ಇಂಡಿ ನಗರದ ಉಪನೋಂದಣಾಧಿಕಾರಿಗಳ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಕಡತಗಳನ್ನು ಪರಿಶೀಲಿಸಿದರು.
- ಇಂಡಿ ನಗರದಲ್ಲಿ ದಿಢೀರ್ ದಾಳಿ
- ರೂ. 50 ಸಾವಿರ ಹೆಚ್ಚುವರಿ ಹಣ ಪತ್ತೆ
- ಐವರನ್ನು ವಶಕ್ಕೆ ಪಡೆದು ವಿಚಾರಣೆ
ವಿಜಯವಾಣಿ ಸುದ್ದಿಜಾಲ ಇಂಡಿ: ಕಳೆದ ಹಲವು ದಿನಗಳಿಂದ ತೀವ್ರ ಚರ್ಚೆಯಲ್ಲಿದ್ದ ಇಂಡಿ ಉಪ ನೋಂದಣಾಧಿಕಾರಿ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ಬುಧವಾರ ದಿಢೀರ್ ದಾಳಿ ನಡೆಸಿದ್ದು, ಈ ವೇಳೆ ರೂ. 50 ಸಾವಿರ ಹೆಚ್ಚುವರಿ ನಗದು ಪತ್ತೆಯಾಗಿದೆ.
ನಗರದ ಉಪನೋಂದಣಾಧಿಕಾರಿ ಮತ್ತು ವಿವಾಹ ನೋಂದಣಾಧಿಕಾರಿಗಳ ಕಚೇರಿಯ ಮೇಲೆ ಲೋಕಾಯುಕ್ತ ಅಧಿಕಾರಿಗಳ ಭ್ರಷ್ಟಾಚಾರ ನಿಗ್ರಹ ದಳವು ದಿಢೀರ್ ದಾಳಿ ನಡೆಸಿದೆ. ಬಾಂಡ್ ರೈಟರ್ಸ್ ಹಾಗೂ ಏಜೆಂಟರಾಗಿ ಕೆಲಸ ಮಾಡುತ್ತಿದ್ದ 5 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಕಡತಗಳ ಪರಿಶೀಲನೆ
ಕಚೇರಿಯಲ್ಲಿದ್ದ ಪ್ರಮುಖ ಕಡತಗಳು ಹಾಗೂ ಏಜೆಂಟ್‌ಗಳ ವ್ಯವಹಾರಗಳ ದಾಖಲೆಗಳನ್ನು ಅಧಿಕಾರಿಗಳು ತೀವ್ರ ಪರಿಶೀಲನೆಗೆ ಒಳಪಡಿಸಿದ್ದಾರೆ. ಕಾರ್ಯಾಚರಣೆ ನಡೆಸಿದ ತಂಡ ಲೋಕಾಯುಕ್ತ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಈ ಭ್ರಷ್ಟಾಚಾರ ವಿರೋಧಿ ಜಂಟಿ ದಾಳಿಯನ್ನು ನಡೆಸಿದ್ದಾಗಿ ತಿಳಿಸಿದೆ.
ಲೋಕಾಯುಕ್ತ ಎಸ್.ಪಿ ಟಿ. ಮಲ್ಲೇಶಿ, ಡಿವೈಎಸ್‌ಪಿ ಮಲ್ಲಿಕಾರ್ಜುನ ತುಳಸಿಗೇರಿ, ಸಿಪಿಐ ಆನಂದ ಠಕ್ಕಣ್ಣನವರ, ಆನಂದ ಡೋಣಿ, ಸಾರ್ವಜನಿಕರಿಂದ ಬಂದ ದೂರುಗಳು ಹಾಗೂ ಕಚೇರಿಯಲ್ಲಿ ನಡೆಯುತ್ತಿದ್ದ ಲಂಚಾವತಾರದ ಖಚಿತ ಮಾಹಿತಿ ಆಧರಿಸಿ ಈ ದಾಳಿ ನಡೆಸಲಾಗಿದ್ದು, ಸದ್ಯ ಕಚೇರಿಯಲ್ಲಿ ತನಿಖೆ ಮುಂದುವರೆದಿದ್ದು ತನಿಖೆ ಮುಗಿದ ನಂತರ ಮಾಹಿತಿ ನೀಡುವುದಾಗಿ ಎಸ್.ಪಿ ಟಿ. ಮಲ್ಲೇಶಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಬೆಳಕು ಚೆಲ್ಲಿತ್ತು ವಿಜಯವಾಣಿ ವರದಿ
ಉಪನೋಂದಣಾಧಿಕಾರಿಗಳ ಕಾರ್ಯಾಲಯದಲ್ಲಿ ನಡೆಯುತ್ತಿರುವ ಅಕ್ರಮ ಹಾಗೂ ಭ್ರಷ್ಟಾಚಾರಗಳಿಗೆ ಸಂಬಂಧಿಸಿದಂತೆ ‘ವಿಜಯವಾಣಿ’ ಬೆಳಕು ಚೆಲ್ಲುವ ಪ್ರಯತ್ನ ಮಾಡಿತ್ತು. ಸ್ಥಾನಿಕ ಪರಿಶೀಲನೆ ಹಾಗೂ ಸಾರ್ವಜನಿಕರ ಆರೋಪದ ಮೇರೆಗೆ ಏ.17ರಂದು ‘ಏಜೆಂಟರ ಹಾವಳಿಗೆ ರೈತರು ಹೈರಾಣ, ನೀರಾವರಿ ಜಮೀನಿಗೆ ಒಣ ಬೇಸಾಯದ ಮೌಲ್ಯ ಎಂಬ’ ಶಿರೋನಾಮೆಯಡಿ ನಿರಂತರ ವರದಿ ಪ್ರಕಟಿಸಲಾಗಿತ್ತು. ಮುಂದುವರಿದ ಭಾಗವಾಗಿ ಲೋಕಾಯುಕ್ತ ದಾಳಿ ನಡೆದಿದೆ.