ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ವಿಜಯಪುರದಲ್ಲಿ ಆಶಾ ಕಾರ್ಯಕರ್ತೆಯರು ಪ್ರತಿಭಟನಾ ಮೆರವಣಿಗೆ ನಡೆಸಿದರು. ನಿರ್ಮಲಾ ಬೀರಬ್ಬಿ, ಸುಮಂಗಲಾ ಪಡಸಲಗಿ, ಗೀತಾ ಬಂಗಾರತಾಳ ಮತ್ತಿತರರಿದ್ದರು. 
ವಿಜಯಪುರ

ಆಶಾ ಕಾರ್ಯಕರ್ತೆಯರ ಗೌರವ ಧನ ಹೆಚ್ಚಿಸಿ

ಪ್ರಮುಖ ಮುಖ್ಯಾಂಶಗಳು

  • ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ
  • ಜಿಲ್ಲಾಧಿಕಾರಿಗೆ ಮನವಿ
ವಿಜಯಪುರ: ಕೇಂದ್ರ ಸರ್ಕಾರದ ಪ್ರೋತ್ಸಾಹ ಧನದ ಜತೆಗೆ ರಾಜ್ಯ ಸರ್ಕಾರದ ಗೌರವ ಧನ ಒಟ್ಟಿಗೆ ಸೇರಿಸಿ ಮಾಸಿಕ 15,000 ರೂ. ಗೌರವ ಧನ ನೀಡುವುದು ಸೇರಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ಮೆರವಣಿಗೆ ನಡೆಸಿದರು.
ಶುಕ್ರವಾರ ನಗರದ ಡಾ. ಅಂಬೇಡ್ಕರ್ ವೃತ್ತದ ಬಳಿ ಸೇರಿದ ಅಪಾರ ಆಶಾ ಕಾರ್ಯಕರ್ತೆಯರು ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು.
ಆಶಾ ಸಂಘಟನೆಯ ಜಿಲ್ಲಾ ಸಂಚಾಲಕ ಎಚ್.ಟಿ. ಭರತಕುಮಾರ ಮಾತನಾಡಿ, 2025ರ ಜನವರಿಯಲ್ಲಿ ನಡೆದ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಹೋರಾಟದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಕಾರ್ಯಕರ್ತೆಯರಿಗೆ ಮಾಸಿಕ ಗ್ಯಾರಂಟಿ ಕನಿಷ್ಠ 10,000 ರೂ. ಭರವಸೆ ನೀಡಿದ್ದರು. ಆದರೆ ಅದು ಇವತ್ತಿನವರೆಗೂ ಈಡೇರಿಸಿಲ್ಲ. ಅಲ್ಲದೇ, 2025ರ ಮಾರ್ಚ್ ಬಜೆಟ್‌ನಲ್ಲಿ ರಾಜ್ಯ ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರಿಗೆ 1,000 ರೂ. ಹೆಚ್ಚಳ ಮಾಡುವುದಾಗಿ ಹೇಳಿದ್ದರೂ ಸಹ ಆಶಾ ಕಾರ್ಯಕರ್ತೆಯರಿಗೆ ಮಾತ್ರ ಹೆಚ್ಚಳ ಮಾಡಲೇ ಇಲ್ಲ. ಜತೆಗೆ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿರುವಂತೆ ಈಗಿರುವ 5,000 ರೂ. ಗೌರವಧನ 8,000 ರೂ. ಏರಿಸುವುದಾಗಿ ಹೇಳಿದ್ದು ಕೂಡ ಅಧಿಕಾರಕ್ಕೆ ಬಂದ ನಂತರ ಅದನ್ನೂ ಮರೆತಿದ್ದಾರೆ. ರಾಜ್ಯ ಸರ್ಕಾರ ಮುಂಬರುವ ಬಜೆಟ್‌ನಲ್ಲಿ ಆಶಾ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಅಂಬಿಕಾ ಒಳಸಂಗ ಮಾತನಾಡಿ, ಆಶಾ ಸುಗಮಕಾರರನ್ನು ಕೈ ಬಿಟ್ಟಿರುವುದು ಕೇಂದ್ರದ ಮಾರ್ಗಸೂಚಿಗೆ ವಿರುದ್ಧವಾಗಿದೆ. ಆಶಾ ಮೇಲ್ವಿಚಾರಕರಾಗಿ ಹತ್ತು ವರ್ಷಗಳಿಂದ ಕಾರ್ಯನಿರ್ವಹಿಸಿದ ಸುಗಮಕಾರರನ್ನು ಮತ್ತೆ ಮರು ನೇಮಕ ಮಾಡುವ ಭರವಸೆ ನೀಡಿ ಇಲ್ಲಿಯವರೆಗೆ ಇವರನ್ನು ಮರುನೇಮಕ ಮಾಡಿಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ, ಕೂಡಲೇ ಈ ಸಮಸ್ಯೆಯನ್ನು ಬಗೆಹರಿಸಬೇಕೆಂದು ಒತ್ತಾಯಿಸಿದರು.
ಆಶಾ ಕಾರ್ಯಕರ್ತೆಯರಾದ ನಿರ್ಮಲಾ ಬೀರಬ್ಬಿ, ಸುಮಂಗಲಾ ಪಡಸಲಗಿ, ಗೀತಾ ಬಂಗಾರತಾಳ, ಜ್ಯೋತಿ, ಮೈರುನ್ನಿಸಾ, ಲಕ್ಷ್ಮೀ ಸಿಮಿಕೇರಿ, ಮಲ್ಲಮ್ಮ ಕಂಠಿ, ತುಳಸಿ ಹತ್ತರಕಿಹಾಳ, ಕನ್ಯಾಕುಮಾರಿ ಮತ್ತಿತರರಿದ್ದರು.