ವಿಜಯಪುರದ ಕಿತ್ತೂರ ರಾಣಿ ಚನ್ನಮ್ಮ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ 45ನೇ ಪ್ರಾಂತ ಸಮ್ಮೇಳನಕ್ಕೆ ಗಣ್ಯರು ಚಾಲನೆ ನೀಡಿದರು. ಬಟ್ಟು ಸತ್ಯನಾರಾಯಣ, ಅಶೀಷ್ ಚವಾಣ್, ವಿಕಾಸ ದರಬಾರ, ಸಚಿನ್ ಕುಳಗೇರಿ ಮತ್ತಿತರರಿದ್ದಾರೆ.
- ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಆಶಯ
- ಎಬಿವಿಪಿ 45ನೇ ಪ್ರಾಂತ್ಯ ಸಮ್ಮೇಳನಕ್ಕೆ ಚಾಲನೆ
ವಿಜಯಪುರ: ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸ ಪಡೆದು, ವಿದೇಶಗಳಿಗೆ ತೆರಳದೇ ಭಾರತ ದೇಶದಲ್ಲಿಯೇ ನೆಲೆ ನಿಂತು ಬಡತನ ನಿವಾರಣೆಯಂತಹ ಮಹೋನ್ನತ ಕಾರ್ಯಕ್ರಮ ಮಾಡಬೇಕು ಎಂದು ಕಲ್ಬುರ್ಗಿ ಕೇಂದ್ರಿಯ ವಿವಿಯ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಹೇಳಿದರು.
ನಗರದ ಕಿತ್ತೂರ ರಾಣಿ ಚನ್ನಮ್ಮ ಸಭಾ ಭವನದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು ವತಿಯಿಂದ ಹಮ್ಮಿಕೊಂಡಿರುವ 45ನೇ ಪ್ರಾಂತ್ಯ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಮ್ಮ ದೇಶದಲ್ಲಿ ಉನ್ನತ ಶಿಕ್ಷಣ ಪಡೆದು ಹಲವರು ವಿದೇಶಗಳಿಗೆ ಹೋಗುತ್ತಿದ್ದಾರೆ. ವಿದೇಶದವರು ನಮ್ಮ ಪ್ರತಿಭಾನ್ವಿತರ ಪ್ರತಿಭೆ ಬಳಸಿಕೊಂಡು ಸಂಪದ್ಭರಿತವಾಗುತ್ತಿದ್ದಾರೆ. ಹೀಗಾಗಿ ನಮ್ಮಲ್ಲಿರುವ ಪ್ರತಿಭಾವಂತರು ನಮ್ಮ ದೇಶದಲ್ಲಿಯೇ ನೆಲೆ ನಿಂತು ಬಡತನ, ನಿರುದ್ಯೋಗ, ಸಾಮಾಜಿಕ ಸಮಸ್ಯೆಗಳ ನಿವಾರಣೆಗೆ ಕೈ ಜೋಡಿಸಬೇಕೆಂದು ಸಲಹೆ ನೀಡಿದರು.
ವಿಶ್ವ ಯುದ್ಧದಿಂದಾಗಿ ಜಪಾನ್ ಸಂಪೂರ್ಣ ನಲುಗಿ, ಆರ್ಥಿಕತೆ ಕುಸಿದಿತ್ತು. ಆದರೆ ಜಪಾನ್ ನಾಗರಿಕರು ರಾಷ್ಟ್ರೀಯ ಭಾವನೆಯ ಜತೆಗೆ ಮತ್ತೊಮ್ಮೆ ದೇಶ ಕಟ್ಟಿದ್ದಾರೆ. ಅದೇ ರೀತಿ ಕಾರ್ಯಬದ್ಧತೆ, ಸಮರ್ಪಣಾ ಮನೋಭಾವ ಯುವ ಜನತೆ ವಿಕಸಿತ ಭಾರತ ನಿರ್ಮಾಣಕ್ಕೆ ಪಣ ತೊಡಬೇಕು ಎಂದು ತಿಳಿಸಿದರು.
ಎಬಿವಿಪಿ ರಾಜ್ಯ ಘಟಕದ ಅಧ್ಯಕ್ಷ ಡಾ. ಬಸವರಾಜ ಕುಬಕಡ್ಡಿ ಮಾತನಾಡಿ, ರಾಷ್ಟ್ರೀಯತೆಯ ವಿಚಾರದ ಪ್ರತಿಪಾದನೆ ಹಾಗೂ ಏಕರೂಪದ ಗುಣಮಟ್ಟ ಶಿಕ್ಷಣದ ವಿಚಾರಧಾರೆಗೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೇಂದ್ರ ಸರ್ಕಾರ ರೂಪಿಸಿದೆ. ಅದನ್ನು ಕೇವಲ ರಾಜಕೀಯ ಕಾರಣಕ್ಕೆ ಕೆಲವೊಂದು ರಾಜ್ಯ ಸರ್ಕಾರಗಳು ವಿರೋಧಿಸಿ ಪರ್ಯಾಯ ಶಿಕ್ಷಣ ನೀತಿ ರೂಪಿಸಲು ಮುಂದಾಗಿರುವ ಕ್ರಮ ಸರಿಯಲ್ಲ. ಪಠ್ಯಕ್ರಮದಲ್ಲಿ ರಾಷ್ಟ್ರೀಯತೆಯ ವಿಚಾರಗಳನ್ನು ಅಳವಡಿಸಬೇಕು ಎಂದರು.
ಎಬಿವಿಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಅಶೀಷ್ ಚವಾಣ್, ವಿದ್ಯಾರ್ಥಿ ಹಿತ, ರಾಷ್ಟ್ರೀಯ ಹಿತವೇ ಎಬಿವಿಪಿಯ ಮುಖ್ಯ ಉದ್ದೇಶ. ಈ ವಿಷಯವನ್ನು ಈ ಹಿಂದೆ ಎಬಿವಿಪಿ ರಾಷ್ಟ್ರೀಯ ಸಮ್ಮೇಳನಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರೇ ಹೆಮ್ಮೆಯಿಂದ ಪ್ರತಿಪಾದಿಸಿ ಎಬಿವಿಪಿ ಧ್ಯೇಯವನ್ನು ಶ್ಲಾಘಿಸಿದ್ದರು ಎಂದು ಅವರು ಉಲ್ಲೆಖಿಸಿದರಲ್ಲದೆ, ಲೇಹ್, ಲಡಾಕ್ ಸೇರಿ ಎಲ್ಲೆಡೆ ಎಬಿವಿಪಿ ಘಟಕಗಳಿವೆ. ನವದೆಹಲಿ, ಗುವಾಹಟಿ, ಚಂಡೀಗಢ ಸೇರಿ ಅನೇಕ ವಿಶ್ವವಿದ್ಯಾಲಯದಲ್ಲಿ ಎಬಿವಿಪಿ ನಾಯಕರು ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಎಬಿವಿಪಿ ಸಂಘಟನೆಯು ವಿದ್ಯಾರ್ಥಿ ಪರವಾಗಿ ಪ್ರತಿಭಟನೆ, ಹೋರಾಟದ ಜತೆಗೆ ಹಲವು ಬಾರಿ ನ್ಯಾಯಾಲಯದ ಮೆಟ್ಟಿಲು ಏರಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವ ಕಾರ್ಯ ಮಾಡಿದೆ ಎಂದು ತಿಳಿಸಿದರು.
ಎಬಿವಿಪಿ ರಾಜ್ಯ ಕಾರ್ಯದರ್ಶಿ ದರ್ಶನ ಹೆಗಡೆ, ಪ್ರಾಂತ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ವಿಕಾಸ ದರಬಾರ, ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ, ಉದ್ಯಮಿ ರಾಜು ಬಿಜ್ಜರಗಿ, ಸುಮಂಗಲಾ ಆಡ್ಯಾಳ, ವಿ.ಪ. ಮಾಜಿ ಸದಸ್ಯ ಅರುಣ ಶಹಾಪೂರ, ಶೀಲಾ ಬಿರಾದಾರ, ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸವರಾಜ್ ಕೌಲಗಿ, ಉದ್ಯಮಿ ಶಾಂತೇಶ ಕಳಸಗೊಂಡ ಮತ್ತಿತರರಿದ್ದರು.
ಎಬಿವಿಪಿ ರಾಜ್ಯ ಉಪಾಧ್ಯಕ್ಷೆ ಸುಮಾ ಬೋಳರೆಡ್ಡಿ ಸ್ವಾಗತಿಸಿದರು. ಎಬಿವಿಪಿ ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ನಿರೂಪಿಸಿದರು. ರಾಜು ಬಿಜ್ಜರಗಿ ವಂದಿಸಿದರು.
ಅಬ್ಬಕ್ಕ, ಚನ್ನಮ್ಮ ಪ್ರದರ್ಶಿನಿ ಉದ್ಘಾಟನೆ
ವಿಜಯಪುರ : ನಗರದ ರಾಣಿ ಚನ್ನಮ್ಮ ಸಭಾ ಭವನದಲ್ಲಿ ಎಬಿವಿಪಿಯ 45ನೇ ಪ್ರಾಂತ ಸಮ್ಮೇಳನದಂಗವಾಗಿ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ವೀರರಾಣಿ ಅಬ್ಬಕ್ಕ ಹಾಗೂ ಕಿತ್ತೂರು ರಾಣಿ ಚನ್ನಮ್ಮ ಪ್ರದರ್ಶಿನಿಯನ್ನು ಜ್ಞಾನಯೋಗಾಶ್ರಮದ ಅಧ್ಯಕ್ಷ ಗುರುಗಳಾದ ಬಸವಲಿಂಗ ಮಹಾಸ್ವಾಮೀಜಿ ಉದ್ಘಾಟಿಸಿದರು.ನಂತರ ಆಶೀರ್ವಚನ ನೀಡಿದ ಶ್ರೀಗಳು, ವಿದ್ಯಾರ್ಥಿಗಳಿಗೆ ಸಮಸ್ಯೆ ಬಂದಾಗ ಹಲವು ಕಡೆ ಎಬಿವಿಪಿ ಹೋರಾಟಗಳನ್ನು ನಿರ್ಮಿಸಿ ಪರಿಹಾರ ಹುಡುಕಿಕೊಟ್ಟ ನಿದರ್ಶನಗಳನ್ನು ನಾನು ಸ್ವತಃ ಕೇಳಿದ್ದೇನೆ. ಅಂತಹ ಉತ್ತಮ ಕಾರ್ಯವನ್ನು ಎಬಿವಿಪಿ ಮಾಡುತ್ತಿದೆ ಎಂದರು. ಎಬಿವಿಪಿಯ ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ, ರಾಜ್ಯ ಉಪಾಧ್ಯಕ್ಷೆ ಸುಮಾ ಬೋಳರಡ್ಡಿ, ರಾಜ್ಯ ಸಹ ಕಾರ್ಯದರ್ಶಿ ಸುಜ್ಞತಾ ಕುಲಕರ್ಣಿ ಮತ್ತಿತರರಿದ್ದರು.