ವಿಜಯಪುರ ನಗರದ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದ ಸಭಾಭವನದಲ್ಲಿ ಸಚಿವ ಎಂ.ಬಿ.ಪಾಟೀಲ ಸುದ್ದಿಗೋಷ್ಠಿ ನಡೆಸಿದರು. ಜಿಲ್ಲಾಧಿಕಾರಿ ಡಾ.ಆನಂದ ಕೆ, ಸಿಇಒ ರಿಷಿ ಆನಂದ, ಎಸ್‌ಪಿ ಲಕ್ಷ್ಮಣ ನಿಂಬರಗಿ ಇದ್ದಾರೆ.
- ವರ್ಷದೊಳಗೆ ವಿಮಾನ ಹಾರಾಟ
- ಮಾರ್ಚ್ ಅಂತ್ಯಕ್ಕೆ ನವರಸಪುರ ಉತ್ಸವ
- ಪ್ರಮುಖ ಕೈಗಾರಿಕೆಗಳ ಸ್ಥಾಪನೆಗೆ ಕ್ರಮ
- ಉದ್ಯೋಗವಕಾಶ ಹೆಚ್ಚಿಸಲು ದಿಟ್ಟ ನಿರ್ಧಾರ
- ಎಲ್‌ಬಿಎಸ್ ಅಣೆಕಟ್ಟೆ ಎತ್ತರ ಹೆಚ್ಚಳ
- ಆರು ತಿಂಗಳಿಗೊಮ್ಮೆ ಜನತಾದರ್ಶನ
ವಿಜಯಪುರ: ರಾಜಸ್ಥಾನದ ಜೈಸಲ್ಮೇರ್ ನಂತರದ ಭೀಕರ ಬರ ಪೀಡಿತ ಪ್ರದೇಶ ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದ ವಿಜಯಪುರ ಜಿಲ್ಲೆಯ ಸಮಗ್ರ ಅಭಿವೃದ್ಧಿ ಹಾಗೂ ಸರ್ವಾಂಗೀಣ ಪ್ರಗತಿಗೆ ಶ್ರಮ ವಹಿಸಲಾಗುತ್ತಿದೆ. 2013-18ರ ಅವಧಿಯಲ್ಲಿ ಸುಮಾರು 14 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನೀರಾವರಿ ಯೋಜನೆಗಳಿಗೆ ಚಾಲನೆ ನೀಡಿದ್ದು, ಇದೀಗ ಪ್ರಮುಖ ಕೈಗಾರಿಕೆಗಳನ್ನು ಸ್ಥಾಪಿಸಿ ದುಡಿಯುವ ಕೈಗಳಿಗೆ ಉದ್ಯೋಗವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ತಿಳಿಸಿದರು.
ನೀರಾವರಿ ಮಂತ್ರಿಯಾಗಿದ್ದಾಗ ಮುಳವಾಡ, ಚಿಮ್ಮಲಗಿ, ಪೀರಾಪುರ-ಬೂದಿಹಾಳ ಹೀಗೆ ಅನೇಕ ನೀರಾವರಿ ಯೋಜನೆಗಳ ಮೂಲಕ ಜಿಲ್ಲೆಯನ್ನು ಸಮಗ್ರ ನೀರಾವರಿಗೆ ಒಳಪಡಿಸಲಾಗಿದೆ. ಪರಿಣಾಮ ಭೂಮಿ ಬೆಲೆ ಹೆಚ್ಚಾಗಿದೆ. ಪ್ರತಿ ಎಕರೆ ಭೂಮಿ ಬೆಲೆ ಕನಿಷ್ಠ 20-25 ಲಕ್ಷ ರೂಪಾಯಿ ನಿಗದಿಯಾಗಿದೆ. ರೈತರು ಪ್ರತಿ ವರ್ಷ ಎಕರೆಗೆ 1 ಲಕ್ಷ ರೂಪಾಯಿ ಆದಾಯ ತೆಗೆಯುತ್ತಿದ್ದಾರೆ. ಇದೀಗ ನೀರಾವರಿ ಜೊತೆಗೆ ಕೈಗಾರಿಕೆ ಕ್ಷೇತ್ರ ಅಭಿವೃದ್ಧಿಗೂ ಸಾಕಷ್ಟು ಯೋಜನೆ ರೂಪಿಸುತ್ತಿರುವುದಾಗಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಐತಿಹಾಸಿಕ ನಿರ್ಣಯ
2010ರಲ್ಲಿ ಕೃಷ್ಣಾ ನ್ಯಾಯಾಧೀಕರಣದ ತೀರ್ಪು ಹೊರಬಿದ್ದರೂ ಈವರೆಗೂ ಗೆಜೆಟ್ ನೋಟಿಫಿಕೇಶನ್ ಆಗದ ಹಿನ್ನೆಲೆ ಆಲಮಟ್ಟಿ ಅಣೆಕಟ್ಟೆ ಎತ್ತರ ಹೆಚ್ಚಳ ಮರೀಚಿಕೆಯಾಗಿದೆ. ಸಿದ್ದರಾಮಯ್ಯ ಸರ್ಕಾರ ಆಲಮಟ್ಟಿ ಅಣೆಕಟ್ಟೆ ಎತ್ತರ ಹೆಚ್ಚಿಸಿ ಜಿಲ್ಲೆಯ ಪಾಲಿನ ನೀರು ಬಳಸಿಕೊಳ್ಳಲು ಸತತ ಪ್ರಯತ್ನ ನಡೆಸಿದೆ. ಮುಳುಗಡೆ ಸಂತ್ರಸ್ಥರ ನೀರಾವರಿ ಜಮೀನಿಗೆ ರೂ.40 ಲಕ್ಷ ರೂಪಾಯಿ ಸೇರಿದಂತೆ ಕಾಲುವೆ ಜಾಲ, ಒಣಭೂಮಿ ಮತ್ತಿತರ ಪರಿಹಾರ ಯೋಜನೆಯಡಿ 40 ಸಾವಿರ ಕೋಟಿ ರೂ. ಖರ್ಚು ಮಾಡುವ ಐತಿಹಾಸಿಕ ನಿರ್ಣಯ ಕೈಗೊಳ್ಳಲಾಗಿದೆ. ಬಾಕಿ 20 ಹಳ್ಳಿಗಳ ಸ್ಥಳಾಂತರಕ್ಕೆ ಪರ್ಯಾಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಜಿಲ್ಲೆಯ ಸಮಗ್ರ ಅಭಿವೃದ್ಧಿ
ಜಿಲ್ಲೆಯಲ್ಲಿ ತಾಂಡಾಗಳನ್ನು ಕಂದಾಯ ಗ್ರಾಮ ಎಂದು ಘೋಷಿಸಿ ಹಕ್ಕು ಪತ್ರ ನೀಡಲಾಗುತ್ತಿದೆ. ಎಸ್‌ಎಸಿ-ಎಸ್‌ಟಿ ವಸತಿ ನಿಲಯ, ಅಲ್ಪಸಂಖ್ಯಾತ ವಸತಿ ಶಾಲೆ, ಕಿಡ್ಸ್ ಶಾಲೆ, ಜಿಲ್ಲಾಡಳಿತ ಭವನ ನಿರ್ಮಾಣ, ಸೈಕ್ಲಿಂಗ್ ವೆಲೊಡ್ರೋಮ್ ಲೋಕಾರ್ಪಣೆ ಸೇರಿ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. ಸಿಎಸ್‌ಆರ್ ಅನುದಾನದಡಿ ಸೈಕ್ಲಿಂಗ್ ಅಕಾಡೆಮಿ, ಸೈಕ್ಲಿಂಗ್ ಹಾಸ್ಟೆಲ್ ನಿರ್ಮಾಣಕ್ಕೂ ಕ್ರಮ ಕೈಗೊಳ್ಳಲಾಗುತ್ತಿದೆ. ದಾವೋಸ್‌ನಲ್ಲಿ ಸುಮಾರು 50-60 ಕಂಪನಿ ಜೊತೆ ಮಾತುಕತೆಯಾಗಿದೆ. ನನ್ನ ಅವಧಿಯಲ್ಲಿ ಪ್ರಮುಖ ಕೈಗಾರಿಕೆ ಸ್ಥಾಪಿಸಲಾಗುವುದು. ಜನರಿಗೆ ಉದ್ಯೋಗವಕಾಶ ಕಲ್ಪಿಸಲಾಗುವುದು. ನೀರಾವರಿ ಜೊತೆ ಕೈಗಾರಿಕೆ ಕ್ರಾಂತಿಯೂ ಆಗಲಿದೆ. ಜಿಲ್ಲೆಯಲ್ಲಿ ಉದ್ಯೋಗ ಮೇಳ ಆಯೋಜಿಸಿದ್ದು, ಯುವ ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದ ಸಚಿವರು, ನಿಂತು ಹೋಗಿರುವ ಜನತಾ ದರ್ಶನ ಪುನಾರಂಭಿಸಲಾಗುವುದು. ಪ್ರತಿ ಆರು ತಿಂಗಳಿಗೊಮ್ಮೆಯಾದರೂ ಆಯೋಜಿಸಲು ನಿರ್ಧಾರ ಕೈಗೊಳ್ಳಲಾಗುವುದು.
ವರ್ಷದೊಳಗೆ ವಿಮಾನ ನಿಲ್ದಾಣ ಆರಂಭ
ಪರಿಸರ ಇಲಾಖೆಯ ಅನುಮತಿ ಪಡೆಯದ ಕಾರಣ ವಿಮಾನ ನಿಲ್ದಾಣ ಲೋಕಾರ್ಪಣೆಗೆ ಹಿನ್ನಡೆಯಾಯಿತು. ಸಾಕಷ್ಟು ಶ್ರಮ ವಹಿಸಿದ ಪರಿಣಾಮ ಗಂಡಾಂತರದಿಂದ ಪಾರಾಗಿದ್ದು, ಶೀಘ್ರದಲ್ಲೇ ವಿಮಾನಗಳ ಹಾರಾಟ ಆರಂಭಗೊಳ್ಳಲಿದೆ. ಮುಖ್ಯಮಂತ್ರಿಗಳು ಸಹ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಹಸಿರು, ಅರಣ್ಯ, ಪರಿಸರ ಇಲಾಖೆ ಸಚಿವರಿಗೂ ಮನವಿ ಸಲ್ಲಿಸಲಾಗಿದೆ. ಐದಾರು ತಿಂಗಳಲ್ಲಿ ಕೇಂದ್ರದಿಂದ ಸ್ಪಂದನೆ ಸಿಗುವ ವಿಶ್ವಾಸವಿದೆ. ಅದಾದ ನಾಲ್ಕೈದು ತಿಂಗಳಲ್ಲಿ ವಿಮಾನ ನಿಲ್ದಾಣ ಲೋಕಾರ್ಪಣೆಗೊಳ್ಳಲಿದೆ. ಮೂಲ ಯೋಜನೆ ಮಾರ್ಪಡಿಸಿ ನೈಟ್ ಲ್ಯಾಂಡಿಂಗ್, ಏರ್‌ಬಸ್ ಮತ್ತಿತರ ಸೌಕರ್ಯಕ್ಕೆ ಆದ್ಯತೆ ನೀಡಲಾಗಿದೆ. ಆಸ್ಟ್ರೀಯಾದಿಂದ ಸುಮಾರು 24 ಕೋಟಿ ರೂಪಾಯಿ ವೆಚ್ಚದ ಅಗ್ನಿಶಾಮಕ ವಾಹನಗಳು ಬಂದಿವೆ. ಇದೊಂದು ರಾಜ್ಯದ ಮಾದರಿ ವಿಮಾನ ನಿಲ್ದಾಣವಾಗಲಿದೆ ಎಂದು ಸಚಿವ ಎಂ.ಬಿ. ಪಾಟೀಲ ಹೆಮ್ಮೆ ವ್ಯಕ್ತಪಡಿಸಿದರು.
ನವರಸಪುರ ಉತ್ಸವ ಆಚರಣೆ
ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ನವರಸಪುರ ಉತ್ಸವ ಆಚರಣೆಗೆ ನಿರ್ಧಾರ ಕೈಗೊಳ್ಳಲಾಗಿದ್ದು, ಮಾರ್ಚ್ ಅಂತ್ಯಕ್ಕೆ ಉತ್ಸವ ಆಚರಣೆಗೊಳ್ಳಲಿದೆ. ಈಗಾಗಲೇ ಈ ನಿಟ್ಟಿನಲ್ಲಿ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ಈ ಹಿಂದಿನ ಆಚರಣೆಗೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕಲು, ಅದರಂತೆಯೇ ಯೋಜನೆ ರೂಪಿಸಲು ತಿಳಿಸಲಾಗಿದೆ ಎಂದು ಸಚಿವ ಎಂ.ಬಿ. ಪಾಟೀಲ ಪ್ರತಿಕ್ರಿಯಿಸಿದರು.
ಈ ಹಿಂದೆ ವಿಶಿಷ್ಟವಾಗಿ ಉತ್ಸವ ಆಚರಿಸಲಾಗಿತ್ತು. ಪ್ರಥಮ ಬಾರಿಗೆ ಸಂಗೀತ ಮಹಲ್‌ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಬಾರಿಯೂ ಅರ್ಥಪೂರ್ಣವಾಗಿ ಉತ್ಸವ ಮಾಡಲು ಕ್ರಮ ಕೈಗೊಳ್ಳಲಾಗುವುದು. ರಾಷ್ಟ್ರ, ರಾಜ್ಯ ಹಾಗೂ ಜಿಲ್ಲಾ ಮಟ್ಟದ ಕಲಾವಿದರಿಗೂ ಆದ್ಯತೆ ನೀಡಲಾಗುವುದು. ಪರೀಕ್ಷಾ ಅವಧಿ ನೋಡಿಕೊಂಡು ದಿನಾಂಕ ನಿಗದಿಗೊಳಿಸಲು ಸಚಿವರು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.