ಸಿಂದಗಿ ನಗರದ ಆರ್.ಬಿ.ಬೂದಿಹಾಳ ಕ್ರೀಡಾಂಗಣದಲ್ಲಿ ಜರುಗಿದ ಅಂತರ ಮಹಾವಿದ್ಯಾಲಯಗಳ ಖೋ-ಖೋ ತಂಡಗಳ ಆಯ್ಕೆ ಪಂದ್ಯಾವಳಿಯಲ್ಲಿ ವಿಜೇತ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ತಂಡಕ್ಕೆ ಶಾಸಕ ಅಶೋಕ ಮನಗೂಳಿ ಟ್ರೋಫಿ ವಿತರಿಸಿದರು. ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಡಾ.ವಿಶ್ವನಾಥ ನಡಕಟ್ಟಿ, ಮಹಾಂತೇಶ ಲಾಯದಗುಂದಿ, ಶಿವಪ್ರಸಾದ ಎಲಿ ಮತ್ತಿತರರಿದ್ದರು.
- ಶಾಸಕ ಮನಗೂಳಿ ಹೇಳಿಕೆ
- ಅಕ್ಕಮಹಾದೇವಿ ಮಹಿಳಾ ವಿವಿ ಚಾಂಪಿಯನ್
ಸಿಂದಗಿ: ವಿದ್ಯಾರ್ಥಿಗಳು ಪಠ್ಯದ ಜತೆಗೆ ಕ್ರೀಡಾಸಕ್ತಿ ಬೆಳೆಸಿಕೊಳ್ಳಬೇಕು. ಕ್ರೀಡೆಯಿಂದ ನಮ್ಮ ಮಾನಸಿಕ, ದೈಹಿಕ ಆರೋಗ್ಯ ಪರಿಪೂರ್ಣವಾಗಿರುತ್ತದೆ. ಎಲ್ಲರಿಗೂ ಶಿಕ್ಷಣದೊಂದಿಗೆ ಕ್ರೀಡಾಕ್ಷೇತ್ರದಲ್ಲೂ ಸಾಧನೆ ತೋರಲು ಅವಕಾಶವಿದೆ ಪಠ್ಯದೊಂದಿಗೆ ಆಟವೂ ಮುಖ್ಯ. ಈ ದಿಸೆಯಲ್ಲಿ ವಿದ್ಯಾರ್ಥಿಗಳು ಸ್ಪರ್ಧಾ ಸ್ಫೂರ್ತಿ ಪಡೆಯಬೇಕು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ನಗರದ ಆರ್.ಬಿ.ಬೂದಿಹಾಳ ಕ್ರೀಡಾಂಗಣದಲ್ಲಿ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಹಾಗೂ ಪದ್ಮರಾಜ ಮಹಿಳಾ ಪದವಿ ಕಾಲೇಜುಗಳ ಸಹಯೋಗದಲ್ಲಿ ಭಾನುವಾರ ಜರುಗಿದ ಅಂತರ್ ಕಾಲೇಜ್‌ಗಳ ಖೋ-ಖೋ ಫೈನಲ್ ಪಂದ್ಯಾವಳಿಯ ಚಾಂಪಿಯನ್ ತಂಡಕ್ಕೆ ಟ್ರೋಫಿ ವಿತರಿಸಿ ಮಾತನಾಡಿದರು.
ಸಾನ್ನಿಧ್ಯವಹಿಸಿದ್ದ ಸಾರಂಗಮಠ-ಗಚ್ಚಿನಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಆಶೀರ್ವಚನ ನೀಡಿದರು.
ಅಕ್ಕಮಹಾದೇವಿ ಮಹಿಳಾ ವಿವಿಯ ದೈಹಿಕ ನಿರ್ದೇಶನಾಲಯದ ಎಡಿ ಡಾ.ವಿಶ್ವನಾಥ ನಡಕಟ್ಟಿ, ಆಯ್ಕೆ ಸಮಿತಿಯ ಮಹಾಂತೇಶ ಲಾಯದಗುಂದಿ, ಶಿವಪ್ರಸಾದ ಎಲಿ, ರಾಜಶೇಖರ ಕೂಚಬಾಳ ಮತ್ತಿತರರು ಮಾತನಾಡಿದರು.
ಶನಿವಾರ ನಡೆದ ಆಯ್ಕೆ ಪಂದ್ಯಾವಳಿಯಲ್ಲಿ ಸೆಮಿಪೈನಲ್‌ನಲ್ಲಿ ಎದುರಾಳಿಗಳಾಗಿದ್ದ ರಾಣೆಬೆನ್ನೂರಿನ ಕೆ.ಎಲ್.ಇ ಹಾಗೂ ಕರ್ನಾಟಕ ಅಕ್ಕ ಮಹಾದೇವಿ ವಿಶ್ವವಿದ್ಯಾಲಯದ ತಂಡಗಳು ಫೈನಲ್ ಪಂದ್ಯದಲ್ಲಿ ಎದುರುಗೊಂಡಿದ್ದವು. ವಿಜಯಪುರದ ಅಕ್ಕಮಹಾದೇವಿ ವಿವಿಯ ತಂಡ ಪ್ರಥಮ ಸ್ಥಾನ ಪಡೆದರೆ, ರಾಣೆಬೆನ್ನೂರಿನ ಕೆ.ಎಲ್.ಇ.ರಾಜರಾಜೇಶ್ವರಿ ಮಹಿಳಾ ಪದವಿ ಕಾಲೇಜ್ ದ್ವಿತೀಯ ಸ್ಥಾನಕ್ಕೆ ತೃಪ್ತಿಗೊಂಡಿತು.
ಕೆ.ಎಚ್.ಸೋಮಾಪೂರ, ಡಾ. ರವಿ ಗೋಲಾ, ಪ್ರಾಚಾರ್ಯ ಭೀಮನಗೌಡ ಸಿಂಗನಳ್ಳಿ, ವಿ.ಡಿ.ಪಾಟೀಲ, ಸಿದ್ಧಲಿಂಗ ಚೌಧರಿ, ದೈಹಿಕ ನಿರ್ದೇಶಕ ಗವಿಸಿದ್ದಪ್ಪ ಆನೆಗುಂದಿ, ಎಂ.ಕೆ. ಬಿರಾದಾರ, ಎಂ.ಎಂ ಕೆಂಭಾವಿ, ಜಿ.ಎಸ್.ಕುಲಕರ್ಣಿ, ಎಸ್.ಎಸ್.ಕಲಶೆಟ್ಟಿ, ಯು.ಸಿ.ಪೂಜೇರಿ, ಮಹಾಂತೇಶ ನೂಲಾನವರ, ಎಸ್.ಸಿ.ದುದ್ದಗಿ, ಎ.ಆರ್.ರಜಪೂತ, ಎಂ.ಕೆ.ಬಿರಾದಾರ ಮತ್ತಿತರರಿದ್ದರು.