ಇಂಡಿ ತಾಲೂಕಿನ ಬಂಥನಾಳದ ಗ್ರಾಮದ ವೃಷಭ ಲಿಂಗೇಶ್ವರ ಮಠದಲ್ಲಿ ನಡೆದ ಎರಡನೇ ಜಾನಪದ ಸಾಹಿತ್ಯ ಸಮ್ಮೇಳನವನ್ನು ಗಣ್ಯರು, ಶ್ರೀಗಳು ಉದ್ಘಾಟಿಸಿದರು. ಮುರುಘೇಂದ್ರ ಶಿವಾಚಾರ್ಯರು, ಡಾ. ಜಾನಪದ ಎಸ್. ಬಾಲಾಜಿ, ಕೆ.ಎಸ್. ಕೌಜಲಗಿ ಮತ್ತಿತರರಿದ್ದಾರೆ. 
ವಿಜಯಪುರ

ಜಾನಪದ ಮುಂದಿನ ಪೀಳಿಗೆಗೆ ಪರಿಚಯಿಸಿ

ಪ್ರಮುಖ ಮುಖ್ಯಾಂಶಗಳು

  • ಮುರುಘೇಂದ್ರ ಶಿವಾಚಾರ್ಯರ ಅಭಿಮತ
  • ಎರಡನೇ ತಾಲೂಕು ಸಾಹಿತ್ಯ ಸಮ್ಮೇಳನ ಆಯೋಜನೆ
ಇಂಡಿ: ಜಾನಪದ ಸಾಹಿತ್ಯವೆಂಬುದು ಸಾಹಿತ್ಯದ ತಾಯಿ ಬೇರಾಗಿದೆ. ಅದನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ, ಉಳಿಸಿ ಬೆಳೆಸುವ ಕಾರ್ಯ ನಿರಂತರವಾಗಿ ನಡೆಯಬೇಕಿದೆ ಎಂದು ಶಿರಶ್ಯಾಡದ ಅಭಿನವ ಮುರುಘೇಂದ್ರ ಶಿವಾಚಾರ್ಯರು ಹೇಳಿದರು.
ತಾಲೂಕಿನ ಬಂಥನಾಳ ಗ್ರಾಮದ ವೃಷಭಲಿಂಗೇಶ್ವರ ಮಠದಲ್ಲಿ ತಾಲೂಕು ಜಾನಪದ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಎರಡನೇ ಜಾನಪದ ಸಾಹಿತ್ಯ ಸಮ್ಮೇಳನದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿ, ಸಂಸ್ಕೃತಿ, ಕಲೆ, ಸಾಹಿತ್ಯ, ನೃತ್ಯ, ಕರಡಿ ಮಜಲು, ನಂದಿಕೋಲು ಕುಣಿತ, ಕೃಷ್ಣ ಪಾರಿಜಾತ ಬಯಲಾಟ, ದೊಡ್ಡಾಟ, ಯಕ್ಷಗಾನ ವಿವಿಧ ಜಾನಪದ ಸಾಹಿತ್ಯ ಶ್ರೀಮಂತಗೊಳಿಸಿವೆ ಎಂದರು.
ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಡಾ. ಜಾನಪದ ಎಸ್. ಬಾಲಾಜಿ ಮಾತನಾಡಿ, ಜಾನಪದದಲ್ಲಿ ಪಾರಂಪರಿಕ ಜ್ಞಾನ ಜೀವನದ ಮೌಲ್ಯಗಳು, ಸಂಸ್ಕೃತಿ, ಸಂಸ್ಕಾರಗಳು ಅಡಗಿವೆ. ಜಾನಪದ ಕಲೆ ಹಾಗೂ ಕಲಾವಿದರ ಸಂರಕ್ಷಣೆಗೋಸ್ಕರವೇ ಕನ್ನಡ ಜಾನಪದ ಪರಿಷತ್ ಉದಯವಾಗಿದೆ ಎಂದು ತಿಳಿಸಿದರು.
ಜಾನಪದ ಸಂಘಟನೆ ಕಾರ್ಯದರ್ಶಿ ಕೆ.ಎಸ್. ಕೌಜಲಗಿ ಮಾತನಾಡಿ, ಜಾನಪದ ಗೀತೆಗಳು ಅತ್ಯಂತ ವೈವಿಧ್ಯಮಯವಾಗಿ ಕನ್ನಡ ನಾಡಿನ ವಿವಿಧ ಪ್ರದೇಶಗಳ ಪ್ರಾದೇಶಿಕ ಸೊಗಡುಗಳನ್ನು ನಮ್ಮ ಮುಂದಿನ ಪೀಳಿಗೆಗೆ ಮುಂದುವರಿಸುವುದು ಅವಶ್ಯ ಎಂದರು.
ಬಂಥನಾಳ ಮಠದ ವೃಷಭಲಿಂಗ ಮಹಾಸ್ವಾಮೀಜಿಗಳು ಆಶೀರ್ವಚನ ನೀಡಿ, ಜಾನಪದ ಬೆಸೆಯುವ ಕೆಲಸ ಮಾಡುತ್ತದೆ. ಪಾಶ್ಚಾತ್ಯ ಸಂಸ್ಕೃತಿ ಬೇರ್ಪಡಿಸುತ್ತದೆ. ಜನರ ಮಾತುಗಳಲ್ಲಿನ ದೈನಂದಿನ ಶಬ್ದಗಳಿಂದಲೇ ಜಾನಪದ ಉದಯವಾಗಿದ್ದು, ಜಾನಪದ ಎಂದಿಗೂ ಶ್ರೀಮಂತವಾಗಿರಬೇಕೆಂದರೆ ಎಲ್ಲರೂ ಜಾನಪದಕ್ಕೆ ಮಹತ್ವ ನೀಡಬೇಕು ಎಂದರು.
ಸಮ್ಮೇಳನದ ಸರ್ವಾಧ್ಯಕ್ಷ ಚಿದಾನಂದ ಗೌಡಗಾವಿ, ತಾಲೂಕು ಅಧ್ಯಕ್ಷ ಪಂಡಿತ ಅವಜಿ, ಸರಸಂಬಿ ಶಿಕ್ಷಕರು, ಜಟ್ಟೆಪ್ಪ ಮಾದರ, ಡಾ. ರಮೇಶ ಕತ್ತಿ, ಎಸ್.ಎಂ. ಉಪ್ಪಾರ, ಮಹಿಳಾ ಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಶೈಲಜಾ ತೆಲ್ಲೂರ, ಹೇಮಾ ಹಿರೇಮಠ, ಬಿ.ಸಿ. ಭಗವಂತಗೌಡರ, ಜೆ.ಎಸ್. ಬೆಣ್ಣೆ, ದಾನಮ್ಮ ಹಿರೇಪಟ್ಟ ಮಾತನಾಡಿದರು.
ಎತ್ತಿನ ಬಂಡೆಯ ಮೇಲೆ ಮೆರವಣಿಗೆ, ಅರ್ಜುಣಗಿ, ಆಲಮೇಲ, ಮಾಶ್ಯಾಳ ಗ್ರಾಮಗಳ ಕೌಂಸಾಳೆ ಮತ್ತು ತಮಟೆ ವಾದ್ಯ, ಸಂಗೋಗಿ ಗ್ರಾಮದ ಡೊಳ್ಳು, ಕರಡಿ ಮಜಲು, ಭಜನೆ ಮಂಡಳಿ, ಸಿದ್ದಮ್ಮ ಗೌಡತಿ ಮನಗೂಳಿ ಅವರ ಜೋಗತಿ ನೃತ್ಯ, ಮಹಾಲಕ್ಷ್ಮೀ ವಾಲಗ ಮೇಳ ಹೀಗೆ ಅನೇಕ ಕಲಾ ತಂಡಗಳು ಪಾಲ್ಗೊಂಡಿದ್ದವು.
ಪರಮ ಪೂಜ್ಯ ವೃಷಭಲಿಂಗ ಶ್ರೀಗಳನ್ನು ಜಾನಪದ ವೇದಿಕೆ ವತಿಯಿಂದ ಸನ್ಮಾನಿಸಲಾಯಿತು.