ಮಹಾತ್ಮ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ವಿದ್ಯಾರ್ಥಿನಿಯರು ಭಾರತವನ್ನು ಶ್ರೀಮಂತಗೊಳಿಸಿದ ಸ್ವಾತಂತ್ರ‍್ಯ ಹೋರಾಟಗಾರರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ನಮ್ಮ ಯುವಪೀಳಿಗೆ ಆ ದಿಸೆಯಲ್ಲಿ ನಡೆಯೋಣ ಎಂದು ಅನಿಸಿಕೆ ಹಂಚಿಕೊಂಡರು.
ಪಾಲಿಕೆ ಮೇಯರ್ ಎಂ.ಎಸ್. ಕರಡಿ, ಜಿ.ಪಂ ಸಿಇಒ ರಿಷಿ ಆನಂದ, ಜಿ.ಪಂ. ಉಪಕಾರ್ಯದರ್ಶಿ ಪ್ರಕಾಶ ವಡ್ಡರ, ಪಾಲಿಕೆಯ ಆಯುಕ್ತ ವಿಜಯ ಮೆಕ್ಕಳಕಿ, ತಹಸೀಲ್ದಾರ್ ಪ್ರಶಾಂತ ಚನಗೊಂಡ, ಜಿಲ್ಲಾಧಿಕಾರಿ ಕಚೇರಿಯ ಶಿರಸ್ತೇದಾರ ಸಲಿಂ ಬಿಜಾಪುರ ಮತ್ತಿತರರಿದ್ದರು.