ನೂತನ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸಂಬಂಧಿಸಿದಂತೆ ಅಗತ್ಯ ಪ್ರಕ್ರಿಯೆಗಳಿಗಾಗಿ ನೇಮಕಗೊಂಡಿರುವ ವಿಶೇಷ ಅಧಿಕಾರಿ ಡಾ. ರಾಜಶೇಖರ ದ್ಯಾಬೇರಿ ವಿಜಯಪುರ ನಗರದ ಜಿಲ್ಲಾಸ್ಪತ್ರೆಗೆ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದರು. ಶಿವಾನಂದ ಮಾಸ್ತಿಹೊಳಿ, ಸಂದೀಪ ಸಜ್ಜನ ಮತ್ತಿತರರಿದ್ದಾರೆ.
- ವಿಶೇಷ ಅಧಿಕಾರಿ ಡಾ. ರಾಜಶೇಖರ ದ್ಯಾಬೇರಿ ಭೇಟಿ ವೈದ್ಯಾಧಿಕಾರಿಗಳೊಂದಿಗೆ ಸಮಾಲೋಚನೆ
- ನೂತನ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸಂಬಂಧಿಸಿದಂತೆ
ವಿಜಯಪುರ: ಜಿಲ್ಲೆಯಲ್ಲಿ ನೂತನ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸಂಬಂಧಿಸಿದಂತೆ ಅಗತ್ಯ ಪ್ರಕ್ರಿಯೆಗಳಿಗಾಗಿ ನೇಮಕಗೊಂಡಿರುವ ವಿಶೇಷ ಅಧಿಕಾರಿ ಡಾ. ರಾಜಶೇಖರ ದ್ಯಾಬೇರಿ ಶುಕ್ರವಾರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ವೈದ್ಯಾಧಿಕಾರಿಗಳೊಂದಿಗೆ ಸಮಾಲೋಚಿಸಿ ಪರಿಶೀಲನೆ ನಡೆಸಿದರು.
ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್‌ಎಂಸಿ) ನಿಯಮಾವಳಿಗಳನ್ವಯ ಕಾಲೇಜು ಸ್ಥಾಪನೆಗೆ ಅಗತ್ಯ ಭೂಮಿ, ಕಟ್ಟಡ, ಬೋಧನಾ ಆಸ್ಪತ್ರೆ ಹಾಗೂ ಇತರೆ ಶಾಸನಬದ್ಧ ಅವಶ್ಯಕತೆಗಳು ಸೇರಿ ಮಹತ್ವದ ಮಾಹಿತಿ ಪಡೆದುಕೊಂಡರು. ಅಲ್ಲದೆ, ಜಿಲ್ಲಾಸ್ಪತ್ರೆ ಆವರಣದಲ್ಲಿರುವ ವಿವಿಧ ಹಳೆಯ ಕಟ್ಟಡಗಳು ಹಾಗೂ ಪ್ರಗತಿಯಲ್ಲಿರುವ ಹೊಸ ಕಟ್ಟಡ ಕಾಮಗಾರಿಗಳನ್ನು ಖುದ್ದಾಗಿ ವೀಕ್ಷಿಸಿ, ಲಭ್ಯವಿರುವ ಮೂಲ ಸೌಕರ್ಯಗಳನ್ನು ಪರಿಶೀಲಿಸಿದರು.
ಬಳಿಕ ಜಿಲ್ಲಾ ಶಸ್ತ್ರ ಚಿಕಿತ್ಸಕರ ಕೊಠಡಿಯಲ್ಲಿ ನಡೆದ ಸಭೆಯಲ್ಲಿ, ವೈದ್ಯಕೀಯ ಕಾಲೇಜಿಗೆ ಅತ್ಯಗತ್ಯವಾಗಿ ಬೇಕಾಗುವ ಮಾನವ ಸಂಪನ್ಮೂಲಗಳ ವಿವರಗಳು, ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್‌ಎಚ್‌ಎಂ ಮತ್ತು ಡಿಎನ್‌ಬಿ) ಕೋರ್ಸ್‌ಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಪಡೆದುಕೊಂಡರು.
ಜಿಲ್ಲಾಸ್ಪತ್ರೆಯಡಿ ಕಾರ್ಯನಿರ್ವಹಿಸುತ್ತಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆ (ಎಂಸಿಎಚ್), ಸೂಪರ್ ಸ್ಪೆಷಾಲಿಟಿ ವಿಭಾಗ ಹಾಗೂ ಟ್ರಾಮಾ ಕೇರ್ ಕೇಂದ್ರಗಳ ವೈದ್ಯಕೀಯ ವ್ಯವಸ್ಥೆ ಮತ್ತು ಅಲ್ಲಿ ಮಂಜೂರಾಗಿರುವ ಸಿಬ್ಬಂದಿ ವರ್ಗದ ಕುರಿತು ವಿವರವಾದ ಚರ್ಚೆ ನಡೆಸಿದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಶಿವಾನಂದ ಮಾಸ್ತಿಹೊಳಿ, ಹಿರಿಯ ಅರವಳಿಕೆ ಶಾಸ್ತ್ರಜ್ಞ ಸಂದೀಪ ಸಜ್ಜನ, ಹಿರಿಯ ತಜ್ಞ ವೈದ್ಯರಾದ ಹರೀಶ ಪೂಜಾರಿ, ರಾಜಕುಮಾರ ಹಿರೇಮಠ, ಸಿದ್ದಗೊಂಡಪ್ಪ ಹಾವಿನಾಳ, ಸಹಾಯಕ ಅಭಿಯಂತರ ಮಹೇಶ ಜಾಧವ, ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಎ.ಎ. ಸಿಂದಗಿಕರ ಮತ್ತಿತರರಿದ್ದರು.