- ದಾವಣಗೆರೆ-ಬಾಗಲಕೋಟೆ ಉಪ ಚುನಾವಣೆ
- ಕಾಂಗ್ರೆಸ್ ಅಭ್ಯರ್ಥಿಗಳ ಭರ್ಜರಿ ಗೆಲುವು
- ಸಿದ್ದರಾಮಯ್ಯ ಸರ್ಕಾರದ ಆಡಳಿತಕ್ಕೆ ಸಂದ ಜಯ
ವಿಜಯಪುರ: ದಾವಣಗೆರೆ ಹಾಗೂ ಬಾಗಲಕೋಟೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸುತ್ತಿದ್ದಂತೆ ಮತ ಎಣಿಕೆ ಪೂರ್ವ ನೀಡಿದ ‘ಚಾಪೆ ಸುತ್ತಿಕೊಂಡು ಹೋಗುವ’ ಹೇಳಿಕೆಯನ್ನು ಸಚಿವ ಎಂ.ಬಿ. ಪಾಟೀಲ ಸ್ಮರಿಸಿಕೊಂಡಿದ್ದಾರೆ.
ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ ಎಂದು ಮೊದಲೇ ಹೇಳಿದ್ದೆ, ದಾವಣಗೆರೆ ಮತ್ತು ಬಾಗಲಕೋಟೆ ಎರಡರಲ್ಲೂ ಗೆಲುವು ಕಟ್ಟಿಟ್ಟ ಬುತ್ತಿ, ಆ ಬಳಿಕ ‘ಇಬ್ಬರು ಚಾಪಿ ಸುತ್ತಿಕೊಂಡು ಹೋಗುವುದು ಖಚಿತ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳರನ್ನುದ್ದೇಶಿಸಿ ಆಡಿದ ಮಾತು ನೆನಪಿಸಿಕೊಂಡಿದ್ದಾರೆ.
ಚುನಾವಣೆ ಪೂರ್ವ ನೀಡಿದ ಹೇಳಿಕೆ ನಿಜವಾಗಿದೆ. ವಿಜಯೇಂದ್ರ, ಯತ್ನಾಳ ಎಲ್ಲರೂ ಸೋತಂತಾಗಿದೆ. ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಉತ್ತಮವಾಗಿ ಆಡಳಿತ ನಡೆಸುತ್ತಿದೆ. ಹೀಗಾಗಿ ವಿಜಯೇಂದ್ರ ಆದಿಯಾಗಿ ಎಲ್ಲ ಘಟಾನುಘಟಿಗಳು ಎರಡೂ ಮತಕ್ಷೇತ್ರಗಳಲ್ಲಿ ಠಿಕಾಣಿ ಹೂಡಿದ್ದರೂ ಗೆಲ್ಲಲಾಗಿಲ್ಲ. ಯತ್ನಾಳ ಸಹ ಪ್ರಚಾರ ಮಾಡಿದ್ದರು, ಆದರೆ ಕೊನೆಗೆ ಏನಾಯ್ತು? ಅಲ್ಲಿ ನಾವು ಗೆಲ್ಲುತ್ತೇವೆ ಎಂದು ಆಗಲೇ ಹೇಳಿದ್ದೆ, ಈಗ ಅದು ನಿಜವಾಗಿದೆ, ಎರಡೂ ಕ್ಷೇತ್ರದಲ್ಲಿ ಮತದಾರರು ನಮ್ಮ ಕೈ ಹಿಡಿದಿದ್ದಾರೆ ಎಂದರು.
ಪಶ್ಚಿಮ ಬಂಗಾಳದಲ್ಲಿ ಆಡಳಿತ ವಿರೋಧಿ ಅಲೆ ಬಿಜೆಪಿಗೆ ವರವಾಗಿದೆ, ತಮಿಳುನಾಡಿನಲ್ಲಿಯೂ ಹೊಸ ರಾಜಕೀಯ ಪಕ್ಷಕ್ಕೆ ಜನರು ಅಧಿಕಾರ ನೀಡಿದ್ದಾರೆ, ಜನತೆಯ ತೀರ್ಪಿಗಂತೂ ನಾವು ಗೌರವಿಸಲೇಬೇಕು ಎಂದು ಡಾ.ಎಂ.ಬಿ. ಪಾಟೀಲ ಪ್ರತಿಕ್ರಿಯಿಸಿದರು.