ಮುದ್ದೇಬಿಹಾಳ ತಾಲೂಕಿನ ಚವನಭಾವಿ, ಅಡವಿ ಸೋಮನಾಳ, ಅಡವಿ ಹುಲಗಬಾಳ, ಡೊಂಕಮಡು ಗ್ರಾಮಗಳಲ್ಲಿ ಜನಸಂಪರ್ಕ ಸಭೆಯಲ್ಲಿ ಗ್ರಾಮಸ್ಥರ ಅಹವಾಲುಗಳನ್ನು ಶಾಸಕ ಸಿ.ಎಸ್. ನಾಡಗೌಡ ಸ್ವೀಕರಿಸಿ ಮಾತಮಾಡಿದರು. ಶಿವಶಂಕರಗೌಡ ಹಿರೇಗೌಡರ, ಪಂಚ ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ, ಉಪಾಧ್ಯಕ್ಷ ಲಕ್ಷ್ಮಣ ಚವಾಣ್, ಸದಸ್ಯರಾದ ಸಂಗು ಚಲವಾದಿ ಮತ್ತಿತರರಿದ್ದಾರೆ.
- ಸಿ.ಎಸ್. ನಾಡಗೌಡರಿಂದ ಗ್ರಾಮಸ್ಥರ ಅಹವಾಲು ಸ್ವೀಕಾರ
- ಗ್ರಾಮದ ಪ್ರತಿ ಮನೆಗೆ ಶಾಸಕರು ಭೇಟಿ
ಮುದ್ದೇಬಿಹಾಳ: ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದ ಸರ್ಕಾರ. ಅಧಿಕಾರಕ್ಕೆ ಬಂದ ಕೇವಲ 11 ದಿನಗಳಲ್ಲೇ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಜನ ಸಾಮಾನ್ಯರ ಆರ್ಥಿಕ ಸಬಲೀಕರಣಕ್ಕೆ ಶ್ರಮಿಸುತ್ತಿದೆ ಎಂದು ಕರ್ನಾಟಕ ಸಾಬೂನು, ಮಾರ್ಜಕ ನಿಗಮದ ಅಧ್ಯಕ್ಷ, ಶಾಸಕ ಸಿ.ಎಸ್. ನಾಡಗೌಡ (ಅಪ್ಪಾಜಿ) ಹೇಳಿದರು.
ತಾಲೂಕಿನ ಅಡವಿ ಗ್ರಾ.ಪಂ. ವ್ಯಾಪ್ತಿಯ ಚವನಭಾವಿ, ಅಡವಿ ಸೋಮನಾಳ, ಅಡವಿ ಹುಲಗಬಾಳ, ಡೊಂಕಮಡು ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜನ ಸಂಪರ್ಕ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಭೆಗೂ ಮುನ್ನ ಶಾಸಕರು ಗ್ರಾಮದ ಪ್ರತಿ ಮನೆಗೆ ಭೇಟಿ ನೀಡಿ, ಗ್ಯಾರಂಟಿ ಯೋಜನೆಗಳ ಲಾಭ ತಲುಪುತ್ತಿದೆಯೇ ಎಂದು ವಿಚಾರಿಸಿದರು.
ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿದ ಅವರು, ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ, ಯುವನಿಧಿ ಯೋಜನೆಗಳು ಬಡವರ ಪರವಾಗಿವೆ. ಯೋಜನೆಗಳಿಂದ ಪ್ರತಿ ಕುಟುಂಬಕ್ಕೆ ವಾರ್ಷಿಕ ಸುಮಾರು 70 ಸಾವಿರದಿಂದ 1 ಲಕ್ಷ ರೂ. ವರೆಗೆ ನೇರ ಆರ್ಥಿಕ ನೆರವು ಸಿಗುತ್ತಿದೆ. ಇದು ಜನರ ಜೀವನ ಮಟ್ಟ ಸುಧಾರಿಸಿದೆ ಎಂದರು.
ಜನ ಸಂಪರ್ಕ ಸಭೆಯಲ್ಲಿ ಗ್ರಾಮಸ್ಥರು ಸಲ್ಲಿಸಿದ ಅಹವಾಲುಗಳಿಗೆ ಶಾಸಕರು ತಕ್ಷಣವೇ ಸ್ಪಂದಿಸಿದರು.
ನೀರಾವರಿ ಸಮಸ್ಯೆ : ಎಲ್.ಬಿ.ಸಿ. ಕಾಲುವೆ ನೀರು ಸರಿಯಾಗಿ ತಲುಪುತ್ತಿಲ್ಲ ಎಂಬ ರೈತರ ದೂರಿಗೆ ಸ್ಪಂದಿಸಿದ ಶಾಸಕರು, ಸ್ಥಳದಲ್ಲೇ ಕೆಬಿಜೆಎನ್‌ಎಲ್ ಅಧಿಕಾರಿಗಳಿಗೆ ಕರೆ ಮಾಡಿ ಸಮಸ್ಯೆ ಸರಿಪಡಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದರಲ್ಲದೆ ಸಾರ್ವಜನಿಕರ ಆರೋಪದಂತೆ ಈ ಭಾಗದಲ್ಲಿ ಸುಮಾರು 30 ಮನೆಗಳ ಮೇಲೆ ಹಾದು ಹೋಗಿರುವ ಅಪಾಯಕಾರಿ ವಿದ್ಯುತ್ ತಂತಿಗಳು, ಹಳೆಯ ಟಿಸಿ ಕಂಬಗಳನ್ನು ತೆರವುಗೊಳಿಸಲು ಹೆಸ್ಕಾಂ ಅಧಿಕಾರಿ ಪಿ.ಡಿ. ಗುರಡ್ಡಿ ಅವರಿಗೆ ಸೂಚಿಸಿದರು.
ಚವನಭಾವಿಯಿಂದ ಬಂಡೇಶ್ವರ ಮಠದವರೆಗೆ ರಸ್ತೆ, ಸೇತುವೆ ನಿರ್ಮಾಣದ ಬೇಡಿಕೆಗೆ ಉತ್ತರಿಸಿದ ಅವರು, `ಸೇತುವೆ ಈಗಾಗಲೇ ಮಂಜೂರಾಗಿದೆ, ಶೀಘ್ರದಲ್ಲೇ ರಸ್ತೆ ಕಾಮಗಾರಿ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.
ಪಂಚ ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ ಮಾತನಾಡಿ, ಗ್ರಾಮಗಳಲ್ಲಿ ರಂಗೋಲಿ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.
ಒಂದು ವೇಳೆ ಯಾರಿಗಾದರೂ ಯೋಜನೆಗಳ ಲಾಭ ದೊರೆಯದಿದ್ದರೆ ಕೂಡಲೇ ಮುದ್ದೇಬಿಹಾಳದ ತಾಪಂ ಕಚೇರಿ ಸಂಪರ್ಕಿಸಬೇಕು ಎಂದು ಮನವಿ ಮಾಡಿದರು.
ಪಂಚ ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ, ಉಪಾಧ್ಯಕ್ಷ ಲಕ್ಷ್ಮಣ ಚವಾಣ್, ಸದಸ್ಯರಾದ ಸಂಗು ಚಲವಾದಿ, ಸ್ವರಸ್ವತಿ ಪೀರಾಪೂರ, ಸುಜಾತಾ ಸಿಂದೆ, ಹಣಮಂತ ಕುರಿ, ಬಸವರಾಜ ಚೀನಿವಾರ, ರಾಮಣ್ಣ ರಾಜನಾಳ, ಬಿಇಒ ಬಿ.ಎಸ್. ಸಾವಳಗಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂ.ಎಂ. ಬೆಲಗಲ್ಲ, ತಾ.ಪಂ. ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಕೋರಿ, ಆರ್.ಎಸ್. ಹಿರೇಗೌಡರ, ಸಮಾಜ ಕಲ್ಯಾಣ ಅಧಿಕಾರಿ ಬಸಂತಿ ಮಠ, ಶಿವಾನಂದ ಮೇಟಿ, ಎಸ್.ಬಿ. ತಿವಾರಿ, ಕೆಬಿಜೆಎನ್‌ಎಲ್ ಆಲಮಟ್ಟಿ ಅಧಿಕಾರಿ ಎ.ಯು. ಬಾಗವಾನ, ಬಿ.ಎಂ. ಸಾತಿಹಾಳ, ಎಸಿಡಿಪಿಒ ಶರಣಮ್ಮ ದೇಸಾಯಿ, ಅಂಗನವಾಡಿ ಮೇಲ್ವಿಚಾರಕಿ ಶಾರದಾ ಪೂಜಾರಿ, ಪಿಡಿಒ ನಿರ್ಮಲಾ ತೋಟದ, ಕಾರ್ಯದರ್ಶಿ ಬಸನಗೌಡ ಬಿರಾದಾರ, ನಾಲತವಾಡ ಶಾಖಾ ಹೆಸ್ಕಾಂ ಅಧಿಕಾರಿ ಪಿ.ಡಿ. ಗುರಡ್ಡಿ, ಕಂದಾಯ ನಿರೀಕ್ಷಕ ವೆಂಕಟೇಶ್ ಅಂಬಿಗೇರ, ಗ್ರಾಮ ಆಡಳಿತಾಧಿಕಾರಿ ಶಿವಶರಣ ಕುಂಬಾರ ಮತ್ತಿತರರಿದ್ದರು.