RAMESH-JIGAJINAGI 
ವಿಜಯಪುರ

ಸೇವೆಯಲ್ಲ; ಅದು ಪ್ರಜಾ ಸುಲಿಗೆ ಆಂದೋಲನ, ಸಂಸದ ರಮೇಶ ಜಿಗಜಿಣಗಿ ಲೇವಡಿ

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ಸರ್ಕಾರದ ನಡೆಗೆ ತೀವ್ರ ಅಸಮಾಧಾನ
  • ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಿ ಎಂದ ಸಂಸದ
  • ಖಾಲಿ ಹುದ್ದೆಗಳನ್ನು ಮೊದಲು ಭರ್ತಿ ಮಾಡಿ
  • ತಂತ್ರಜ್ಞಾನ ಆಧಾರಿತ ಸೇವಾ ವ್ಯವಸ್ಥೆ ಬಲಪಡಿಸಲು ಸಲಹೆ
ವಿಜಯಪುರ: ಒಂದೆಡೆ ‘ಪ್ರಜಾ ಸೇವೆ ಆಂದೋಲನ’ದ ಹೆಸರಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳಲು ಹೊರಟಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಇನ್ನೊಂದೆಡೆ ‘ಪ್ರಜಾ ಸುಲಿಗೆ ಅಭಿಯಾನ’ ಆರಂಭಿಸಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹರಿಹಾಯ್ದಿದ್ದಾರೆ.
ಗ್ಯಾರಂಟಿ ಯೋಜನೆಗಳ ಹೆಸರಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಮೂರುವರೆ ವರ್ಷ ಗತಿಸಿದರೂ ಈವರೆಗೂ ರಾಜ್ಯದಲ್ಲಿ ಹೇಳಿಕೊಳ್ಳುವಂತ ಅಭಿವೃದ್ಧಿ ಕಾರ್ಯಗಳಾಗುತ್ತಿಲ್ಲ. ಗ್ಯಾರಂಟಿ ಯೋಜನೆಗಳನ್ನೂ ಸಮರ್ಪಕವಾಗಿ ಅನುಷ್ಟಾನಗೊಳಿಸಿಲ್ಲ. ಬದಲಾಗಿ ಗ್ಯಾರಂಟಿ ಯೋಜನೆಗಳನ್ನು ನಿಭಾಯಿಸಲು ವಿವಿಧ ಮಾರ್ಗಗಗಳಲ್ಲಿ ಆದಾಯ ಸಂಗ್ರಹಿಸಲು ಜನರ ಸುಲಿಗೆಗೆ ಇಳಿದಿದೆ. ‘ಒಂದು ಕೈಯಿಂದ ಕೊಟ್ಟು ಇನ್ನೊಂದು ಕೈಯಿಂದ ಕಿತ್ತುಕೊಳ್ಳುವ’ ದುಸ್ಸಾಹಸಕ್ಕಿಳಿದಿದೆ ಎಂದು ಕಿಡಿಕಾರಿದ್ದಾರೆ.
ಆಡಳಿತ ವ್ಯವಸ್ಥೆ ಮತ್ತು ಸಾಮಾನ್ಯ ಜನರ ನಡುವಿನ ಅಂತರವನ್ನು ಕಡಿಮೆ ಮಾಡಿ, ಪಾರದರ್ಶಕ ಹಾಗೂ ಜನಸ್ನೇಹಿ ಆಡಳಿತ ನೀಡುವುದು ಪ್ರಜಾಸೇವೆ ಆಂದೋಲನದ ಮೂಲ ಉದ್ದೇಶವೆಂದು ಬೀಗುವ ಕಾಂಗ್ರೆಸ್ಸಿಗರು ಕಳೆದ ಮೂರುವರೆ ವರ್ಷಗಳಲ್ಲಿ ಏನು ನಿದ್ದೆ ಮಾಡುತ್ತಿದ್ದರಾ? ಪ್ರಜಾಸೇವೆ ಇಲಾಖೆ ಸ್ಥಾಪಿಸಿರುವ ಈ ಸರ್ಕಾರದ ನಿರ್ಧಾರದಿಂದಾಗಿ ಈಗಿರುವ ಇಲಾಖೆಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲವೆಂದಂತಾಯಿತಲ್ಲವೇ? ಜನರು ತಮ್ಮ ಸೇವೆಗಳಿಗಾಗಿ ಪ್ರಜಾಸೇವೆ ಇಲಾಖೆಗೆ ಅರ್ಜಿ ಸಲ್ಲಿಸುವುದಾದರೆ ಸ್ಥಳೀಯ ಇಲಾಖೆಗಳು ಮತ್ತು ಅಧಿಕಾರಿಗಳು ಪ್ರಾಮಾಣಿಕವಾಗಿ ಹಾಗೂ ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿಲ್ಲವೆಂದಂತಾಯಿತಲ್ಲವೇ? ಎಂದು ಜಿಗಜಿಣಗಿ ಪ್ರಶ್ನಿಸಿದ್ದಾರೆ.
ಇರುವ ಇಲಾಖೆಗಳೇ ಸಿಬ್ಬಂದಿ ಹಾಗೂ ಅಧಿಕಾರಿಗಳ ಕೊರತೆಯಿಂದ ಬಳಲುತ್ತಿವೆ. ಮೊದಲು ನೇಮಕ ಪ್ರಕ್ರಿಯೆ ನಡೆಸಲಿ. ಗ್ಯಾರಂಟಿಯೇತರ ಯೋಜನೆಗಳ ಸಮರ್ಪಕವಾಗಿ ಅನುಷ್ಟಾನಗೊಳಿಸಲಿ. ನಿಗಮಗಳು ಖಾಲಿ ಹೊಡೆಯುತ್ತಿದ್ದು ಅವುಗಳಿಗೆ ಜೀವ ತುಂಬವ ಕೆಲಸವಾಗಲಿ. ದುರುಪಯೋಗ ಪಡಿಸಿಕೊಳ್ಳಲಾಗಿರುವ ವಾಲ್ಮೀಕಿ ನಿಗಮದ ಅನುದಾನವನ್ನು ಮರಳಿ ನೀಡುವ ಮೂಲಕ ಆಯಾ ಸಮುದಾಯಗಳ ಕಲ್ಯಾಣಕ್ಕೆ ತುರ್ತಾಗಿ ವಿನಿಯೋಗಿಸಲಿ. ದಲಿತರ ಹಣವನ್ನು ಗ್ಯಾರಂಟಿಗೆ ಬಳಸುವುದನ್ನು ನಿಲ್ಲಿಸಲಿ. ಆರೋಗ್ಯ ಸೇವೆ, ಶಿಕ್ಷಣ ಸೇವೆ, ಕಂದಾಯ ಸೇವೆಗಳು ಲಭ್ಯವಾಗಲು ಸಿಬ್ಬಂದಿಯ ನೇಮಕವಾಗಲಿ. ಅದನ್ನು ಬಿಟ್ಟು ಕೇವಲ ಪ್ರಚಾರಕ್ಕಾಗಿ ದಿನಕ್ಕೊಂದು ಇಲಾಖೆ ತೆರೆಯುವುದರಿಂದ ಪ್ರಯೋಜನವಿಲ್ಲವೆಂದು ಸಂದರು ಆವೇಶ ಭರಿತರಾಗಿ ನುಡಿದಿದ್ದಾರೆ.
ಮಾತೆತ್ತಿದ್ದರೆ ಮಹಾತ್ಮ ಗಾಂಧಿ, ರಾಮ ರಾಜ್ಯ, ಸಂವಿಧಾನ ಮತ್ತು ಪ್ರಜಾಪ್ರಭುತ್ವ ಎಂದೆಲ್ಲ ಭಾಷಣ ಬಿಗಿಯುವ ಕಾಂಗ್ರೆಸ್ಸಿಗರು ಈವರೆಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಿಲ್ಲ. ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಅಷ್ಟೇ ಏಕೆ ಬಿಬಿಎಂಪಿಯಂತ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲಾಗದೇ ಕುಂಟುನೆಪ ಹೇಳಿಕೊಂಡು ಇಡೀ ವ್ಯವಸ್ಥೆಯನ್ನು ಹಳ್ಳ ಹಿಡಿಸಿರುವ ಕಾಂಗ್ರೆಸ್ಸಿಗರಿಂದ ಪ್ರಜಾಸೇವೆ ಎಂಬುದು ಕೇವಲ ಬೂಟಾಟಿಕೆ. ಅಧಿಕಾರಕ್ಕೆ ಬಂದ ಆರಂಭದಲ್ಲಿ ‘ಜನಸ್ಪಂದನ’ ಆರಂಭ ಶೂರತ್ವಕ್ಕೆ ಮಾತ್ರ ಸೀಮಿತವಾಯಿತು. ಬರ ಬಂದರೂ ಶಾಸಕರು ಜನರ ಕೈಗೆ ಸಿಗುತ್ತಿಲ್ಲ. ಸಚಿವರು-ಶಾಸಕರ ಗುದ್ದಾಟದಿಂದಾಗಿ ಜನರ ಹೈರಾಣಾಗುತ್ತಿದ್ದಾರೆ. ಸಕಾಲಕ್ಕೆ ಕೆಡಿಪಿ ಸಭೆಗಳನ್ನು ನಡೆಸಲಾಗಿಲ್ಲ. ಇಂಥವರಿಂದ ಯಾವ ಸೇವೆ ನಿರೀಕ್ಷಿಸಲು ಸಾಧ್ಯ? ಎಂದು ಚಾಟಿ ಬೀಸಿರುವ ಜಿಗಜಿಣಗಿ ಅವರು, ಕೂಡಲೇ ಬೂಟಾಟಿಕೆಯನ್ನು ನಿಲ್ಲಿಸಿ ಕಾಲಕ್ಕೆ ಜನರ ಮನೆ ಬಾಗಿಲಿಗೆ ಸೇವೆ ಲಭಿಸಲು ಸಿಬ್ಬಂದಿ ನೇಮಕ, ಆಡಳಿತ ಯಂತ್ರದ ಸುಧಾರಣೆ, ಡಿಜಿಟಿಲ್ ತಂತ್ರಜ್ಞಾನದ ಬಳಕೆಯಂತ ಅತ್ಯಾಧುನಿಕ ವ್ಯವಸ್ಥೆಗೆ ಮುನ್ನುಡಿ ಬರೆಯಬೇಕೆಂದು ಪ್ರಕಟಣೆ ಮೂಲಕ ತಿಳಿಸಿದ್ದಾರೆ.