ವಿಜಯಪುರ

ಪಠ್ಯದಲ್ಲಿ ತುರ್ತುಪರಿಸ್ಥಿತಿಯ ಕರಾಳ ಇತಿಹಾಸವನ್ನೂ ಸೇರಿಸಿ; ಸಂಸದ ರಮೇಶ ಜಿಗಜಿಣಗಿ ಪ್ರತಿಕ್ರಿಯೆ

ಕಾಂಗ್ರೆಸ್‌ನಿಂದಲೇ ಸಂವಿಧಾನದ ಆಶಯಕ್ಕೆ ಕೊಡಲಿ ಪೆಟ್ಟು * ಸಿಎಂ ಡಿಕೆ-ಎಐಸಿಸಿ ಅಧ್ಯಕ್ಷ ಎಂಕೆ ಹೇಳಿಕೆಗೆ ಟಾಂಗ್

ವಿಜಯಪುರ: ‘ಬಿಜೆಪಿ ಮತ್ತು ಆರ್‌ಎಸ್‌ಎಸ್ ಸೇರಿ ಸಂವಿಧಾನ ದುರ್ಬಲಗೊಳಿಸುವ ಪ್ರಯತ್ನದಲ್ಲಿ ತೊಡಗಿವೆ ಎನ್ನುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯಾಗಲಿ, ಪಠ್ಯದಲ್ಲಿ ಸಂವಿಧಾನವನ್ನು ಅಳವಡಿಸುವ ಕುರಿತು ಮಾತನಾಡುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಾಗಲಿ ಮೊದಲು ಸಂವಿಧಾನದ ಆಶಯಗಳಿಗೆ ವಿರುದ್ಧವಾದ ತುರ್ತು ಪರಿಸ್ಥಿತಿಯನ್ನು ಹೇರಿದ್ದು ಯಾರು? ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಟಾಂಗ್ ನೀಡಿದ್ದಾರೆ.

‘ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಪಠ್ಯಪುಸ್ತಕದಲ್ಲಿ ಸಂವಿಧಾನ ಅಳವಡಿಸುವುದರ ಜೊತೆಗೆ 1975ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಹೇರಿದ ತುರ್ತುಪರಿಸ್ಥಿತಿಯ ಕರಾಳ ಇತಿಹಾಸವನ್ನೂ ಸೇರಿಸಲಿ. ಆ ಸಂದರ್ಭದಲ್ಲಿ ನಾಗರಿಕರ ಮೂಲಭೂತ ಹಕ್ಕುಗಳನ್ನು ನಿರ್ಬಂಧಿಸಿದ್ದು, ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕಿದ್ದು, ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತಂದಿದ್ದು ಸೇರಿದಂತೆ ದೇಶ ಎದುರಿಸಿದ ಸಾಂವಿಧಾನಿಕ ಬಿಕ್ಕಟ್ಟಿನ ಸಂಪೂರ್ಣ ಚಿತ್ರಣ ವಿದ್ಯಾರ್ಥಿಗಳಿಗೆ ತಿಳಿಸುವ ಪ್ರಯತ್ನ ಮಾಡಲಿ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

‘ಸಂವಿಧಾನದ ಪ್ರತಿ ಹಿಡಿದು ಸಾರ್ವಜನಿಕವಾಗಿ ಪ್ರದರ್ಶನ ಮಾಡುವ ರಾಹುಲ್ ಗಾಂಧಿ ಅವರ ಕುಟುಂಬದ ರಾಜಕೀಯ ಪರಂಪರೆಯೇ ತುರ್ತುಪರಿಸ್ಥಿತಿಯ ಕರಾಳ ಅಧ್ಯಾಯಕ್ಕೆ ಸಾಕ್ಷಿಯಾಗಿದೆ. ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕಿ, ಪ್ರತಿಪಕ್ಷ ನಾಯಕರನ್ನು ಜೈಲಿಗೆ ಕಳುಹಿಸಿ, ಸಾಂವಿಧಾನಿಕ ಸಂಸ್ಥೆಗಳ ಸ್ವಾಯತ್ತತೆಗೆ ಧಕ್ಕೆ ತಂದ ಇತಿಹಾಸವನ್ನು ಕಾಂಗ್ರೆಸ್ ನಾಯಕರು ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದಿದ್ದಾರೆ.

‘ಮಾತೆತ್ತಿದರೆ ಸಮಾನತೆ, ಸಾಮಾಜಿಕ ನ್ಯಾಯ ಎಂದು ಭಾಷಣ ಮಾಡುವ ಕಾಂಗ್ರೆಸ್ ನಾಯಕರು ಮಹಿಳಾ ಮೀಸಲು ಮಸೂದೆಗೆ ಅಡ್ಡಿಪಡಿಸುತ್ತಿದ್ದಾರೆ. ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸುವ ವಿಚಾರದಲ್ಲಿ ಕೇವಲ ಭಾಷಣಗಳಿಗೆ ಸೀಮಿತವಾಗದೆ, ಮೀಸಲಾತಿಯ ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರಧಾನಿ ಮೋದಿ ನಿರ್ಧಾರವನ್ನು ಬೆಂಬಲಿಸಲಿ ನೋಡೋಣ’ ಎಂದು ಸವಾಲೆಸೆದಿದ್ದಾರೆ.

‘ಇನ್ನು ಅಹಿಂದ ವರ್ಗದ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿಲುವು ಕೂಡ ಅಚ್ಚರಿ ಮೂಡಿಸುತ್ತದೆ. ಅಧಿಕಾರದಲ್ಲಿದ್ದಾಗ ಅಹಿಂದ ವರ್ಗಕ್ಕೆ ನ್ಯಾಯ ಕಲ್ಪಿಸಿರುವುದಾಗಿ ಹೇಳಿಕೊಳ್ಳುವ ಅವರು, ಅಧಿಕಾರದ ರಾಜಕೀಯ ಅನಿಶ್ಚಿತತೆ ಎದುರಾದಾಗ ಸಂವಿಧಾನ ಮತ್ತು ಅಹಿಂದದ ಹೆಸರಿನಲ್ಲಿ ಮತ್ತೆ ರಾಜಕೀಯ ಚರ್ಚೆ ಆರಂಭಿಸಿರುವುದು ಜನರಿಗೆ ಅರ್ಥವಾಗದ ಸಂಗತಿಯೇನಲ್ಲ. ದೇಶದಲ್ಲಿ ಸಂವಿಧಾನದ ರಕ್ಷಣೆಯಾಗಿದ್ದರೆ ಮತ್ತು ಸಂವಿಧಾನದ ಆಶಯಗಳು ಇನ್ನೂ ಜೀವಂತವಾಗಿದ್ದರೆ ಅದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಮಾತ್ರ’ಎಂದು ಸಂಸದ ರಮೇಶ ಜಿಗಜಿಣಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.